ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂ ಜಾಗೃತಿ ವೈದ್ಯೋ‍ಪಚಾರಕ್ಕಿಂತ ದೊಡ್ಡದು: ಡಾ.ಚಂದ್ರಮೌಳಿ

‘ಪ್ರಜಾವಾಣಿ’ ‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಹಲವು ಸಂದೇಹ ಬಗೆಹರಿಸಿಕೊಂಡ ಜನ
Last Updated 12 ಡಿಸೆಂಬರ್ 2021, 5:49 IST
ಅಕ್ಷರ ಗಾತ್ರ

‘ಪ್ರಜಾವಾಣಿ’ ಕಲಬುರಗಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ, ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಜನ ಕರೆ ಮಾಡಿ ಪರಿಹಾರ ಕಂಡುಕೊಂಡರು. ವಿಶೇಷವಾಗಿ ಓಮೈಕ್ರಾನ್‌ ಬಗೆಗಿನ ಆತಂಕ ಹಾಗೂ 18 ವರ್ಷದೊಳಗಿನ ಮಕ್ಕಳ ಸುರಕ್ಷತೆ ಬಗ್ಗೆಯೇ ಹೆಚ್ಚು ಪ್ರಶ್ನೆಗಳು ಕೇಳಿಬಂದವು. ಜಿಲ್ಲಾ ಸಾಂಕ್ರಾಮಿಕ ರೋಗ ನಿಯಂತ್ರಣ ಘಟಕದ ಅಧಿಕಾರಿ ಡಾ.ಚಂದ್ರಮೌಳಿ ಹಾಗೂ ಜಿಲ್ಲಾ ಕೀಟ ಶಾಸ್ತ್ರಜ್ಞ ಚಾಮರಾಜ ದೊಡಮನಿ ಅವರು ಎಲ್ಲರ ಗೊಂದಲಗಳಿಗೂ ಪರಿಹಾರ ಸೂಚಿಸಿದರು‌. ಜಿಲ್ಲಾ ವಿಬಿಡಿ ಸಂಯೋಜಕ ಕಾರಣಿಕ ಕೋರೆ ಕೂಡ ಅವರೊಂದಿಗೆ ಇದ್ದರು. ಆಯ್ದೆ ಪ್ರಶ್ನೋತ್ತರಗಳು ಇಲ್ಲಿವೆ...

ಪ್ರದೀಪ, ಕಲಬುರಗಿ

* ಓಮೈಕ್ರಾನ್‌ ಈ ಹಿಂದಿನ ಎಲ್ಲ ವೈರಸ್‌ಗಳಿಗಿಂತ ವೇಗವಾಗಿ ಹರಡುತ್ತದೆ ಎಂಬುದು ನಿಜವೇ?

– ಕೊರೊನಾದ ರೂಪಾಂತರಿ ವೈರಾಣು ಓಮೈಕ್ರಾನ್‌ ವೇಗವಾಗಿ ಹರಡುತ್ತದೆ ಎನ್ನುವುದ ನಿಜ. ಆದರೆ, ಇದು ಈ ಹಿಂದಿನ ವೈರಸ್‌ಗಳಷ್ಟು ಅಪಾಯಕಾರಿ ಅಲ್ಲ. ಪ್ರಾಣಕ್ಕೆ ಹಾನಿ ತಂದೊಡ್ಡುವಷ್ಟು ಗಂಭೀರ ಸ್ಥಿತಿಗೆ ತಲುಪುವುದು ವಿರಳ. ಇದರ ಬಗ್ಗೆ ಊಹಾಪೋಹಗಳಿಗೆ ಜನ ಕಿವಿಗೊಡಬಾರದು. ನಿಮ್ಮ ವೈಯಕ್ತಿಕ ಸುರಕ್ಷತಾ ಕ್ರಮಗಳೇ ನಿಮ್ಮನ್ನು ವೈದ್ಯರಿಗಿಂತ ಹೆಚ್ಚಾಗಿ ಕಾಪಾಡುತ್ತವೆ. ದೇಶದಲ್ಲಿ ಇದೂವರೆಗೆ 26 ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಯಾರದೂ ಜೀವಹಾನಿ ಆಗಿಲ್ಲ.

ರಾಜಶೇಖರ್‌, ಕಲಬುರಗಿ

* ಓಮೈಕ್ರಾನ್‌ನ ಪ್ರಾಥಮಿಕ ಲಕ್ಷಣಗಳು ಏನಿವೆ?‌

–ಓಮೈಕ್ರಾನ್‌ ಕೂಡ ಕೊರನಾ ತಳಿಯೇ ಆಗಿದ್ದರಿಂದ ರೋಗ ಲಕ್ಷಣಗಳಲ್ಲಿ ವ್ಯತ್ಯಾಸ ಏನೂ ಇಲ್ಲ. ಶೀತ, ಕೆಮ್ಮು, ಜ್ವರ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಒಣ ಕಫ (ಡ್ರೈಕಫ್‌) ಇದರ ವಿಶೇಷ ಲಕ್ಷಣ.

ಮಲ್ಲಿಕಾರ್ಜುನ

* ಈ ಹಿಂದಿನ ವೈರಾಣುವಿಗೂ ಇದಕ್ಕೂ ಏನು ವ್ಯತ್ಯಾಸ?

–ಡೆಲ್ಟಾ ವೈರಾಣು ಹೆಚ್ಚು ಪ್ರಭಾವಿ ಆಗಿತ್ತು. ಅದು ಶ್ವಾಸಕೋಶಕ್ಕೆ ದಾಳಿ ಇಟ್ಟು, ಉಸಿರಾಟದ ತೊಂದರೆ ಮಾಡುತ್ತಿತ್ತು. ಆದರೆ, ಓಮೈಕ್ರಾನ್‌ನಲ್ಲಿ ಅಂಥ ಅಂಶಗಳು ಕಡಿಮೆ. ಉಳಿದಂತೆ, ಇದರ ಉಪಚಾರ, ಚಿಕಿತ್ಸಾ ಕ್ರಮ, ಔಷಧಿ ಯಾವುದರಲ್ಲೂ ವ್ಯತ್ಯಾಸವಿಲ್ಲ. ಹಳೆಯ ಕೊರೊನಾದಂತೆಯೇ ಇದನ್ನೂ ನಿಗ್ರಹ ಮಾಡಬೇಕಾಗುತ್ತದೆ.

ಈಶ್ವರ, ಜೇವರ್ಗಿ

* ಓಮೈಕ್ರಾನ್‌ ಕೊರೊನಾದ ಕೊನೆಯ ರೂಪಾಂತರಿ ಎನ್ನುತ್ತಾರೆ, ನಿಜವೇ?

–ಈ ಬಗ್ಗೆ ನಮ್ಮ ದೇಶದಲ್ಲೂ ಹಲವು ತಜ್ಞರು, ವಿಜ್ಞಾನಿಗಳು ಸಾಕಷ್ಟು ಸಂಶೋಧನೆ ನಡೆಸಿದ್ದಾರೆ. ಬಹಳಷ್ಟು ಮಂದಿಯ ಅಭಿಪ‍್ರಾಯ ಇದು ಕೊನೆಯ ತಳಿ, ಇದರ ಬಳಿಕ ಕೊರೊನಾ ನಾಶವಾಗುತ್ತದೆ ಎಂಬುದೇ ಆಗಿದೆ. ಆದರೆ, ರೂಪಾಂತರಿಯಲ್ಲಿ ಇನ್ನೂ 160ಕ್ಕೂ ಹೆಚ್ಚು ತಳಿಗಳು ಇವೆ. ಅವುಗಳ ಬಗ್ಗೆಯೂ ಸಂಶೋಧನೆ ನಡೆದಿದೆ. ಯಾವುದೂಇನ್ನೂ ಪೂರ್ಣಪ್ರಮಾಣದ ನಿರ್ಧಾರವಾಗಿಲ್ಲ.

ವಿಜಯಕುಮಾರ್‌

* ಲಸಿಕೆ ಪಡೆದವರಿಗೂ ಓಮೈಕ್ರಾನ್‌ ಅಂಟುತ್ತದೆಯೇ?

– ಎರಡೂ ಡೋಸ್‌ ಲಸಿಕೆ ಪಡೆದವರಿಗೆ ಸೋಂಕು ಅಂಟಿಕೊಳ್ಳುವುದಿಲ್ಲ ಎಂದಲ್ಲ. ಆದರೆ, ಅವರ ಆರೋಗ್ಯ ಕ್ಷೀಣಿಸುವುದಿಲ್ಲ. ಹಾಗಾಗಿ, ಲಸಿಕೆ ಪಡೆದವರು ಕೂಡ ಕೋವಿಡ್‌ ನಿಯಮಗಳನ್ನು ಪಾಲಿಸಲೇಬೇಕು.

ಗುರು ಹಳ್ಳಿಗೌಡ, ಚಿಂಚೋಳಿ

* ಚಿಂಚೋಳಿ ತಾಲ್ಲೂಕು ಆಸ್ಪತ್ರೆಯಲ್ಲಿ ಡೆಂಗಿ ಲ್ಯಾಬ್‌ ಇಲ್ಲ, ಶೀಘ್ರ ಆರಂಭಿಸಿ.

–ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಮಾತ್ರ ಡೆಂಗಿ ಪ್ರಯೋಗಾಲಯವಿದೆ. ಬಹಳ ದೂರವಿರುವ ಚಿಂಚೋಳಿ, ಯಾದಗಿರಿ ಮುಂತಾದ ಕಡೆಯೂ ಡೆಂಗಿ ಪತ್ತೆಯಾಗಿವೆ. ಆದರೆ, ಪ್ರಯೋಗಾಲಯ ಸ್ಥಾಪನೆಯ ವಿಚಾರ ಇನ್ನೂ ಬಂದಿಲ್ಲ. ರೋಗಲಕ್ಷಣವಿದ್ದರೆ ಮಾದರಿ ತಪಾಸಣೆಗೆ ರೋಗಿ ಕಲಬುರಗಿಗೇ ಬರಬೇಕೆಂದಿಲ್ಲ. ಅವರು ಇದ್ದಲ್ಲಿಯೇ ಆರೋಗ್ಯ ಇಲಾಖೆ ಸಿಬ್ಬಂದಿ ಮಾದರಿ ಸಂಗ್ರಹಿಸಿ ಕಳುಹಿಸುತ್ತಾರೆ.

ರಮೇಶ ಬಳೂರ್ಗಿ

* ರೋಗ ಹರಡುವ ಮುನ್ನ ಸೊಳ್ಳೆ ನಿಯಂತ್ರಣ ಮಾಡಬಾರದೇಕೆ?

– ಡೆಂಗಿ, ಮಲೇರಿಯಾ, ಚಿಕೂನ್‌ ಗುನ್ಯದಂಥ ರೊಗಾಣು ಸೊಳ್ಳೆಗಳು ನಿಂತ ನೀರಿನಲ್ಲಿ ಹೆಚ್ಚಾಗಿ ಹುಟ್ಟುತ್ತವೆ. ಎಲ್ಲಿ ಈ ಪ್ರಕರಣ ಕಾಣಿಸಿಕೊಳ್ಳುತ್ತವೆಯೋ ಅಲ್ಲಿನ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿ ಕೀಟನಾಶಕಗಳ ಸಿಂಪಡಣೆಗೆ ಸಲಹೆ ನೀಡುತ್ತೇವೆ. ಆದರೆ, ಪ್ರಕರಣ ಕಂಡುಬರದ ಊರಲ್ಲಿ ಸುಮ್ಮನೇ ಫಾಗಿಂಗ್ ಮಾಡಬಾರದು. ಅದರಲ್ಲೂ ರಾಸಾಯನಿಕ ಪದಾರ್ಥ ಇರುವ ಕಾರಣ ಬೇರೆ ತೊಂದರೆ ಆಗುವ ಸಾಧ್ಯತೆ ಇರುತ್ತದೆ. ಸೊಳ್ಳೆ ನಿಯಂತ್ರಣಕ್ಕಾಗಿ ಜೈವಿಕ ಕೀಟನಾಶಕವಾಗಿ ಗಪ್ಪಿ ಮತ್ತು ಗಂಬೂಷಿಯಾ ಎಂಬ ಮೀನು ಮರಿಗಳನ್ನು ಬಳಸುತ್ತಿದ್ದೇವೆ. ವಾಡಿ, ಚಿತ್ತಾಪುರ, ಶಹಾಬಾದ್‌ ಭಾಗಗಳಲ್ಲಿ ಕಲ್ಲು ಕ್ವಾರಿಗಳು ಹೆಚ್ಚಾಗಿದ್ದು, ಈ ಮೀನುಗಳನ್ನು ಬಿಟ್ಟಿದ್ದೇವೆ. ಅವು ಸೊಳ್ಳೆಗಳ ಮೊಟ್ಟೆ ತಿಂದು ರೋಗ ಹರಡದಂತೆ ಮಾಡುತ್ತವೆ.

ಕಾವೇರಿ, ಎಸ್‌.ಪಿ. ಹಿರೇಮಠ, ಬಸವ ಕಲ್ಯಾಣ

* 16 ವರ್ಷದ ಮಕ್ಕಳಿಗೆ ಲಸಿಕೆ ಕೊಡಿಬಹುದೇ?
–ವಿಶ್ವ ಆರೋಗ್ಯ ಸಂಸ್ಥೆಯು 18 ವರ್ಷಕ್ಕಿಂತ ಕಡಿಮೆ ವಯೋಮಾನದವರಿಗೆ ಲಸಿಕೆ ನೀಡಲು ಇನ್ನೂ ಅನುಮತಿ ನೀಡಿಲ್ಲ. ಮಕ್ಕಳಲ್ಲಿ ಲಸಿಕೆಯು ಅಡ್ಡ ಪರಿಣಾಮ ಉಂಟು ಮಾಡಬಹುದು ಎಂಬ ಆತಂಕವೂ ಇದೆ. ಸರ್ಕಾರ ಈ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸದ್ಯಕ್ಕೆ ಲಸಿಕೆ ವಿತರಣೆ ಇಲ್ಲ.

ದುರ್ಜನಪ್ಪ ನಾಟೀಕಾರ, ಅಲ್ಲೂರ್ (ಬಿ)

* ಸುಮಾರು 6 ತಿಂಗಳ ಹಿಂದೆ ನಮ್ಮ ಊರಿನಲ್ಲಿ 140ಕ್ಕೂ ಅಧಿಕ ಸಾವುಗಳು ಜ್ವರ, ವಾಂತಿಯಿಂದ ಸಂಭವಿಸಿದವು. ಈ ಬಗ್ಗೆ ಏನಾದರೂ ಕಾರಣ ಪತ್ತೆ ಹಚ್ಚಿದ್ದೀರಾ?

–ನೀವು ಹೇಳಿದ ಸಮಯದಲ್ಲಿ ಕೋವಿಡ್‌ ಎರಡನೇ ಅಲೆ ಜಾಸ್ತಿ ಇತ್ತು. ಆ ಸಂದರ್ಭದಲ್ಲಿ ಅವರು ವೈದ್ಯರ ಬಳಿ ಬಂದು ತಪಾಸಣೆ ಮಾಡಿಸಿಕೊಂಡಿದ್ದರೆ ಕೋವಿಡ್‌ ಪಾಸಿಟಿವ್ ಇದೆಯೇ ಇಲ್ಲವೇ ಎಂಬುದು ಗೊತ್ತಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ನೀವು ವೈದ್ಯರನ್ನು ಭೇಟಿ ಮಾಡಿ ಮಾಹಿತಿ ನೀಡಬಹುದು. ಇಲ್ಲವೇ, ಆಶಾ ಕಾರ್ಯಕರ್ತೆಯರಿಗೂ ತಿಳಿಸಬಹುದು.

ಮಹಾಂತೇಶ ಸಣಮನಿ, ಅಫಜಲಪುರ

* ನನ್ನ ಮಗುವಿನ ಹೊಟ್ಟೆಯ ಕೆಳಭಾಗದಲ್ಲಿ ಕೆಂಪಗೆ ಗುಳ್ಳೆಗಳು ಎದ್ದಿವೆ. ಪರಿಹಾರವೇನು?

– ಈ ಬಗ್ಗೆ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚರ್ಮವೈದ್ಯರನ್ನು ಕಾಣಬೇಕು. ಇದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದ್ದು, ವೈದ್ಯರು ತಪಾಸಣೆ ನಡೆಸಿ ಪರಿಹಾರ ಸೂಚಿಸುತ್ತಾರೆ.

*
ಮಕ್ಕಳ ರಕ್ಷಣೆಗೆ ಹೀಗೆ ಮಾಡಿ
ಬೆಚ್ಚಗಿನ ಉಲ್ಲನ್‌ ಬಟ್ಟೆ, ಕಿವಿಗಳಿಗೆ ಸ್ಕಾರ್ಪ್‌ ಹಾಕಿ, ಬಿಸಿಬಿಸಿ ಊಟ, ಬಿಸಿನೀರು ಮಾತ್ರ ಕೊಡಿ, ಶಾಲೆಗಳಲ್ಲಿ ಒಬ್ಬರಿಂದ ಒಬ್ಬರು ಊಟ ಹಂಚಿಕೊಳ್ಳಬೇಡಿ, ಕೈಕುಲುಕುವ, ಅಂಟಿಕೊಂಡು ಓಡಾಡುವ, ಕುಳಿತುಕೊಳ್ಳುವು ರೂಢಿ ಬಿಡಿ, ತರಗತಿಗಳಲ್ಲಿ ಇದ್ದಾಗ, ಮೈದಾನದಲ್ಲಿದ್ದಾಗ, ಎಲ್ಲಿಯೇ ಆದರೂ ಮಾಸ್ಕ್‌ ಧರಿಸಿ, ಶಾಲೆಯಿಂದ, ಆಟದಿಂದ ಮನೆಗೆ ಬರುವ ಮಕ್ಕಳಿಗೆ ಸಾಬೂನಿನಿಂದ ತಕ್ಷಣ ಕೈ–ಕಾಲು ತೊಳೆಸಿ ಎಂದು ಅಧಿಕಾರಿಗಳು ಕಲಬುರಗಿಯ ಭಾರತಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

*
ಮತ್ತೊಂದು ಲಸಿಕೆ ಕೊಡುತ್ತಾರೆಯೇ?
‘ಬೂಸ್ಟರ್‌ ಡೋಸ್‌’ ಲಸಿಕೆ ಕೂಡ ಕೊಡಬೇಕು ಎಂದು ಇಲಾಖೆ ನಿರ್ಧರಿಸಿದೆ. ಈಗಾಗಲೇ ಎರಡು ವ್ಯಾಕ್ಸಿನ್‌ ಪಡೆದವರು ಕೂಡ ಮೂರನೇ ಚುಚ್ಚುಮದ್ದು ಪಡೆಯಬೇಕು. ಆರಂಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ನೀಡಲಾಗುತ್ತದೆ. ಇದರೊಂದಿಗೆ 18 ವರ್ಷದೊಳಗಿನ ಮಕ್ಕಳಿಗೂ ಲಸಿಕೆ ನೀಡುವ ಬಗ್ಗೆ ಸಂಶೋಧನೆಗಳು ಮುಗಿದಿದ್ದು, ಆದಷ್ಟು ಬೇಗ ಅದೂ ಬರಬಹುದು ಎಂದು ಡಾ.ಚಂದ್ರಮೌಳಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

*
ಮತ್ತೆ 16 ಆನೆಕಾಲು ಪ್ರಕರಣ ಪತ್ತೆ
ಜಿಲ್ಲೆಯಲ್ಲಿ ಈವರೆಗೆ 7854 ಆನೆಕಾಲು ರೋಗಿಗಳು ಪ‍ತ್ತೆಯಾಗಿದ್ದಾರೆ. ಪ್ರಸಕ್ತ ವರ್ಷ ಮತ್ತೆ 16 ಹೊಸ ಪ್ರಕರಣಗಳು ಕಂಡುಬಂದಿದ್ದು, ಅವರಿಗೂ ಚಿಕಿತ್ಸೆ ಆರಂಭಿಸಲಾಗಿದೆ. ಈ ರೋಗ ಕೂಡ ‘ಕ್ಯೂಲೆಕ್ಸ್‌’ ಎಂಬ ಹೆಣ್ಣುಸೊಳ್ಳೆ ಕಚ್ಚಿದರೆ ಬರುತ್ತದೆ. ಹಾಗಾಗಿ, ಸೊಳ್ಳೆ ಕಚ್ಚಿಸಿಕೊಳ್ಳದಂತೆ ಜನ ಜಾಗೃತಿ ವಹಿಸಬೇಕು ಎಂದು ಚಾಮರಾಜ ದೊಡಮನಿ ಸಲಹೆ ನೀಡಿದರು.

ದೇಹದಲ್ಲಿ ಜೋತುಬಿದ್ದ ಭಾಗಗಳಾದ ಕೈ, ಕಾಲು, ವೃಷಣ, ಸ್ತನ ಮುಂತಾದ ಭಾಗಗಳಲ್ಲಿಯೇ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಮುಂಚಿತವಾಗಿಯೇ ಗುರುತಿಸಿದರೆ ಔಷಧೋಪಚಾರ ಮಾಡಬಹುದು. ಕಾಲು ಬಾತುಕೊಂಡರೆ ಶಸ್ತ್ರಚಿಕಿತ್ಸಾ ಕ್ರಮಗಳೂ ಜಿಮ್ಸ್‌ನಲ್ಲಿವೆ. ಈವರೆಗೆ 408 ಹೈಡ್ರೋಸಿಲ್‌ ಶಸ್ತ್ರಚಿಕಿತ್ಸೆ ಮಾಡಿದ್ದು, ಇನ್ನೂ 250 ಮಂದಿಗೆ ಈ ಚಿಕಿತ್ಸೆ ನೀಡಬೇಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT