ಮಂಗಳವಾರ, ನವೆಂಬರ್ 19, 2019
29 °C
ಬಸವೇಶ್ವರ ಸಮಾಜ ಸೇವಾ ಬಳಗದಿಂದ ಪೌರಕಾರ್ಮಿಕರಿಗೆ ಸತ್ಕಾರ

‘ದುಡಿಯುವ ವರ್ಗಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆಯಲಿ’

Published:
Updated:
Prajavani

ಕಲಬುರ್ಗಿ: ವಿವಿಧ ಕಾಯಕಗಳಲ್ಲಿ ಯಾವುದೇ ರೀತಿಯ ಹೆಸರನ್ನು ಬಯಸದೇ ತಮ್ಮನ್ನು ತಾವು ತೊಡಗಿಸಿಕೊಂಡು, ನಿರಂತರವಾಗಿ ಕಾರ್ಯ ಮಾಡುವ ಪೌರಕಾರ್ಮಿಕರು ಕಾಯಕ ಜೀವಿಗಳಾಗಿದ್ದಾರೆ. ಅವರು ಮಾಡುವ ಕಾರ್ಯ ಕೀಳೆಂದು ಭಾವಿಸಿ, ಅವರನ್ನು ಕನಿಷ್ಟವೆಂದು ತಿಳಿಯದೇ, ಸೂಕ್ತ ಪ್ರಾತಿನಿಧ್ಯ ದೊರೆಯಬೇಕೆಂದು ಉಪನ್ಯಾಸಕ ಪ್ರೊ.ಎಚ್.ಬಿ.ಪಾಟೀಲ ಹೇಳಿದರು.

ನಗರದ ಆಳಂದ ರಸ್ತೆಯ ದೇವಿ ನಗರದಲ್ಲಿರುವ ‘ಮಲ್ಲಿನಾಥ ಮಹಾರಾಜ ಶಾಲೆ’ಯಲ್ಲಿ, ಇಲ್ಲಿನ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ‘ಪೌರ ಕಾರ್ಮಿಕರ ದಿನಾಚರಣೆ’ ಪ್ರಯುಕ್ತ ಮಹಾನಗರ ಪಾಲಿಕೆ ಪೌರ ಕಾರ್ಮಿಕರನ್ನು ಸತ್ಕರಿಸಿ ಅವರು ಮಾತನಾಡಿದರು.

‘ದುಡಿಯುವ ವರ್ಗ ಕನಿಷ್ಠ, ದುಡಿಸಿಕೊಳ್ಳುವ ವರ್ಗ ಶ್ರೇಷ್ಠ ಎಂಬ ಸಾಮಾಜಿಕ ವ್ಯವಸ್ಥೆ ಹೋಗಬೇಕು. ಬಸವಣ್ಣನವರು 12ನೇ ಶತಮಾನದಲ್ಲಿಯೇ ಎಲ್ಲಾ ಕಾಯಕ ಶರಣರಿಗೆ ಸಮಾನವಾದ ಸ್ಥಾನಮಾನ ನೀಡಿದ್ದರು. ‘ಕಾಯಕವೇ ಕೈಲಾಸ’ ಎಂಬ ತತ್ವ ಸಾರಿ, ಎಲ್ಲಾ ಕಾಯಕ ಜೀವಿಗಳು ಒಂದೇ ಎಂದು ಜಗತ್ತಿಗೆ ಸಾರಿದ್ದಾರೆ. ಚರಂಡಿ ಸ್ವಚ್ಛಗೊಳಿಸುವಂತಹ ಕಾರ್ಯ ಕನಿಷ್ಠವೆಂದು ಭಾವಿಸಿ, ಯಾರೂ ಆ ಕಾರ್ಯ ಮಾಡದೇ ಹೋದರೆ, ಇಡೀ ಪರಿಸರ ಹಾಳಾಗುತ್ತದೆ’ ಎಂದು ಹೇಳಿದರು.

ಸತ್ಕಾರ ಸ್ವೀಕರಿಸಿ ಮಾತನಾಡಿದ ಸಿದ್ಧಾರ್ಥ ಬಡದಾಳಕರ್, ‘ಪೌರ ಕಾರ್ಮಿಕರು ಅನೇಕ ವರ್ಷಗಳಿಂದ ಕನಿಷ್ಠ ಕೂಲಿಯಲ್ಲಿ ದುಡಿಯುತ್ತಿದ್ದಾರೆ. ಸೇವೆ, ಜೀವನಕ್ಕೆ ಭದ್ರತೆ ನೀಡಬೇಕು. ಸಾಮಾಜಿಕ, ಆರ್ಥಿಕ ಸ್ಥಿತಿ ಉತ್ತಮವಾಗಬೇಕು. ಅಸಂಘಟಿತ ಕಾರ್ಮಿಕ ಆಗ ಮಾತ್ರ ನಾವೂ ನೆಮ್ಮದಿಯುತ ಜೀವನ ಸಾಗಿಸಲು ಸಾಧ್ಯವಾಗುತ್ತದೆ’ ಎಂದರು. 

ಪೌರಕಾರ್ಮಿಕರಾದ ವಿಠಲ ಸೂರ್ಯವಂಶಿ, ಸರಸ್ವತಿ ಭಂಡಾರಿ, ಪ್ರಮುಖರಾದ ಅಮರ ಬಂಗರಗಿ, ಬಸವರಾಜ ಪುರಾಣೆ, ಪ್ರಭಾಕರ ಎನ್.ವಾಕಡೆ, ತುಕಾರಾಮ ಸಿಂಗೆ, ಚಂಪಕಲಾ ನೆಲ್ಲೂರ, ಗಣೇಶ ಗೌಳಿ, ಓಂಕಾರ ಗೌಳಿ, ಗಿರೀಶ ಇದ್ದರು.

ಪ್ರತಿಕ್ರಿಯಿಸಿ (+)