ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಭೇಟಿ: ಭರದ ಸಿದ್ಧತೆ- ವಿವಿಧ ಜಿಲ್ಲೆಗಳಿಂದ 4 ಲಕ್ಷ ಜನ ಸೇರಿಸುವ ಗುರಿ

ಹಕ್ಕುಪತ್ರ ವಿತರಣಾ ಕಾರ್ಯಕ್ರಮ; ವಿವಿಧ ಜಿಲ್ಲೆಗಳಿಂದ 4 ಲಕ್ಷ ಜನ ಸೇರಿಸುವ ಗುರಿ
Last Updated 17 ಜನವರಿ 2023, 7:16 IST
ಅಕ್ಷರ ಗಾತ್ರ

ಕಲಬುರಗಿ: ಕಳೆದ ಲೋಕಸಭಾ ಚುನಾವಣೆ ವೇಳೆ ಜಿಲ್ಲೆಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು 4 ವರ್ಷದ ಬಳಿಕ ಜನವರಿ 19ರಂದು ಜಿಲ್ಲೆಗೆ ಬರಲಿದ್ದಾರೆ. ಅಂದು ಸೇಡಂ ತಾಲ್ಲೂಕಿನ ಮಳಖೇಡದಲ್ಲಿ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ
ವಿತರಿಸುವರು.

ಈ ಕಾರ್ಯಕ್ರಮದ ಯಶಸ್ಸಿಗಾಗಿ ಜಿಲ್ಲಾಡಳಿತ ಸೇರಿ ರಾಜ್ಯ ಸರ್ಕಾರವು ಹೆಚ್ಚಿನ ಆದ್ಯತೆ ನೀಡುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಪಕ್ಷದ ಕಾರ್ಯಕರ್ತರು ಮತ್ತು ಮೋದಿ ಅಭಿಮಾನಿಗಳನ್ನು ಕರೆ ತರಲು ಬಿಜೆಪಿ ಸಂಘಟಿಸುತ್ತಿದೆ.

ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್‌ಕುಮಾರ್ ಸುರಾನಾ ಮತ್ತು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಈಗಾಗಲೇ ಜಿಲ್ಲೆಗೆ ಭೇಟಿ ನೀಡಿ, ಜನರನ್ನು ಕರೆ ತರುವ ಹೊಣೆ ಪಕ್ಷದ ನಾಯಕರು, ಕಾರ್ಯಕರ್ತರಿಗೆ ವಹಿಸಿದ್ದಾರೆ.

ಮೊದಲ ಬಾರಿಗೆ ಏಕಕಾಲಕ್ಕೆ ಬಂಜಾರ ಸಮುದಾಯದ 58 ಸಾವಿರ ಫಲಾನುಭವಿಗಳಿಗೆ ಅವರಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ. ಬಂಜಾರ ಸಮುದಾಯವು ಹೆಚ್ಚಿರುವ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ವಿಜಯಪುರ ಜಿಲ್ಲೆಗಳಿಂದ ಹೆಚ್ಚು ಜನರನ್ನು ಕರೆಸುವ ಸಿದ್ಧತೆ ನಡೆದಿದೆ.

‘ಪಕ್ಷದ ಸಂಸದರು, ಎಲ್ಲ ಶಾಸಕರು, ವಿವಿಧ ಮೋರ್ಚಾಗಳ ಮುಖಂಡರಿಗೆ ಪ್ರತಿ ತಾಂಡಾಗಳಿಂದ ಜನರನ್ನು ಕರೆತರುವ ಹೊಣೆಯಿದೆ. ಇತರ ಸಮುದಾಯಗಳ ಮುಖಂಡರನ್ನು ಕರೆ ತರಬೇಕಿದೆ. ಫಲಾನುಭವಿಗಳನ್ನು ಕರೆತರಲು 2,800 ಬಸ್‌ಗಳನ್ನು ಬುಕ್‌ ಮಾಡಲಾಗಿದೆ’ ಎಂದು ಬಿಜೆಪಿ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘50 ರಿಂದ 100 ಜೀಪ್‌ಗಳಲ್ಲಿ ಜನರನ್ನು ಹಕ್ಕುಪತ್ರ ವಿತರಣಾ ಕಾರ್ಯಕ್ರಮಕ್ಕೆ ಕರೆತರುವಂತೆ ಶಾಸಕರು ಹಾಗೂ ಪಕ್ಷದ ಟಿಕೆಟ್ ಆಕಾಂಕ್ಷಿಗಳಿಗೂ ತಾಕೀತು ಮಾಡಲಾಗಿದೆ’ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದರು.

ಚುನಾವಣಾ ತಂತ್ರ: ‘ಕಂದಾಯ ಇಲಾಖೆಯಿಂದ ಇದೇ ಮೊದಲ ಬಾರಿಗೆ ಏಕಕಾಲಕ್ಕೆ ಬಂಜಾರ ಸಮುದಾಯದ ಅಪಾರ ಸಂಖ್ಯೆ ಫಲಾನುಭವಿಗಳಿಗೆ ಅವರ ಮನೆಗಳ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ. ವಿಧಾನಸಭೆ ಚುನಾವಣೆ ಸಮೀಪಿಸಿದ್ದು, ಈ ಕಾರ್ಯಕ್ರಮವನ್ನು ಬಿಜೆಪಿಯು ಚುನಾವಣಾ ತಂತ್ರಗಳಿಗೆ ಬಳಸಿಕೊಳ್ಳಲು ಸಿದ್ಧತೆ ನಡೆಸಿದೆ’ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರ್. ಅಶೋಕ ತಾಂಡಾ ವಾಸ್ತವ್ಯ ಇಂದು
ಸಚಿವ ಆರ್. ಅಶೋಕ ಅವರು ಜನವರಿ 17ರಂದು ಕಲಬುರಗಿ ತಾಲ್ಲೂಕಿನ ಮಾಚಿನಾಳ ತಾಂಡಾದಲ್ಲಿ ಗ್ರಾಮ ವಾಸ್ತವ್ಯ ಮಾಡುವರು. ಕೆಲ ತಿಂಗಳ ಹಿಂದೆ ಸೇಡಂ ತಾಲ್ಲೂಕಿನ ಆಡಕಿ ಗ್ರಾಮದಲ್ಲಿ ವಾಸ್ತವ್ಯ ಮಾಡಿದ್ದರು.

ಜನವರಿ 17ರಂದು ಬೆಂಗಳೂರಿನಿಂದ ವಿಮಾನದ ಮೂಲಕ ಮಧ್ಯಾಹ್ನ 1.55ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬರುವ ಸಚಿವರು, ನಂತರ ಸಂಜೆ 5ಕ್ಕೆ ಮಾಚಿನಾಳ ತಾಂಡಾಕ್ಕೆ ಬರುವರು. ಸಂಜೆ 6ಕ್ಕೆ ತಾಂಡಾದ ಗ್ರಾಮ ಸಭೆಯಲ್ಲಿ ಪಾಲ್ಗೊಂಡು, ಅಲ್ಲೇ ವಾಸ್ತವ್ಯ ಮಾಡುವರು.

ಮೂರು ಲಕ್ಷ ಜನರಿಗೆ ಪುಲಾವ್

ಸುಮಾರು 60 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ನಡೆಯುವ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಜಿಲ್ಲಾಡಳಿತವು ಪುಲಾವ್ ಮತ್ತು ಮಜ್ಜಿಗೆ ವ್ಯವಸ್ಥೆ ಮಾಡಿದೆ.

‘ಕಂದಾಯ ಸಚಿವ ಆರ್. ಅಶೋಕ ಅವರ ಸೂಚನೆಯಂತೆ 3 ಲಕ್ಷ ಜನರಿಗೆ ಪುಲಾವ್ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅತಿ ಗಣ್ಯರು ಮತ್ತು ಗಣ್ಯ ವ್ಯಕ್ತಿಗಳಿಗೆ ಪ್ರತ್ಯೇಕ ಊಟದ ಮೆನು ಇದೆ. ಪ್ರಧಾನಿ ಅವರಿಗೆ ಅವರ ವಿಮಾನ, ಕಾರು, ಹೆಲಿಕಾಪ್ಟರ್‌ನಲ್ಲಿ ಊಟದ ವ್ಯವಸ್ಥೆ ಇರಲಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ನಾಲ್ಕು ವರ್ಷಗಳ ಬಳಿಕ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬರುತ್ತಿದ್ದು, 4 ಲಕ್ಷ ಜನರನ್ನು ಸೇರಿಸುವ ಗುರಿ ಇದೆ. ಅದಕ್ಕಾಗಿ ಬೂತ್‌ ಮಟ್ಟದಿಂದಲೇ ಜನರನ್ನು ಸಂಘಟಿಸಲಾಗುತ್ತಿದೆ.

ಅಮರನಾಥ ಪಾಟೀಲ

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT