ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೋಗ ಪೀಡಿತ ಜಾನುವಾರು ಹಾಲು ಕುಡಿದರೆ ತೊಂದರೆ ಇಲ್ಲ’

‘ಪ್ರಜಾವಾಣಿ ಫೋನ್ ಇನ್‌’ನಲ್ಲಿ ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಸುಭಾಷಚಂದ್ರ ಟಕ್ಕಳಕಿ
Last Updated 15 ಅಕ್ಟೋಬರ್ 2022, 15:36 IST
ಅಕ್ಷರ ಗಾತ್ರ

ಕಲಬುರಗಿ: ಗಂಟು ರೋಗ (ಲಿಂಪಿಸ್ಕಿನ್) ಕಾಯಿಲೆ ಪೀಡಿತ ಆಕಳಿನ ಹಾಲು ಕುಡಿಯುವುದರಿಂದ ಆ ಕಾಯಿಲೆ ಮನುಷ್ಯರಿಗೆ ಹರಡುವುದಿಲ್ಲ. ಹೀಗಾಗಿ, ಯಾವುದೇ ಹಿಂಜರಿಕೆಯಿಲ್ಲದೇ ಹಾಲು ಕುಡಿಯಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪ್ರಭಾರ ಉಪನಿರ್ದೇಶಕ ಡಾ.ಸುಭಾಷಚಂದ್ರ ಟಕ್ಕಳಗಿ ಸ್ಪಷ್ಟಪಡಿಸಿದರು.

ಶನಿವಾರ ಆಯೋಜಿಸಿದ್ದ ‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜನರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘2020ರಲ್ಲಿ ಈ ವೈರಾಣು ಗಂಟು ರೋಗ ಕಾಣಿಸಿಕೊಂಡಿದ್ದು, ಜಿಲ್ಲೆಯ ಆಳಂದದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಿಸಿದೆ. ಕಲಬುರಗಿ ತಾಲ್ಲೂಕಿನ ಅವರಾದ (ಬಿ) ಗ್ರಾಮದಲ್ಲಿರುವ ಸ್ವಾಮಿ ಸಮರ್ಥ ಗೋಶಾಲೆಯಲ್ಲಿ ಮೊದಲ ಪ್ರಕರಣ ಕಾಣಿಸಿತು’ ಎಂದರು.

‘ಹೀಗಾಗಿ, ಅಂದಿನಿಂದ ಜಾನುವಾರುಗಳ ಸಾಗಣೆ ಮತ್ತು ದನಗಳ ಸಂತೆಯನ್ನು ಜಿಲ್ಲಾಧಿಕಾರಿಯವರು ನಿಷೇಧಿಸಿ
ದ್ದಾರೆ. ಸದ್ಯಕ್ಕೆ ರೋಗವು ನಿಯಂತ್ರಣದಲ್ಲಿದೆ. ಗಂಟು ರೋಗ ಪೀಡಿತ ಜಾನುವಾರುವಿನ ಹಾಲು ಕುಡಿದರೆ ಯಾವ ತೊಂದರೆಯೂ ಆಗುವುದಿಲ್ಲ. ಏಕೆಂದರೆ ಇದು ಜಾನುವಾರುಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ರೋಗ’ ಎಂದರು. ಫೋನ್‌ ಇನ್ ವಿವರ ಹೀಗಿದೆ.

ರೋಗ ಬಾರದಂತೆ ತಡೆಯುವ ವಿಧಾನ ಯಾವುದು?

ಉತ್ತರ: ಜಾನುವಾರುಗಳನ್ನು ಕಟ್ಟುವ ಜಾಗವನ್ನು ಶುಚಿಯಾಗಿಡಬೇಕು. ಈ ರೋಗವು ಮುಖ್ಯವಾಗಿ ಸೊಳ್ಳೆ ಮತ್ತು ನೊಣಗಳಿಂದ ಹರಡುವ ಸಾಧ್ಯತೆ ಇದೆ. ಆದ್ದರಿಂದ ಪ್ರತಿ ದಿನ ಜಾನುವಾರುಗಳ ಹತ್ತಿರ ಸೊಳ್ಳೆಗಳು ಸುಳಿಯದಂತೆ ಹೊಗೆ ಹಾಕಿಸಬೇಕು. ಅಲ್ಲದೇ, ಸೊಳ್ಳೆ ಪರದೆಯನ್ನು ಅಳವಡಿಸಬೇಕು. ಆದಷ್ಟು ನೀರು ನಿಂತುಕೊಳ್ಳದಂತೆ ಗೋದಲಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ನೆಲವನ್ನು ಫಿನಾಯಿಲ್‌ನಿಂದ ಸ್ವಚ್ಛಗೊಳಿಸಬೇಕು.

lಚರ್ಮಗಂಟು ರೋಗದಿಂದ ಸತ್ತ ಜಾನುವಾರುಗಳಿಗೆ ಪರಿಹಾರವಿದೆಯೇ?

ಉತ್ತರ: ಇದೆ. ಆಕಳಿಗೆ ₹ 25 ಸಾವಿರ ಹಾಗೂ ಕರುವಿಗೆ ₹ 5 ಸಾವಿರ ಪರಿಹಾರ ನೀಡಬಹುದು.

ರೋಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಹರಡಿದೆ?

ಉತ್ತರ: ಜಿಲ್ಲೆಯ 121 ಗ್ರಾಮಗಳ 212 ಜಾನುವಾರುಗಳಲ್ಲಿ ಗಂಟುರೋಗ ಕಾಣಿಸಿಕೊಂಡಿದೆ. ರೋಗ ಪೀಡಿತವಾಗಿದ್ದ 168 ದನಗಳು ಗುಣಮುಖವಾಗಿವೆ. ನಾಲ್ಕು ದನಗಳು ಸಾವಿಗೀಡಾಗಿವೆ. ಈ ರೋಗ ಮಾರಣಾಂತಿಕವಲ್ಲ. ಆದರೆ, ಸೂಕ್ತ ಮುನ್ನೆಚ್ಚರಿಕೆ ವಹಿಸಿದರೆ ಸಾವುಗಳನ್ನು ತಪ್ಪಿಸಬಹುದು. ಇಲ್ಲಿಯವರೆಗೆ 14,952 ಜಾನುವಾರುಗಳಿಗೆ ಲಸಿಕೆ ವಿತರಿಸಲಾಗಿದೆ.

ಕುರಿ ಸಾಕಣೆಗೆ ಇಲಾಖೆಯಲ್ಲಿ ಯೋಜನೆಗಳಿವೆಯೇ?

ಉತ್ತರ: ನ್ಯಾಷನಲ್‌ ಲೈವ್‌ಸ್ಟಾಕ್ ಮಿಷನ್ ಯೋಜನೆಯಡಿ ಇಲಾಖೆಯು ₹ 1 ಕೋಟಿ ಮೊತ್ತದ ಕುರಿ ಸಾಕಣೆ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಯಡಿ ಕುರಿ ಸಾಕಣೆ ಮಾಡಬಯಸುವ ಉದ್ಯಮಿಗಳು www.nlm.udyamimitra.inಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಇದರಲ್ಲಿ ₹ 50 ಲಕ್ಷದ ಸಬ್ಸಿಡಿ ದೊರೆಯಲಿದೆ. ಬ್ಯಾಂಕ್‌ನಿಂದ ಸಾಲ ದೊರೆಯಲಿದ್ದು, 500 ಕುರಿ ಹಾಗೂ 25 ಹೋತಗಳನ್ನು ಖರೀದಿಸಬೇಕು. ಶೆಡ್ ನಿರ್ಮಾ
ಣ, ಹುಲ್ಲು, ಕುರಿಗಳ ನಿರ್ವಹಣೆ
ಯಂತಹ ತಾಂತ್ರಿಕ ಮಾಹಿತಿಯನ್ನು ಇಲಾಖೆಯ ಅಧಿಕಾರಿಗಳು ನೀಡುವರು. ಈಗಾಗಲೇ 25 ಅರ್ಜಿಗಳು ಬಂದಿದ್ದು, ಅದರಲ್ಲಿ ಎರಡು ಅರ್ಜಿಗಳು ಸಬ್ಸಿಡಿ ಪಡೆಯುವ ಹಂತಕ್ಕೆ ಹೋಗಿವೆ. ಐದು ಎಕರೆ ಭೂಮಿ ಹೊಂದಿರುವವರು ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು.

ಕುರಿಗಳು ಕಾಯಿಲೆಗೆ ತುತ್ತಾದ ಸಂದರ್ಭದಲ್ಲಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಕುರಿಗಳಿಗೆ ₹ 5 ಸಾವಿರ ಹಾಗೂ ₹ 2,500 ಪರಿಹಾರ ದೊರೆಯಲಿದೆ.

ಚರ್ಮಗಂಟು ರೋಗ ಹರಡುವ ವಿಧಾನವೇನು?

ಉತ್ತರ: ಚರ್ಮಗಂಟು ರೋಗ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಮಳೆಗಾಲದ ನಂತರದಲ್ಲಿ ಹೆಚ್ಚಾಗಿ ಪಸರಿಸುತ್ತದೆ. ದನ, ಎಮ್ಮೆ, ಮಿಶ್ರತಳಿ ರಾಸುಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತದೆ. ದನಗಳನ್ನು ಕಚ್ಚುವ ಸೊಳ್ಳೆ, ನೋಣ, ಉಣ್ಣೆಯಂತಹ ಕೀಟಗಳಿಂದ ಬಹುಬೇಗ ಹರಡುತ್ತದೆ. ಕಲುಷಿತಗೊಂಡ ನೀರು ಮತ್ತು ಆಹಾರ ಸೇವನೆ. ಜಾನುವಾರುಗಳ ನೇರ ಸಂಪರ್ಕದಿಂದಲೂ ತಗಲುತ್ತದೆ.

ರೋಗ ತಗುಲಿದ ಪ್ರಾಣಿಗಳಲ್ಲಿ ತೀವ್ರ ಜ್ವರ, ಮಂಕಾಗುವುದು, ಮೂಗು, ಕಣ್ಣುಗಳಿಂದ ನೀರು ಸೋರುವುದು, ಜೊಲ್ಲು ಸೋರುವುದು ನಿಶ್ಯಕ್ತಿ, ಕಾಲುಗಳಲ್ಲಿ ಬಾವು ಮತ್ತು ಕುಂಟುತನದಂತಹ ಲಕ್ಷಣ ಕಾಣಿಸಿಕೊಳ್ಳುತ್ತವೆ. ಒಂದು ವಾರದ ನಂತರ ಚರ್ಮದಲ್ಲಿ 1–5 ಸೆಂ.ಮೀ.ನಷ್ಟು ಅಗಲ ಗಂಟುಗಳು ಕಾಣಿಸಿಕೊಳ್ಳುತ್ತವೆ. ನಂತರ ಒಡೆದು ಗಾಯವಾಗಿ ನೋವುಂಟಾಗುತ್ತದೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ನೊಣಗಳಿಂದ ಹುಳುಗಳು ಬಿದ್ದು ಹುಣ್ಣಾಗುತ್ತವೆ. ಹಾಲಿನ ಇಳುವರಿ ಕಡಿಮೆಯಾಗುವುದು ಮತ್ತು ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ.

ರೋಗಗ್ರಸ್ಥ ರಾಸುಗಳ ಅಂತ್ಯಕ್ರಿಯೆ ಮಾಡುವುದು ಹೇಗೆ?

ಉತ್ತರ: ಸಾಧಾರಣವಾಗಿ ರೋಗಗ್ರಸ್ಥ ರಾಸುಗಳು ಚೇತರಿಸಿಕೊಳ್ಳಲು 2 ರಿಂದ 3 ವಾರ ಚಿಕಿತ್ಸೆ ಅಗತ್ಯವಿದೆ. ಒಂದು ವೇಳೆ ಚರ್ಮಗಂಟು ರೋಗದಿಂದ ಮೃತಪಟ್ಟರೇ, ವೈಜ್ಞಾನಿಕ ವಿಧಾನದಲ್ಲಿ ಅಂತ್ಯಕ್ರಿಯೆ ಮಾಡಬೇಕು. ಅವುಗಳ ಕಳೇಬರಕ್ಕೆ ಅಂಟುಜಾಡ್ಯ ನಿವಾರಕರನ್ನು ಸಿಂಪಡಿಸಿ 6 ಅಡಿ ಆಳ ಗುಂಡಿ ತೆಗೆದು, 3–4 ಸೆಂ.ಮೀ. ದಪ್ಪ ಸೊಡಿಯಂ ಹಾಕಿ ಕಳೇಬರ ಇಡಬೇಕು. ಅದರ ಮೇಲೆ ಸುಣ್ಣ, ಮರಳು ಹಾಕಿ ಊಳಬೇಕು.

‘ರೋಗ ನಿಯಂತ್ರಣಕ್ಕೆ ಇದುವರೆಗೂ 14,952 ಜಾನುವಾರುಗಳಿಗೆ ಲಸಿಕೆ ಕೊಡಲಾಗಿದೆ. ಖಾಸಗಿಯಾಗಿ 61,600 ಲಸಿಕೆಗಳನ್ನು ಖರೀದಿಸಲಾಗಿದೆ. ಹೆಚ್ಚುವರಿಯಾಗಿ 1 ಲಕ್ಷ ಲಸಿಕೆ ಪೂರೈಸುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

ಜಿಲ್ಲೆಯಲ್ಲಿ 3.85 ಲಕ್ಷ ದನ, 73 ಸಾವಿರ ಎಮ್ಮೆ, 1.12 ಲಕ್ಷ ಕುರಿ, 4.46 ಲಕ್ಷ ಮೇಕೆಗಳಿವೆ. ಸ್ಪೆಷಾಲಿಟಿ, ಪಶು ಆಸ್ಪತ್ರೆ, ಪಶು ಚಿಕಿತ್ಸಾಲಯ, ಪಶು ಕೇಂದ್ರ ಸೇರಿ ಒಟ್ಟು 207 ಆಸ್ಪತ್ರೆಗಳಿವೆ. ಇವುಗಳಲ್ಲಿ 277 ‘ಡಿ’ ದರ್ಜೆ ನೌಕರರು, 29 ಕಿರಿಯ ಪಶುವೈದ್ಯಕೀಯ ಪರೀಕ್ಷಕರು, 25 ಪಶುವೈದ್ಯಾಧಿಕಾರಿಗಳು ನೇಮಕ ಆಗಬೇಕಿದೆ’ ಎಂದು ಡಾ.ಸುಭಾಷಚಂದ್ರ ಟಕ್ಕಳಗಿ ತಿಳಿಸಿದರು.

‘ಕೆಲ ಕಡೆ ಪಶು ವೈದ್ಯರೇ ‘ಡಿ’ ದರ್ಜೆ ನೌಕರರ ಕೆಲಸ ಮಾಡುತ್ತಿದ್ದಾರೆ. 856 ಮಂಜೂರಾದ ಹುದ್ದೆಗಳ ಪೈಕಿ 482 ಹುದ್ದೆಗಳು ಮಾತ್ರವೇ ಭರ್ತಿಯಾಗಿವೆ. 374 ಹುದ್ದೆಗಳು ಖಾಲಿ ಇವೆ. ಒಂದು ಪಶುವೈದ್ಯ ಕೇಂದ್ರಕ್ಕೆ ಇಬ್ಬರು ‘ಡಿ’ ದರ್ಜೆ ನೌಕರರು ಇರಬೇಕು’ ಎಂದರು.

‘ಪಶು ಇಲಾಖೆಗೆ ‘ಡಿ’ ದರ್ಜೆ ನೌಕರರೇ ಬೆನ್ನೆಲುಬು. ಚಿಕಿತ್ಸೆಗೆ ಕರೆ ತರುವ ಹಸು, ಎತ್ತು, ಎಮ್ಮೆಗಳನ್ನು ಕೆಲವೊಮ್ಮೆ ನೆಲಕ್ಕೆ ಕೆಡವಿ ಚಿಕಿತ್ಸೆ ಕೊಡಬೇಕಾಗುತ್ತದೆ. ಇಂತಹ ಸಮಯದಲ್ಲಿ ಕೆಲ ಜಾನುವಾರುಗಳು ದಾಳಿ ಮಾಡುತ್ತವೆ. ಅವುಗಳನ್ನು ನಿಯಂತ್ರಿಸಲು ನುರಿತ ನೌಕರರ ಅಗತ್ಯವಿದೆ’ ಎಂದರು.

ಚರ್ಮಗಂಟು ರೋಗದಿಂದ ಆಗುವ ತೊಂದರೆ‌

ಹಸುಗಳ ಹಾಲು ಕೊಡುವ ಪ್ರಮಾಣ ಕಡಿಮೆಯಾಗುತ್ತದೆ. ಕೆಲವರು ರಾಸುಗಳು ಮೇವು ತಿನ್ನದೆ ಕ್ರಮೇಣ ಬಡಕಲಾಗುತ್ತವೆ. ತಳಿ ಸಂವರ್ಧನೆ ಹೋರಿಗಳು ಬಂಜೆ ಆಗಬಹುದು. ಹಸುಗಳಲ್ಲಿ ಗರ್ಭಪಾತವಾಗಿ ಬಹುಕಾಲದವರೆಗೆ ಬೆದೆಗೆ ಬರುವುದಿಲ್ಲ. ತ್ವರಿತವಾಗಿ ಚಿಕಿತ್ಸೆ ಕೊಡಿಸದಿದ್ದರೆ ರೋಗ ಪೀಡಿತ ರಾಸುಗಳ ಬಡಕಲಾಗುತ್ತವೆ.

ತಡೆಗಟ್ಟುವಿಕೆ, ನಿಯಂತ್ರಣ ಹೇಗೆ?

ಚರ್ಮಗಂಟು ರೋಗ ಕಂಡುಬಂದ ತಕ್ಷಣವೇ ರೋಗ ಪೀಡಿತ ರಾಸುಗಳನ್ನು ಆರೋಗ್ಯವಂತ ಪ್ರಾಣಿಗಳಿಂದ ಬೇರ್ಪಡಿಸಿ ಕೂಡಲೇ ಹತ್ತಿರದ ಪಶುವೈದ್ಯರನ್ನು ಸಂಪರ್ಕಿಸಬೇಕು. ಈ ರೋಗಕ್ಕೆ ಯಾವುದೇ ಲಸಿಕೆ ಲಭ್ಯ ಇರುವುದಿಲ್ಲ. ರೋಗದ ಲಕ್ಷಣಗಳ ತಕ್ಕಂತೆ ಚಿಕಿತ್ಸೆ ನೀಡಬೇಕಾಗುತ್ತದೆ. ದೇಹವನ್ನು ತಂಪಾಗಿಸಲು ಮೈಮೇಲೆ ಹಸಿ ಬಟ್ಟೆ ಹಾಕಿ, ತಂಪಾದ ಜಾಗದಲ್ಲಿ ಕಟ್ಟಬೇಕು.

ಚರ್ಮದ ಮೇಲಿನ ಗಾಯಗಳಿಗೆ ಪೋಟ್ಯಾಷಿಯಂ ಪರಮ್ಯಾಂಗನೇಟ್‌ ದ್ರಾವಣದಿಂದ ಸ್ವಚ್ಛಗೊಳಿಸಿ, ಐಯೋಡಿನ್‌ ದ್ರಾವಣ, ಮುಲಾಮು ಹಾಗೂ ಬೇವಿನ ಎಣ್ಣೆ ಲೇಪಿಸಿ, ಸೊಳ್ಳೆ ನೊಣ, ಉಣ್ಣೆ ಹಾವಳಿಯನ್ನು ಹತೊಟಿಯಲ್ಲಿ ಇಡಬೇಕು. ಸಾಧ್ಯವಾದಲ್ಲಿ ಸೊಳ್ಳೆ ಪರದೆಗಳನ್ನು ಬಳಸಬೇಕು. ಹಸಿರು ಮೇವು, ಪೌಷ್ಟಿಕ ಆಹಾರ ಮತ್ತು ಲವಣ ಮಿಶ್ರಣ ಕೊಡಬೇಕು. ಕುಡಿಯುವ ನೀರಿನಲ್ಲಿ ಬೆಲ್ಲ, ಉಪ್ಪು ಹಾಗೂ ಅಡುಗೆ ಸೋಡಾ ಹಾಕಿ ದಿನಕ್ಕೆ 5–6 ಬಾರಿ ಕುಡಿಸಬೇಕು. ಕೀಟಗಳ ಹಾವಳಿ ತಪ್ಪಿಸಲು ಹಸಿಬೇವಿನ ಸೊಪ್ಪಿನ ಹೊಗೆ ಹಾಕಬೇಕು. ಕೊಟ್ಟಗೆ ಸ್ವಚ್ಛತೆ ಕಾಪಾಡಿ, ಫಾರ್ಮಲಿನ್(ಶೇ 1), ಫಿನಾಯಿಲ್ (ಶೇ 2) ಅಥವಾ ಸೋಡಿಯಂ ಹೈಪೋಕ್ಲೋರೇಟ್‌ (ಶೇ 2) ಅನ್ನು ದಿನಕ್ಕೆ ಎರಡು ಬಾರಿ ಸಿಂಪರಣೆ ಮಾಡಬೇಕು. ವೈದ್ಯರ ಸೂಚನೆಯ ಮೇರೆಗೆ ನೋವು ನಿವಾರಕ ಔಷಧಿಗಳನ್ನೂ ಕೊಡಬೇಕು.

ಪ್ರಶ್ನೆ ಕೇಳಿದವರು: ಮಲ್ಲಿಕಾರ್ಜುನ ಹರಳಯ್ಯ, ಲಕ್ಷ್ಮಿಕಾಂತ ಸಾವಳಗಿ, ಶಾಹಿನ್, ಲಿಂಗರಾಜ ಪಾಟೀಲ, ರಾಘವೇಂದ್ರ ಭಕ್ರಿ, ಬಲವಂತರಾವ್, ಬಸವರಾಜ ಚಿನ್ಮಳ್ಳಿ, ಶಾಂತಪ್ಪ ಕಡಗಂಚಿ, ರವಿಕಾಂತ ಕಲಬುರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT