ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ’ ಫೋನ್ ಇನ್: ಕೋವಿಡ್‌ ಮೂರನೇ ಅಲೆ: ನಿರ್ಲಕ್ಷ್ಯ ಮಾಡಬೇಡಿ

‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜಿಮ್ಸ್‌ ನಿರ್ದೇಶಕಿ ಡಾ.ಕವಿತಾ ಪಾಟೀಲ ಎಚ್ಚರಿಕೆ
Last Updated 30 ಜನವರಿ 2022, 19:31 IST
ಅಕ್ಷರ ಗಾತ್ರ

ಕಲಬುರಗಿ: ‘ಕೋವಿಡ್‌ ಮೂರನೇ ಅಲೆಯು ಹೆಚ್ಚು ಬಾಧಿಸುವುದಿಲ್ಲ ಎಂಬ ಉದಾಸೀನ ಬೇಡ. ಎಲ್ಲರೂ ಎಚ್ಚರ ವಹಿಸಿ ಕೋವಿಡ್‌ ನಿಯಮಗಳನ್ನು ಪಾಲಿಸುವುದು ಅವಶ್ಯ’ ಎಂದು ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್‌) ನಿರ್ದೇಶಕಿ ಡಾ.ಕವಿತಾ ಪಾಟೀಲ ಹೇಳಿದರು.

‘ಪ್ರಜಾವಾಣಿ’ ಕಲಬುರಗಿ ಕಚೇರಿಯಲ್ಲಿ ಭಾನುವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಓದುಗರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಮೊದಲ ಹಾಗೂ ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆಯಿಂದ ಹೆಚ್ಚು ತೊಂದರೆಯಾಗಿಲ್ಲ. ಜಿಮ್ಸ್‌ನಲ್ಲಿ ಸದ್ಯ 8 ಮಕ್ಕಳು ಮಾತ್ರ ದಾಖಲಾಗಿದ್ದಾರೆ. ಹಲವರಿಗೆ ಯಾವುದೇ ಲಕ್ಷಣಗಳು ಇಲ್ಲ. ಹಾಗೆಂದು ಈ ಸೋಂಕನ್ನು ಅಲಕ್ಷ್ಯ ಮಾಡಬೇಡಿ. ಸೋಂಕಿನಿಂದ ಮುಕ್ತಗೊಂಡ ಮೇಲೂ ಬೇರೆ ರೀತಿಯ ಪರಿಣಾಮಗಳು ಆರೋಗ್ಯದ ಮೇಲಾಗುವ ಸಾಧ್ಯತೆ ಇರುತ್ತದೆ’ ಎಂದರು.

‘ಈಗ ವೈದ್ಯಕೀಯ ಸೌಲಭ್ಯಗಳು ಹೆಚ್ಚಳವಾಗಿವೆ. ಅಗತ್ಯಕ್ಕೆ ಅನುಸಾರ ಆಮ್ಲಜನಕ ಸೌಕರ್ಯವುಳ್ಳ ಹಾಸಿಗೆಗಳಿವೆ. ಮಕ್ಕಳಿಗಾಗಿ ಪ್ರತ್ಯೇಕ ಕೋವಿಡ್‌ ವಾರ್ಡ್‌ ಇದೆ. ಮಕ್ಕಳನ್ನು ಸೋಂಕಿನಿಂದ ಪಾರುಮಾಡಲು ಜಿಮ್ಸ್‌ ಸಕಲ ಸಿದ್ಧತೆ ಮಾಡಿಕೊಂಡಿದೆ. ಯಾರೂ ಆತಂಕ ಪಡಬೇಕಾಗಿಲ್ಲ’ ಎಂದು ಜಿಮ್ಸ್‌ನ ಮಕ್ಕಳ ತಜ್ಞ ಡಾ.ರೇವಣಸಿದ್ಧಪ್ಪ ಬೋಸ್ಗಿ ತಿಳಿಸಿದರು.

‘ಫೋನ್‌ ಇನ್‌’ ಕಾರ್ಯಕ್ರಮದ ಆಯ್ದ ಕೆಲವು ಪ್ರಶ್ನೋತ್ತರಗಳು ಇಲ್ಲಿವೆ.

* ಮಕ್ಕಳಿಗೆ ಲಸಿಕೆಯಿಂದ ಏನಾದರೂ ತೊಂದರೆ ಇದೆಯೇ?

–15ರಿಂದ 18 ವರ್ಷದ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಕೊಡಿಸಿ. ದೊಡ್ಡವರಿಗಿಂತ ಮಕ್ಕಳಿಗೆ ಲಸಿಕೆ ಕೊಡುವ ಮುನ್ನ ವೈದ್ಯಕೀಯ ಪ್ರಯೋಗಗಳು ನಡೆದಿರುತ್ತವೆ. ಶೇ 2ರಷ್ಟು ಮಕ್ಕಳಲ್ಲಿ ಸಣ್ಣ ಪ್ರಮಾಣನದ ಅಡ್ಡಪರಿಣಾಮ ಸಹಜ. ಇದು ಬರೀ ಕೋವಿಡ್ ಲಸಿಕೆ ಅಷ್ಟೇ ಅಲ್ಲದೇ, ಇತರೆ ಲಸಿಕೆಗಳಲ್ಲೂ ಕಂಡು ಬರುತ್ತದೆ.

* ಜಿಲ್ಲೆಯಲ್ಲಿ ಓಮೈಕ್ರಾನ್ ಪತ್ತೆಯಾಗಿದೆಯೇ?

–ಜಿಲ್ಲೆಯಿಂದಲೇ ಈವರೆಗೆ 100 ಸೋಂಕಿತರ ಮಾದರಿಗಳನ್ನು ಜಿನೋಮ್‌ ಸಿಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ. ಯಾರಲ್ಲೂ ಓಮೈಕ್ರಾನ್‌ ಪತ್ತೆಯಾಗಿಲ್ಲ. ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಆದರೆ, ಶೇ 80ರಷ್ಟು ಜನರಲ್ಲಿ ಲಕ್ಷಣಗಳೇ ಇಲ್ಲ. ಮೇಲಾಗಿ, ವಿದೇಶದಿಂದ ಬಂದ ಹಲವರ ಗಂಟಲು ದ್ರವದ ಮಾದರಿಗಳನ್ನು ಜಿನೋಮ್‌ ಸಿಕ್ವೆನ್ಸಿಂಗ್‌ ತಪಾಸಣೆಗೆ ಕಳುಹಿಸುವ ಪ್ರಕ್ರಿಯೆ ಮುಂದುವರಿದಿದೆ. ಸದ್ಯ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಮಾತ್ರ ಈ ಪ್ರಯೋಗಾಲಯ ಚಾಲನೆಯಲ್ಲಿದೆ.

‌* ಲಸಿಕೆ ಪಡೆಯುವ ಮುನ್ನವೇ ಸಂದೇಶ ಬಂದಿದೆ. ಏನು ಮಾಡುವುದು?

–ಕುಟುಂಬದ ಎಲ್ಲ ಸದಸ್ಯರಿಗೂ ಒಂದೇ ಮೊಬೈಲ್‌ ಸಂಖ್ಯೆ ಕೊಟ್ಟಾಗ ಈ ರೀತಿ ಆಗುವ ಸಾಧ್ಯತೆ ಇರುತ್ತದೆ. ಅದಾಗಿಯೂ ತಾಂತ್ರಿಕ ದೋಷದಿಂದ ಅಥವಾ ನಿರ್ಲಕ್ಷ್ಯದ ಕಾರಣ ಈ ರೀತಿ ಯಾರಿಗಾದರೂ ಮೊಬೈಲ್‌ನಲ್ಲಿ ಸಂದೇಶ ಮೆಸೇಜ್‌ ಬಂದಿದ್ದರೆ ನಮ್ಮನ್ನು ಸಂಪರ್ಕಿಸಿ. ಸಮಸ್ಯೆ ಬಗೆಹರಿಸುತ್ತೇವೆ.

* ಕೋವಿಡ್‌ನಿಂದ ಹೃದಯಾಘಾತ ಆಗುತ್ತದೆಯೇ?

–ಕೋವಿಡ್‌ ತಗಲಿದ ಎಲ್ಲರಿಗೂ ಹೃದ್ರೋಗ ಅಥವಾ ಹೃದಯಾಘಾತ ಉಂಟಾಗುತ್ತದೆ ಎಂದೇನಿಲ್ಲ. ಆದರೆ, ಕೋವಿಡ್‌ ಬಂದ ಮೇಲೆ ಹೃದಯಾಘಾತದಿಂದ ಮೃತರಾದವರ ಸಂಖ್ಯೆ ದೊಡ್ಡದಿದೆ. ಈ ವೈರಾಣು ರಕ್ತವನ್ನು ಹೆಪ್ಪುಗಟ್ಟಿಸುವ ಗುಣ ಹೊಂದಿದೆ. ಕೆಲವರಿಗೆ ಚಿಕಿತ್ಸೆ ವೇಳೆ ರಕ್ತವನ್ನು ತಿಳಿಗೊಳಿಸುವಂಥ ಹಾಗೂ ಹೃದಯ ಬಡಿತ ಹೆಚ್ಚದಂತ ಔಷಧೋಪಚಾರ ಮಾಡಲಾಗುತ್ತದೆ. ಕೋವಿಡ್‌ ಅನ್ನು ತುಂಬ ಹಗುರವಾಗಿ ತೆಗೆದುಕೊಳ್ಳಬೇಡಿ.

* ಜಿಮ್ಸ್‌ನಲ್ಲಿ ಇತರ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಿ

–ಜಿಮ್ಸ್‌ಗೆ ಇನ್ನಷ್ಟು ಜಾಗ ಬೇಕಾಗಿದ್ದು, ಜಿಲ್ಲಾಡಳಿತಕ್ಕೆ ಈ ಕುರಿತು ಮನವಿ ಸಲ್ಲಿಸಲಾಗಿದೆ. ಮೂರು ಜಾಗಗಳ ಪೈಕಿ ಒಂದನ್ನು ನೀಡುವಂತೆಯೂ ಮನವಿ ಮಾಡಲಾಗಿದೆ.ಕೆಲವೇ ದಿನಗಳಲ್ಲಿ 11 ವಿಭಾಗಗಳಲ್ಲಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ ಆರಂಭವಾಗಲಿದ್ದು, 38 ಸೀಟುಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆ ವಿದ್ಯಾರ್ಥಿಗಳಿಗೆ ವಸತಿ ನಿಲಯ ಕಟ್ಟಿಸಬೇಕು. ಜಿಮ್ಸ್‌ ಈ ಭಾಗದ ಪ್ರತಿಷ್ಠಿತ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನಾಗಿ ಮಾಡಲು ಪ್ರಯತ್ನ ಮುಂದುವರಿದಿದ್ದು, ಪ್ರತ್ಯೇಕ ಪ್ರಯೋಗಾಲಯ, ಆಮ್ಲಜನಕ ಉತ್ಪಾದನಾ ಘಟಕವನ್ನು ನಿರ್ಮಿಸಲಾಗಿದೆ. ಮುಂದೆ ಇನ್ನಷ್ಟು ಕೋರ್ಸ್‌ಗಳು ಆರಂಭವಾಗಲಿದ್ದು, ಇದಕ್ಕೆಲ್ಲ ಸಾಕಷ್ಟು ಕಟ್ಟಡಗಳ ನಿರ್ಮಾಣ ಆಗಬೇಕಿದೆ. ಜಿಮ್ಸ್‌ ಬಳಿ 32 ಎಕರೆ ಜಾಗವಿದ್ದು, ಕನಿಷ್ಠ ಒಂದು ವೈದ್ಯಕೀಯ ಕಾಲೇಜು ಕಾರ್ಯಾರಂಭ ಮಾಡಲು 50 ಎಕರೆ ಜಾಗ ಬೇಕಾಗುತ್ತದೆ.

* ಆಂಬುಲೆನ್ಸ್‌ ಸಿದ್ಧತೆ ಹೇಗಿದೆ?

–ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯು ನಮ್ಮ ಮನವಿಯನ್ನು ಪರಿಗಣಿಸಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಎರಡು ಆಂಬುಲೆನ್ಸ್‌ಗಳನ್ನು ನೀಡಿದೆ. ಪ್ರಯೋಗಾಲಯಕ್ಕೂ ಉಪಕರಣಗಳನ್ನು ಕೊಡಿಸಿದೆ. ಅದರಿಂದಾಗಿಯೇ ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ರೋಗಿಗಳ ಒತ್ತಡ ಹೆಚ್ಚಾಗಿದ್ದರೂ ಹಲವು ಜೀವಗಳನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು. ಕಲಬುರಗಿ ಅಲ್ಲದೇ ಬೀದರ್, ಯಾದಗಿರಿ ಜಿಲ್ಲೆ ರೋಗಿಗಳು ದಾಖಲಾಗಿದ್ದರು. ಐಸಿಯು, ಎಚ್‌ಡಿಯು ಬೆಡ್‌ಗಳು ಭರ್ತಿಯಾಗಿದ್ದರಿಂದ ಸ್ಟ್ರೆಚರ್‌ ಮೇಲೆ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾಯಿತು.

ಬೇರೆ ವೈದ್ಯಕೀಯ ಕಾಲೇಜುಗಳಿದ್ದರೂ ಅವುಗಳಿಗಿಂತ ಜಿಮ್ಸ್‌ ಮೇಲೆ ಹೆಚ್ಚಿನ ಒತ್ತಡವಿತ್ತು. ನಮ್ಮ ವೈದ್ಯರು, ನರ್ಸ್‌ಗಳು ಹಗಲು ರಾತ್ರಿ ಕೆಲಸ ಮಾಡಿ ರೋಗಿಗಳನ್ನು ಉಳಿಸಿಕೊಳ್ಳುವಲ್ಲಿ ಶ್ರಮಿಸಿದರು. ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ಆದಾಗ್ಯೂ, ನಮ್ಮ ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿಗಳು ನಿಯಮಿತವಾಗಿ ಹೋಮ್ ಐಸೋಲೇಶನ್‌ನಲ್ಲಿರುವ ರೋಗಿಗಳಿಗೆ ಕರೆ ಮಾಡಿ ಅಗತ್ಯವಾದ ವೈದ್ಯಕೀಯ ನೆರವು ನೀಡುತ್ತಿದ್ದಾರೆ.

*

ಮರಣ ಪ್ರಮಾಣಪತ್ರದ ಗೊಂದಲ ನಿವಾರಿಸಿ

ಕೋವಿಡ್‌ನಿಂದ ಆಸ್ಪತ್ರೆಗೆ ದಾಖಲಾದ ಬಳಿಕ ಮೃತಪಟ್ಟ ಕೆಲವರ ‘ಮರಣ ಪ್ರಮಾಣಪತ್ರ’ದಲ್ಲಿ ಕೋವಿಡ್‌–19ನಿಂದ ಸಂಭವಿಸಿದ ಸಾವು ಎಂದು ನಮೂದಿಸಿಲ್ಲ. ಇದು ಪರಿಹಾರ ಪಡೆಯಲು ಸಮಸ್ಯೆಯಾಗಿದೆ. ಆದ್ದರಿಂದ ಈ ಗೊಂದಲ ನಿವಾರಿಸಬೇಕು ಎಂದು ಬಿ.ಎಂ. ರಾವೂರ ಕೋರಿದರು.

‘ಚಿಕಿತ್ಸೆ ನೀಡಿದ ಬಳಿಕ ನೆಗೆಟಿವ್‌ ಬಂದ ನಂತರವೂ ಕೆಲವು ಸಾವು ಸಂಭವಿಸಿವೆ. ಹಾಗಾಗಿ, ಅವರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂದು ಪ್ರಮಾಣ ಪತ್ರದಲ್ಲಿ ಇರುವುದಿಲ್ಲ. ಅಲ್ಲದೇ, ವಿವಿಧ ರೋಗಗಳಿಂದ ಬಳಲಿದ ಬಗ್ಗೆಯೂ ಪರಿಗಣಿಸಬೇಕಾಗುತ್ತದೆ. ಕೋವಿಡ್‌ ಡೆತ್‌ ಸರ್ಟಿಫಿಕೇಟ್‌ ನೀಡಲು ತಜ್ಞರ ಒಂದು ಸಮಿತಿ ಇದೆ. ಆ ಸಮಿತಿ ಎಲ್ಲ ಆಯಾಮಗಳನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡುತ್ತದೆ. ಗೊಂದಲವಿದ್ದವರು ಖುದ್ದು ಭೇಟಿ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು’ ಎಂದು ಜಿಮ್ಸ್‌ ನಿರ್ದೇಶಕಿ ಡಾ. ಕವಿತಾ ಪಾಟೀಲ ತಿಳಿಸಿದರು.

*

ಜಿನೋಮ್‌ ಸಿಕ್ವೆನ್ಸಿಂಗ್‌ ಲ್ಯಾಬ್‌ ಸಿದ್ಧ

ಜಿಮ್ಸ್‌ ಆಸ್ಪತ್ರೆಯಲ್ಲಿ ಕೂಡ ‘ಓಮೈಕ್ರಾನ್‌’ ಪತ್ತೆಗೆ ಬೇಕಾದ ‘ಜಿನೋಮ್‌ ಸಿಕ್ವೆನ್ಸಿಂಗ್‌’ ಪ‍್ರಯೋಗಾಲಯ ಈಗ ಸಿದ್ಧಗೊಂಡಿದೆ. ಎಲ್ಲ ವೈದ್ಯಕೀಯ ಸಲಕರಣೆಗಳು ಬಂದಿದ್ದು, ಒಬ್ಬ ವಿಜ್ಞಾನಿ ತರಬೇತಿ ಕೂಡ ಪಡೆದಿದ್ದಾರೆ. ಈ ಲ್ಯಾಬ್‌ ಸಲುವಾಗಿಯೇ ಹೊಸ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಬೇಕಾಗಿದೆ ಎಂದು ಡಾ.ಕವಿತಾ ಪಾಟೀಲ ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಜಿನೋಮಾಫ್‌ ವೈರಾಣು ರೂಪಾಂತರಗೊಂಡು ಓಮೈಕ್ರಾನ್‌ ಆಗಿದೆ. ‘ಜಿನೋಮ್‌ ಸಿಕ್ವೆನ್ಸಿಂಗ್‌’ ಪರೀಕ್ಷೆಯ ಮೂಲಕ ಮಾತ್ರ ಇದನ್ನು ದೃಢಪಡಿಸಲು ಸಾಧ್ಯ ಎಂದರು.

*

‘ಎರಡು ಬಾರಿ ಜೀವ ಉಳಿಸಿದ ಜಿಮ್ಸ್‌’

ಚಿತ್ತಾಪುರದಿಂದ ಕರೆ ಮಾಡಿದಅಯ್ಯಪ್ಪ ರಾಮತೀರ್ಥ ಅವರು ಜಿಮ್ಸ್‌ನ ನಿರ್ದೇಶಕಿ, ವೈದ್ಯರು ಹಾಗೂ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.‘ಎರಡು ಬಾರಿ ಕೋವಿಡ್‌ ಆದಾಗಲೂ ನನ್ನನ್ನು ಗುಣಮುಖ ಮಾಡಿ ಜೀವ ಉಳಿಸಿದ್ದೀರಿ. ನಿಮಗೆ ಕೃತಜ್ಞತೆ ಸಲ್ಲಿಸಲು ಆಗಲಿಲ್ಲ. ‘ಪ್ರಜಾವಾಣಿ’ ಫೋನ್‌ ಇನ್‌ ಕಾರಣ ಈ ಅವಕಾಶ ಸಿಕ್ಕಿತು. ನಿಮ್ಮ ಉಪಕಾರ ಮರೆಯಲಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT