ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಫೋನ್‌ ಇನ್ ಕಾರ್ಯಕ್ರಮ: ಗಾಯಾಳುಗಳ ನೆರವಿಗೆ ತುರ್ತು ಸ್ಪಂದನ ಪಡೆ

ಪೊಲೀಸ್ ಕಮಿಷನರ್ ಡಾ. ರವಿಕುಮಾರ್ ಮಾಹಿತಿ
Last Updated 11 ಜೂನ್ 2021, 3:08 IST
ಅಕ್ಷರ ಗಾತ್ರ

ಕಲಬುರ್ಗಿ: ರಸ್ತೆ ಅಪಘಾತ ನಡೆದ ಸಂದರ್ಭದಲ್ಲಿ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ, ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಹೆದ್ದಾರಿ ವಿಭಾಗದ ಕಿರಿಯ ಎಂಜಿನಿಯರ್ ಅವರನ್ನೊಳಗೊಂಡ ಸಮಿತಿ ಯನ್ನು ರಚಿಸಲಾಗುವುದು ಎಂದು ಕಲಬುರ್ಗಿ ಪೊಲೀಸ್ ಕಮಿಷನರ್ ಡಾ. ವೈ.ಎಸ್. ರವಿಕುಮಾರ್ ತಿಳಿಸಿದರು.

ಗುರುವಾರ ‘ಪ್ರಜಾವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಈ ಮಾಹಿತಿ ನೀಡಿದ ಅವರು, ‘ಅಪಘಾತ ನಡೆದ ಬಳಿಕ ಗಾಯಾಳುಗಳನ್ನು ಕರೆದೊಯ್ಯಲು ಆಂಬುಲೆನ್ಸ್, ವಾಹನ ಸಿಲುಕಿಕೊಂಡಿದ್ದರೆ ಅದನ್ನು ಎತ್ತಲು ಕ್ರೇನ್, ಗ್ಯಾಸ್ ಕಟ್ಟರ್ ಮತ್ತಿತರ ಸಾಮಗ್ರಿಗಳು ಬೇಕಾಗುತ್ತವೆ. ಈ ಸಮಿತಿಯು ತಕ್ಷಣ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಅಗತ್ಯವಿರುವ ಎಲ್ಲ ನೆರವನ್ನು ನೀಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಟಾಫ್ ನರ್ಸ್ ಅಗತ್ಯವಿರುವಷ್ಟು ಆಂಬುಲೆನ್ಸ್‌, ವೈದ್ಯಕೀಯ ಸಿಬ್ಬಂದಿಯನ್ನು ಕರೆಸಿಕೊಳ್ಳಲು ಏರ್ಪಾಡು ಮಾಡಬೇಕು. ಎಎಸ್‌ಐ ಹಂತದ ಪೊಲೀಸ್ ಅಧಿಕಾರಿ ಕ್ರೇನ್, ಗ್ಯಾಸ್‌ ಕಟ್ಟರ್‌ ಒದಗಿಸುವ ವ್ಯಕ್ತಿಗಳಿಗೆ ಮಾಹಿತಿ ನೀಡಿ ತಕ್ಷಣ ಸ್ಥಳಕ್ಕೆ ಬರುವಂತೆ ನೋಡಿಕೊಳ್ಳಬೇಕು.ಕಿರಿಯಎಂಜಿನಿಯರ್ ಅಪಘಾತಕ್ಕೆ ರಸ್ತೆಯಲ್ಲಿ ಏನಾದರೂ ಸಮಸ್ಯೆ ಇದೆಯೇ ಎಂಬುದನ್ನು ಗುರುತಿಸಿ ವರದಿ ನೀಡಬೇಕು’ ಎಂದರು.

‘ಸಮಿತಿ ರಚನೆ ಹೊಸದೇನೂ ಅಲ್ಲ. ಸುಪ್ರೀಂಕೋರ್ಟ್‌ ಈ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದನ್ನು ಅನುಸರಿಸುತ್ತೇವೆ’ ಎಂದು ಡಾ. ರವಿಕುಮಾರ್ ಸ್ಪಷ್ಟಪಡಿಸಿದರು.

ಲಾಕ್‌ಡೌನ್ ಬಳಿಕ ನಾಗರಿಕ ಸಮಿತಿ: ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಪೊಲೀಸರ ಹೊಣೆಯಾದರೂ ಅದಕ್ಕೆ ವಿವಿಧ ಬಡಾವಣೆಗಳ ನಾಗರಿಕ ಸಮಿತಿಗಳ ಸಹಕಾರವೂ ಅಷ್ಟೇ ಮುಖ್ಯ. ಲಾಕ್‌ಡೌನ್ ತೆರವುಗೊಂಡ ಬಳಿಕ ಸಮಿತಿಗಳನ್ನು ಸಕ್ರಿಯಗೊಳಿಸಲಾಗುವುದು. ಬಡಾವಣೆಗಳಲ್ಲಿ ಕಳ್ಳತನ ತಡೆಯಲು ನಗರದಾದ್ಯಂತ 48 ಸಿ.ಸಿ. ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ಯಾಮೆರಾಗಳನ್ನು ಅಳವಡಿಸುವ ಚಿಂತನೆ ಇದೆ ಎಂದರು.

ಫೋನ್ ಇನ್‌ನಲ್ಲಿ ‍ಓದುಗರು ಹಾಗೂ ಸಾರ್ವಜನಿಕರು ಕೇಳಿದ ಪ್ರಶ್ನೆಗಳು ಹಾಗೂ ಅದಕ್ಕೆ ಕಮಿಷನರ್‌ ಅವರು ನೀಡಿದ ಉತ್ತರದ ಆಯ್ದ ಭಾಗ ಇಲ್ಲಿದೆ.

l ಶಿಕ್ಷಕ ತರಬೇತಿ ಪಡೆದ ಹಲವರು ಉದ್ಯೋಗವಿಲ್ಲದೇ ಪರದಾಡುತ್ತಿದ್ದಾರೆ, ಅಂಥವರಿಗೆ ಇಲಾಖೆಯಿಂದ ಏನಾದರೂ ಸಹಾಯ ಸಾಧ್ಯವೆ?

–ಸದ್ಯ ಪೊಲೀಸರ ಸಂಖ್ಯೆ ಕಡಿಮೆ ಇರುವ ಕಾರಣ ಹಲವರನ್ನು ಸ್ವಯಂ ಸೇವಕರಾಗಿ ನೇಮಿಸಿಕೊಳ್ಳಲಾಗುತ್ತಿದೆ. ಆಸಕ್ತರು ಮುಂದೆ ಬಂದರೆ ಅವಶ್ಯವಿದ್ದಾಗ ಅವರಿಗೆ 15 ದಿನಗಳ ತರಬೇತಿ ನೀಡಿ ಸ್ವಯಂ ಸೇವೆಗೆ ಬಳಸಿಕೊಳ್ಳಲಾಗುವುದು.

l ಹುಮನಾಬಾದ್‌ ರಿಂಗ್‌ ರಸ್ತೆ ಸರ್ಕಲ್‌ನಿಂದ ನಾಲ್ಕೂ ದಿಕ್ಕಿನಲ್ಲಿ ಮೊಬೈಲ್‌, ಚೈನ್‌ ಕಳ್ಳತನ ಹೆಚ್ಚಿದೆ. ಅಲ್ಲಿ ಪೊಲೀಸ್‌ ಭದ್ರತೆ ಒದಗಿಸಿ.

–ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಬೈಕ್‌ ಮೇಲೆ ಬರುವ ಕಳ್ಳರು ಜೇಬಿನಲ್ಲಿದ್ದ ಮೊಬೈಲ್‌, ಕೊರಳಲ್ಲಿನ ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗುವ ಪ್ರಕರಣಗಳು ಗಮನಕ್ಕೆ ಬಂದಿವೆ. ವಸ್ತು ಕಳೆದುಕೊಂಡವರು ತಡ ಮಾಡದೇ ಅದೇ ದಿನ ದೂರು ದಾಖಲಿಸಿದರೆ ಕಳ್ಳರನ್ನು ಹಿಡಿಯಲು ಹೆಚ್ಚು ಅನುಕೂಲವಾಗುತ್ತದೆ.

l ಲಾಕ್‌ಡೌನ್‌ ನೆಪದಲ್ಲಿ ಬಾಲ್ಯವಿವಾಹಗಳನ್ನು ಕದ್ದುಮುಚ್ಚಿ ಮಾಡಲಾಗುತ್ತಿದೆ. ಇದನ್ನು ನಿಯಂತ್ರಿಸಲು ಏನು ಕ್ರಮ ಕೈಗೊಂಡಿದ್ದೀರಿ?

–ಮಹಿಳಾ ಮತ್ತು ಮಕ್ಕಳು ಅಭಿವೃದ್ಧಿ ಇಲಾಖೆಯಲ್ಲಿ ‍ಪ್ರತ್ಯೇಕ ತಂಡಗಳಿವೆ. ಅವುಗಳ ಜತೆ ಪೊಲೀಸರು ಯಾವಾಗಲೂ ಸಂಪರ್ಕದಲ್ಲಿರುತ್ತಾರೆ. ಇಂಥ ಮದುವೆಗಳನ್ನು ತಡೆಯುವ ಅಧಿಕಾರಿಗಳಿಗೆ ಸೂಕ್ತ ರಕ್ಷಣೆ ನೀಡಲಾಗುವುದು. ಜತೆಗೆ, ಬಾಲ್ಯ ವಿವಾಹ ನಡೆಯುವ ಬಗ್ಗೆ ಮಾಹಿತಿ ನೀಡುವವರಿಗೂ ಏನೂ ತೊಂದರೆ ಇಲ್ಲ. ಅವರ ಹೆಸರನ್ನು ಗುಪ್ತವಾಗಿ ಇಡಲಾಗುವುದು.

l ನಗರದ ವೃತ್ತ, ಚೌಕ್‌ಗಳಲ್ಲಿ ಎಲ್ಲೆಂದರಲ್ಲಿ ಆಟೊ ನಿಲ್ಲಿಸುತ್ತಾರೆ. ಇದನ್ನು ನಿಯಂತ್ರಿಸಿ

–ಈ ಬಗ್ಗೆ ಸಾಕಷ್ಟು ದಿನಗಳಿಂದ ಜನರು ದೂರು ಹೇಳುತ್ತಲೇ ಇದ್ದಾರೆ. ನಾವು ಜಾಗೃತಿ ಮೂಡಿಸಿದಾಗ ಆಟೊದವರು ಕೆಲವು ದಿನ ನಿಯಮ ಪಾಲಿಸುತ್ತಾರೆ. ಮತ್ತೆ ಅದೇ ಸ್ಥಿತಿ ಬರುತ್ತದೆ. ಎಲ್ಲ ವೃತ್ತ, ಚೌಕ್‌ಗಳಲ್ಲಿ ಈ ಬಗ್ಗೆ ಪೊಲೀಸರು ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡುವಂತೆ ಕ್ರಮ ಕೈಗೊಳ್ಳಲಾಗುವುದು. ನಿಯಮ ಮೀರುವ ಆಟೊದವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು.

l ಜಿಮ್ಸ್‌ ಆಸ್ಪತ್ರೆಯಲ್ಲಿ ಬೌನ್ಸರ್‌ಗಳನ್ನು ನಿಯೋಜನೆ ಮಾಡಿ ಜನರಿಗೆ ಭಯ ಮೂಡಿಸಲಾಗುತ್ತಿದೆ. ಅವರನ್ನು ತೆಗೆದು ಪೊಲೀಸ್‌ ಕಾವಲು ಹಾಕಲು ಸಾಧ್ಯವೇ?

–ಜಿಮ್ಸ್‌ ವೈದ್ಯರು, ಸಿಬ್ಬಂದಿಗೆ ಬೇಕಾದ ರಕ್ಷಣೆ ಕೊಡಲು ಪೊಲೀಸರು ಸದಾ ಸಿದ್ಧರಿದ್ದಾರೆ. ಬೌನ್ಸರ್‌ ನೇಮಕದ ಬಗ್ಗೆ ಜಿಮ್ಸ್‌ ಅಧಿಕಾರಿಗಳ ಜತೆಗೆ ಚರ್ಚಿಸಿ ನಿರ್ಧರಿಸಲಾಗುವುದು.

l ಪೊಲೀಸ್‌ ಮಾಹಿತಿಗಾಗಿ ಜನರು ಠಾಣೆಗೆ ಬರಲು ಹಿಂಜರಿಯುತ್ತಾರೆ. ಹಾಗಾಗಿ, ಪೊಲೀಸರೇ ಜನರ ಮಧ್ಯೆ ಬಂದು ಕಾರ್ಯಕ್ರಮ ಮಾಡಬಹುದೇ?

–ಸಮಾಜ, ಸಮುದಾಯಗಳ ಮುಖಂಡರು ಮುಂದೆ ಬಂದು ಸ್ಥಳದ ವ್ಯವಸ್ಥೆ ಮಾಡಿದರೆ ಪೊಲೀಸರು ಅವರೊಂದಿಗೆ ಕೈ ಜೋಡಿಸುತ್ತಾರೆ. ಜನಸ್ನೇಹಿ ಪೊಲೀಸ್‌ ವ್ಯವಸ್ಥೆಗೆ ಬೇಕಾದ ಎಲ್ಲ ಪ್ರಯತ್ನಗಳಿಗೂ ನಾವು ಸಿದ್ಧರಿದ್ದೇವೆ.

***

₹ 1.5 ಕೋಟಿ ಕಳ್ಳತನ: ಇನ್ನೂ ಸಿಕ್ಕಿಲ್ಲ ಸುಳಿವು

ಇಲ್ಲಿನ ಗುಬ್ಬಿ ಕಾಲೊನಿಯ ಗವೇರ ಗೋಖಲೆ ಎನ್ನುವವರ ಮನೆಯಲ್ಲಿ 2020ರ ಜನವರಿ 6ರಂದು ವಜ್ರಾಭರಣ, ಚಿನ್ನಾಭರಣ, ನಗದು ಸೇರಿ ₹ 1.5 ಕೋಟಿ ಮೌಲ್ಯದ ಆಸ್ತಿ ಕಳ್ಳತನವಾಗಿದೆ. ಘಟನೆ ನಡೆದು ಒಂದೂವರೆ ವರ್ಷ ಕಳೆದರೂ ಈ ಬಗ್ಗೆ ಒಂದು ಸುಳಿವೂ ಸಿಕ್ಕಿಲ್ಲ ಎಂದು ಗೋಖಲೆ ಕರೆ ಮಾಡಿ, ಕಮಿಷನರ್ ಅವರ ಗಮನ ಸೆಳೆದರು.

‌ಇದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್ ಡಾ. ರವಿಕುಮಾರ್, ‘ಈ ಪ್ರಕರಣವನ್ನು ಪೂರ್ಣವಾಗಿ ಪರಿಶೀಲಿಸಿದ್ದೇನೆ. ದುಷ್ಕರ್ಮಿಗಳ ಪತ್ತೆಗೆ ಜಾಲ ಬೀಸಲಾಗಿದೆ. ಆದ್ಯತೆ ಮೇಲೆ ಪ್ರಕರಣ ಬಗೆಹರಿಸಲಾಗುವುದು’ ಎಂದರು.

‘ರಾಮಮಂದಿರ ವೃತ್ತದ ಬಳಿ ಪೊಲೀಸ್‌ ಹೊರಠಾಣೆ’

ಜೇವರ್ಗಿ ರಸ್ತೆಯ ರಾಮಮಂದಿರ ವೃತ್ತದ ಬಳಿ ಚಿನ್ನಾಭರಣ ಕಳ್ಳತನ, ಮಹಿಳೆಯರ ಚುಡಾಯಿಸುವಿಕೆ ಸೇರಿದಂತೆ ಹಲವು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಸಾಕಷ್ಟುದೂರುಗಳು ಬಂದಿವೆ. ಈ ಬಗ್ಗೆ ದೂರು ನೀಡಿದರೂ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬರುವುದು ತಡವಾಗುತ್ತದೆ. ಆದ್ದರಿಂದ ವೃತ್ತದ ಬಳಿ ಹೊರಠಾಣೆ ಆರಂಭಿಸುವ ಬೇಡಿಕೆ ಇದೆ ಎಂದು ಡಾ. ರವಿಕುಮಾರ್ ತಿಳಿಸಿದರು.

ರಾಮಮಂದಿರ ಹಾಗೂ ಸಾಯಿ ಮಂದಿರದಿಂದ ನಾಲ್ಕೈದು ಜನ ಹಿರಿಯ ನಾಗರಿಕರು,ಮಹಿಳೆಯರು ಕರೆ ಮಾಡಿದ ಸಂದರ್ಭದಲ್ಲಿ ಅವರು ಪ್ರತಿಕ್ರಿಯೆ ನೀಡಿದ ಕಮಿಷನರ್, ‘ಈ ಬಗ್ಗೆ ಒಪ್ಪಿಗೆಗಾಗಿ ಪ್ರಸ್ತಾವ ಕಳುಹಿಸಿಕೊಡುತ್ತೇನೆ. ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಗಸ್ತು ಹೆಚ್ಚಿಸಲೂಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ’ ಎಂದು ಭರವಸೆ ನೀಡಿದರು.

‘ಮನವಿ ಸಲ್ಲಿಸಲು ಅವಕಾಶ ನಿರಾಕರಿಸಿಲ್ಲ’

ಜನರು ತಮ್ಮ ಅಹವಾಲುಗಳನ್ನು ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಲು ಪೊಲೀಸರು ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದು ಪೊಲೀಸ್ ಕಮಿಷನರ್ ಸ್ಪಷ್ಟಪಡಿಸಿದರು.

ಈ ಕುರಿತು ಬಂದ ಕರೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಸಮಸ್ಯೆಗಳನ್ನು ಸಂಬಂಧಪಟ್ಟವರಿಗೆ ತಲುಪಿಸಲು ಎಲ್ಲರಿಗೂ ಹಕ್ಕಿದೆ. ಮೂರರಿಂದ ನಾಲ್ಕು ಜನ ಬಂದು ಮನವಿ ಸಲ್ಲಿಸಬಹುದು. ಅಗತ್ಯಬಿದ್ದರೆ ಅಧಿಕಾರಿಗಳನ್ನು ಭೇಟಿ ಮಾಡಬಹುದು’ ಎಂದರು.

‘ಗಂಭೀರ ಪ್ರಕರಣಗಳ ತನಿಖೆ ಶೀಘ್ರ’

ಭಾರಿ ಪ್ರಮಾಣದ ಕಳ್ಳತನ ಪ್ರಕರಣಗಳ ಬಗ್ಗೆ ಆಯಾ ಠಾಣೆಗಳ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಿಂದ ಮಾಹಿತಿ ತರಿಸಿಕೊಂಡು ಆದಷ್ಟು ಶೀಘ್ರವೇ ತನಿಖೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುತ್ತೇನೆ. ಕಳೆದ ಎರಡು ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಹಣ, ಚಿನ್ನಾಭರಣ ಕಳ್ಳತನ ನಡೆದಿರುವ ಬಗ್ಗೆ ಇತ್ತೀಚೆಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಅವುಗಳನ್ನು ಆದ್ಯತೆ ಮೇಲೆ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಸ್ವತ್ತುಗಳನ್ನು ಮರಳಿಸುವ ಕೆಲಸವನ್ನು ಚುರುಕುಗೊಳಿಸಲಾಗುವುದು ಎಂದು ಡಾ. ರವಿಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT