ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಧೈರ್ಯ ತುಂಬಿದ ಪ್ರಧಾನಿ

Last Updated 30 ಮೇ 2022, 9:12 IST
ಅಕ್ಷರ ಗಾತ್ರ

ಕಲಬುರಗಿ: ‘ಹೆತ್ತ ತಂದೆ–ತಾಯಿಯ ಪ್ರೀತಿ ಮತ್ತು ಕಾಳಜಿಯನ್ನು ಯಾರಿಂದಲೂ ನೀಡಲು ಸಾಧ್ಯವಿಲ್ಲವಾದರೂ ತಾಯಿ ಭಾರತಾಂಬೆ ನಿಮ್ಮೊಂದಿಗಿದ್ದಾಳೆ. ಪಿ.ಎಂ. ಕೇರ್ಸ್ ಯೋಜನೆ ಮೂಲಕ ನಿಮ್ಮ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ’ಎನ್ನುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಮಕ್ಕಳಿಗೆ ಧೈರ್ಯ ತುಂಬಿದರು.

ಕೋವಿಡ್‌ನಿಂದ ತಂದೆ–ತಾಯಿಯನ್ನು ಕಳೆದುಕೊಂಡ 18 ವರ್ಷದೊಳಗಿನ ಮಕ್ಕಳೊಂದಿಗೆ ದೆಹಲಿಯಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಸೋಮವಾರ ಅವರು ಸಂವಾದ ನಡೆಸಿದರು.

ಕಲಬುರಗಿಯ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸಂವಾದಕ್ಕೆ ವ್ಯವಸ್ಥೆ ಮಾಡಲಾಗಿತ್ತು.

‘ಸಂಕಷ್ಟದ ದಿನಗಳನ್ನು ಎದುರಿಸಿ ಬಂದಿರುವ ನಿಮ್ಮ ಧೈರ್ಯಕ್ಕೆ ನಾನು ಸೆಲ್ಯೂಟ್ ಹೊಡೆಯುವೆ. ನಿಮ್ಮ ಕನಸನ್ನು ಸಾಕಾರಗೊಳಿಸಲು ಪಿ.ಎಂ.ಕೇರ್ಸ್‌ ಪ್ರಯತ್ನಿಸಲಿದೆ. ಇಡೀ ದೇಶ, ದೇಶದ ಸಂವೇದನೆ ನಿಮ್ಮೊಂದಿಗೆ’ ಎಂದು ಮಕ್ಕಳಿಗೆ ಅಭಯ ನೀಡಿದರು.

‘ಈಗಾಗಲೆ ಮಕ್ಕಳ ಮನೆ ಹತ್ತಿರವಿರುವ ಸರ್ಕಾರಿ ಅಥವಾ ಖಾಸಗಿ ಶಾಲೆಗೆ ಶಿಕ್ಷಣಕ್ಕೆ ಪ್ರವೇಶ ಕಲ್ಪಿಸಲಾಗಿದೆ. ಶಿಕ್ಷಣಕ್ಕೆ ಬೇಕಾದ ಪುಸ್ತಕ, ಬಟ್ಟೆ ಇನ್ನಿತರ ಖರ್ಚು ಸಹ ಸರ್ಕಾರ ನೋಡಿಕೊಳ್ಳಲಿದೆ. ಉನ್ನತ ಶಿಕ್ಷಣದ ಜೊತೆಗೆ ಶೈಕ್ಷಣಿಕ ಸಾಲಕ್ಕೂ ಪಿ.ಎಂ. ಕೇರ್ ನೆರವಾಗಲಿದೆ. ₹ 5 ಲಕ್ಷದವರೆಗಿನ ಉಚಿತ ಚಿಕಿತ್ಸೆಯ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ನೀಡಲಾಗುತ್ತಿದೆ. ಮಕ್ಕಳ ಹೆಸರ ಮೇಲೆ ಅಂಚೆ ಬ್ಯಾಂಕ್‌ನಲ್ಲಿ ಇಡಲಾಗುವ ಇಡಗಂಟಿನ ಮೇಲೆ ಲಭ್ಯವಾಗುವ ಬಡ್ಡಿಯನ್ನು 18 ರಿಂದ 23 ವಯಸ್ಸಿನ ಅವಧಿಯಲ್ಲಿ ಪ್ರತಿ ತಿಂಗಳುಸ್ಟೈಫಂಡ್ ರೂಪದಲ್ಲಿ ಖರ್ಚಿಗೆ ಹಣ ನೀಡಲಾಗುವುದು. 23 ವರ್ಷದ ನಂತರ ಮುಂದಿನ ಭವಿಷ್ಯಕ್ಕೆ ₹ 10 ಲಕ್ಷ ಆರ್ಥಿಕ ನೆರವು ನೀಡಲಾಗುವುದು. ಮಾಸಿಕ ₹ 2 ಸಾವಿರ ಆರ್ಥಿಕ ಸೌಲಭ್ಯವನ್ನು 2021–22ನೇ ಸಾಲಿನಿಂದ ಜಾರಿಗೊಳಿಸಿದ್ದು, 18 ವರ್ಷದೊಳಗಿನ ಮಕ್ಕಳಿಗೆ ಗರಿಷ್ಠ 3 ವರ್ಷ ಅಥವಾ 18 ವರ್ಷದವರೆಗೆ (ಇದರಲ್ಲಿ ಯಾವುದು ಮೊದಲೋ ಅಲ್ಲಿಯ ವರೆಗೆ) ಇದು ಸಿಗಲಿದೆ’ ಎಂದು ಪಿ.ಎಂ. ಕೇರ್ಸ್‌ ಯೋಜನೆಗಳ ಕುರಿತು ವಿವರಿಸಿದರು.

ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಮೋದಿ ಅವರು 1ರಿಂದ 12 ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಆನ್‌ಲೈನ್‌ ಮೂಲಕ ಸ್ಕಾಲರ್‌ಶಿಪ್ ಹಣ ವರ್ಗಾವಣೆಗೊಳಿಸಿದರು.

ಇದಕ್ಕೂ ಮುನ್ನ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಮಾತನಾಡಿ, ‘ದೇಶದಲ್ಲಿ ಕೋವಿಡ್‌ನಿಂದ ಹೆತ್ತವರನ್ನು ಕಳೆದಕೊಂಡ 4,345 ಮಕ್ಕಳ ರಕ್ಷಣೆಯ ಜವಬ್ದಾರಿಯನ್ನು ಸರ್ಕಾರ ವಹಿಸಿಕೊಂಡಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನವೀನ್ ಯು., ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶರಣಬಸಪ್ಪ ಬೆಳಗುಂಪಿ, ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಭರತೇಶ ಶೀಲವಂತ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ.ಯಲ್ಲಾಲಿಂಗ ಕಾಳನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT