ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ದರ ಹೆಚ್ಚಳಕ್ಕೆ ಜನರ ಆಕ್ಷೇಪ; ಸರ್ಕಾರದ ‘ಭಾರ’ ಜನರ ಮೇಲೆ

ವಿದ್ಯುತ್‌ ದರ ಹೆಚ್ಚಳಕ್ಕೆ ಜನರ ಆಕ್ಷೇಪ; ಕಂಪನಿಗಳ ಕ್ರಮಕ್ಕೆ ಬೇಸರ
Last Updated 5 ಏಪ್ರಿಲ್ 2022, 5:51 IST
ಅಕ್ಷರ ಗಾತ್ರ

ಕಲಬುರಗಿ:ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ವಿದ್ಯುತ್‌ ದರ ಪರಿಷ್ಕರಣೆ ಮಾಡಿದ್ದು, ಇನ್ನು ಮುಂದೆ ಬಳಕೆಯ ಪ್ರತಿ ಯೂನಿಟ್‌ಗೆ 5 ಪೈಸೆ ಹೆಚ್ಚಳವಾಗಲಿದೆ. ಅಲ್ಲದೇ ಎಚ್‌ಪಿ, ಕೆವಿ ಮುಂತಾದ ಮೀಟರ್‌ಗಳಿಗೆ ಇದ್ದ ನಿರ್ದಿಷ್ಟ ದರ (ಫಿಕ್ಸ್ಡ್‌ ಕಾಸ್ಟ್‌)ವನ್ನೂ ₹ 10ರಿಂದ ₹ 30ರವರೆಗೆ ಹೆಚ್ಚಳ ಮಾಡಲಾಗಿದೆ. ಇವೆರಡನ್ನೂ ತೂಗಿ– ಅಳೆದು ನೋಡಿದರೆ ಪ್ರತಿ ಯೂನಿಟ್‌ಗೆ 35 ಪೈಸೆ (ಶೇಕಡ 4.33) ಹೆಚ್ಚಳ ಮಾಡಿದಂತಾಗಿದೆ.

2022–23ನೇ ಸಾಲಿನಲ್ಲಿ ವಿದ್ಯುತ್‌ ಸರಬರಾಜು ಕಂಪನಿಗಳು ₹ 2159.48 ಕೋಟಿ ಕಂದಾಯ ನಷ್ಟವನ್ನು ಭರಿಸಬೇಕಿದೆ. 2020–21ರಲ್ಲಿ ₹ 1700.49 ಕೋಟಿ ಕೊರತೆ ಉಂಟಾಗಿದೆ. ಇದನ್ನು ಸರಿದೂಗಿಸಲು ಕನಿಷ್ಠ ₹ 1.85ರಷ್ಟು ದರ ಏರಿಸಬೇಕು ಎಂದು ಕಂಪ‍ನಿಗಳು ಬೇಡಿಕೆ ಇಟ್ಟಿದ್ದವು. ಗ್ರಾಹಕರ ತಕರಾರು ಪರಿಶೀಲಿಸಿದ ನಂತರ ಆಯೋಗವು ಪ‍ರಿಷ್ಕರಣೆ ಪಟ್ಟಿ ನೀಡಿದೆ. ಈ ಬಗ್ಗೆ ಜಿಲ್ಲೆಯ ವಿದ್ಯುತ್‌ ಗ್ರಾಹಕರ ಪ್ರತಿಕ್ರಿಯೆಗಳನ್ನು ಇಲ್ಲಿ ನೀಡಲಾಗಿದೆ.

ಇನ್ನು ಮುಂದೆ ಪ್ರತಿಬಾರಿ ₹ 320ರಷ್ಟು ಹೆಚ್ಚು ಬಿಲ್‌

ನಮ್ಮ ವಾಣಿಜ್ಯ ಮಳಿಗೆಗೆ ಕನಿಷ್ಠ 800 ಯೂನಿಟ್‌ ವಿದ್ಯುತ್‌ ಬಳಸುತ್ತೇವೆ. ಈಗಿನ ಪರಿಷ್ಕೃತ ದರದಿಂದ ₹ 320 ಹೆಚ್ಚು ಬಿಲ್‌ ಬರುತ್ತದೆ. ವಿದ್ಯುತ್‌ ಸರಬರಾಜು ಕಂಪನಿ ಈಗ ಹಾನಿಯಲ್ಲಿ ಇಲ್ಲ. ಆದರೆ, ಆದಾಯ ಕೊರತೆ ತೋರಿಸುತ್ತಿವೆ. ಆದಾಯಕ್ಕೆ ಮೂಲಗಳನ್ನು ಕಂಡುಕೊಳ್ಳಬೇಕೆ ಹೊರತು; ಹೊರೆಯನ್ನು ಗ್ರಾಹಕರ ಮೇಲೆ ಹಾಕುವುದು ಸರಿಯಲ್ಲ. ದರ ಪರಿಷ್ಕರಣೆ ಬಗ್ಗೆ ನನ್ನ ತೀವ್ರ ಆಕ್ಷೇಪವಿದೆ.

–ಪ್ರಭವ್‌ ಪಟ್ಟಣಕರ್‌, ವ್ಯಾಪಾರಿ

‘ಸರ್ಕಾರದಿಂದ ವಸೂಲಿ ಮಾಡಿದ್ದರೆ ಸಾಕಿತ್ತು’

ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಈವರೆಗೆ ಒಟ್ಟು ₹ 3143.16 ಕೋಟಿಯಷ್ಟು ಕೊರತೆ ಉಂಟಾಗಿದೆ ಎಂದು 2020–21ರ ಆಯವ್ಯಯ ಪತ್ರದಲ್ಲಿ ತಿಳಿಸಲಾಗಿದೆ.ಸರ್ಕಾರದ ಉಚಿತ, ರಿಯಾಯಿತಿ ಯೋಜನೆಗಳಿಗೆ ನೀಡಿದ ವಿದ್ಯುತ್‌ ದರ ವಸೂಲಿ ಮಾಡುವಲ್ಲಿ ಕಂಪನಿಗಳು ಹಿಂದೆ ಬಿದ್ದಿವೆ. ಕೆಆರ್‌ಸಿ ಕೂಡ ತನ್ನ ಕರ್ತವ್ಯ ನಿಭಾಯಿಸಿಲ್ಲ. ಗ್ರಾಹಕರ ಹಿತರಕ್ಷಣೆ ಆದ್ಯತೆ ಆಗಬೇಕಿತ್ತು. ಸರ್ಕಾರ ಹಣ ಪಾವತಿಸದ ಕಾರಣ ಕಂಪನಿಗಳಿಗೆ ಆದಾಯ ಕೊರತೆ ಆಗಿದೆ. ಸರ್ಕಾರದಿಂದ ವಸೂಲಿ ಮಾಡಿದ್ದರೆ ವಿದ್ಯುತ್‌ ದರ ಹೆಚ್ಚಳ ಮಾಡುವ ಬದಲು; ಕಡಿಮೆ ಮಾಡುವಂತಾಗುತ್ತದೆ. ಈ ಬಗ್ಗೆ ನಾನು ಆಯೋಗದ ಮುಂದೆ ಪಿಟೇಷನ್‌ ಕೂಡ ಕೊಟ್ಟಿದ್ದೇನೆ. ಆದರೆ, ಸರ್ಕಾರದ ಮರ್ಜಿ ಕಾಯುವ ಭರದಲ್ಲಿ ಕಂಪನಿಗಳು ಗ್ರಾಹಕರ ಮೇಲೆ ಹೊರೆ ಹಾಕಿವೆ.

–ದೀಪಕ್‌ ಗಾಲಾ, ಅಧ್ಯಕ್ಷ, ಪರಿಸರ ಸಂರಕ್ಷಣಾ ಸಂಘಟನೆ, ಕಲಬುರಗಿ

ಬಡ, ಮಧ್ಯಮ ವರ್ಗಗಳಿಗೆ ನಿಲ್ಲದ ಬರೆ...

ಬೇಸಿಗೆಯಲ್ಲಿ ವಿದ್ಯುತ್‌ ಬಳಕೆ ಅತಿಯಾಗಿ ಹೆಚ್ಚುತ್ತದೆ. ಫೆಬ್ರುವರಿ ತಿಂಗಳಲ್ಲಿ ನಮ್ಮ ಮನೆಯ ವಿದ್ಯುತ್‌ ಬಿಲ್‌ ₹ 800 ಬಂದಿತ್ತು. ಆದರೆ, ಮಾರ್ಚ್‌ನಲ್ಲಿ ₹ 3000 ಬಂದಿದೆ! ಮನೆಯಲ್ಲಿ 24 ಗಂಟೆಗಳೂ ಫ್ಯಾನ್‌, ಕೂಲರ್‌, ಎಸಿ ಯಾವುದನ್ನಾದರೂ ಬಳಸುವುದು ಅನಿವಾರ್ಯ. ಅಡುಗೆ ಮನೆ, ಬೆಡ್‌ರೂಮ್‌, ಹಾಲ್‌ ಹೀಗೆ ಎಲ್ಲಕಡೆ ವಿದ್ಯುತ್‌ ಬಳಕೆ ಹೆಚ್ಚಿದೆ. ಇದರಿಂದಾಗಿ ಬಿಲ್‌ ಕೂಡ ಹೆಚ್ಚು ಬರುತ್ತದೆ. ಇಂಥದರಲ್ಲಿ ದರವನ್ನೂ ಹೆಚ್ಚಿಸಿದರೆ ಮಧ್ಯಮ ವರ್ಗದವರ ಕತೆ ಏನು? ಈಗಾಗಲೇ ಅಡುಗೆ ಅನಿಲ, ಪೆಟ್ರೋಲ್‌, ಅಡುಗೆ ಎಣ್ಣೆ, ದಿನಸಿ ದರಗಳೂ ಹೆಚ್ಚಾಗಿವೆ. ಈಗ ವಿದ್ಯುತ್‌ ಕೂಡ ಹೆಚ್ಚಳ ಮಾಡಿದರೆ ಬಡವರು, ಮಧ್ಯಮವರ್ಗದವರು ಸಂಕಷ್ಟಕ್ಕೆ ಸಿಲುಕುತ್ತಾರೆ.

–ಸೌಮ್ಯಾ ಕುಸನೂರಕರ್‌, ಬಟ್ಟೆ ವ್ಯಾಪಾರಿ, ಕಲಬುರಗಿ

ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ಹೊರೆ

ನಿರ್ದಿಷ್ಟ ದರ ಹಾಗೂ ಬಳಕೆ ದರ ಎರಡನ್ನೂ ಹೆಚ್ಚಳ ಮಾಡಿದ್ದು ಸರಿಯಲ್ಲ. ಈಗ ವಿದ್ಯುತ್‌ ದರ ಪರಿಷ್ಕರಣೆ ತಾಳಿಕೊಳ್ಳುವಷ್ಟು ಶಕ್ತಿ ಸಣ್ಣ ಹಾಗೂ ಸೂಕ್ಷ್ಮ ಕೈಗಾರಿಕೆಗಳಿಗೆ ಉಳಿದಿಲ್ಲ. ಇದನ್ನು ನಮಗಂಡು ಆಯೋಗವು ಸಣ್ಣ ಹಾಗೂ ಸೂಕ್ಷ್ಮ ಕೈಗಾರಿಕೆಗಳಿಗೆ 50 ಪೈಸೆಯಷ್ಟು ರಿಯಾಯಿತಿ ಘೋಷಣೆ ಮಾಡಿದೆ. ಆದರೆ, ಫಿಕ್ಸ್ಡ್‌ಕಾಸ್ಟ್‌ ಹೆಚ್ಚಳದಿಂದ ರಿಯಾಯಿತಿ ಕೊಟ್ಟೂ ಕೊಡಂದಂತಾಗಿದೆ. ಸರ್ಕಾರದಿಂದ ಬಾಕಿ ಉಳಿಸಿಕೊಂಡು, ಅದನ್ನು ಸರಿದೂಗಿಸಲು ಕಂಪನಿಗಳು ಬ್ಯಾಂಕ್‌ ಸಾಲ ತೆಗೆದುಕೊಂಡಿವೆ. ಸಾಲದ ಬಡ್ಡಿಯನ್ನೂ ಗ್ರಾಹಕರ ಮೇಲೆಯೇ ಹಾಕಿದ್ದಾರೆ. ಆಯೋಗವು ದರ ಪರಿಷ್ಕರಣೆಗೆ ಮುಂದಾದ ಪ್ರತಿ ಬಾರಿಯೂ ಎಚ್‌ಕೆಸಿಸಿಐ ಆಕ್ಷೇಪಣೆ ಸಲ್ಲಿಸಿದೆ. ಆದರೂ ಪರಿಗಣಿಸಿಲ್ಲ. ಈಗ ಸಣ್ಣ, ಸೂಕ್ಷ್ಮ ಕೈಗಾರಿಕೆಗಳು ಇನ್ನಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ.

–ಪ್ರಶಾಂತ ಮಾನಕರ, ಅಧ್ಯಕ್ಷ, ಎಚ್‌ಕೆಸಿಸಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT