ಮಿಂಚಿನ ಪ್ರಶ್ನೆಗೆ ಶರವೇಗದ ಉತ್ತರ..!

7
ಕಲಬುರ್ಗಿ ವಲಯಮಟ್ಟದ ಪ್ರಜಾವಾಣಿ ಕ್ವಿಜ್ ಚಾಂಪಿಯನ್‌ಶಿಪ್‌

ಮಿಂಚಿನ ಪ್ರಶ್ನೆಗೆ ಶರವೇಗದ ಉತ್ತರ..!

Published:
Updated:
Prajavani

ಕಲಬುರ್ಗಿ: ಅಂತಿಮ ಸುತ್ತಿನವರೆಗೆ ತೀವ್ರ ಕುತೂಹಲ ಕೆರಳಿಸಿದ್ದ ‘ಪ್ರಜಾವಾಣಿ’ ರಸಪ್ರಶ್ನೆ ಸ್ಪರ್ಧೆಯಲ್ಲಿ ನಗರದ ಚಂದ್ರಕಾಂತ ಪಾಟೀಲ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು 105 ಅಂಕಗಳನ್ನು ಗಳಿಸುವ ಮೂಲಕ ಬೆಂಗಳೂರಿನಲ್ಲಿ ಜ. 24ರಂದು ನಡೆಯಲಿರುವ ಅಂತಿಮ ಸುತ್ತಿಗೆ ಆಯ್ಕೆಯಾದರು.

ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗದಿಂದ ಶಾಲಾ ವಿದ್ಯಾರ್ಥಿಗಳಿಗಾಗಿ ಶುಕ್ರವಾರ ಆಯೋಜಿಸಿದ್ದ ವಲಯ ಮಟ್ಟದ 5ನೇ ವರ್ಷದ ‘ಪ್ರಜಾವಾಣಿ’ ಕ್ವಿಜ್ ಚಾಂಪಿಯನ್‌ಶಿಪ್‌ಗೆ ವಿದ್ಯಾರ್ಥಿಗಳ ದಂಡೇ ಹರಿದು ಬಂದಿತ್ತು. ಬೀದರ್, ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳ ಸುಮಾರು 100 ಶಾಲೆಗಳ 600ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು.

ಕ್ಯೂರಿಯಾಸಿಟಿ ಸಲ್ಯೂಷನ್ಸ್‌ನ ಕ್ವಿಜ್ ಮಾಸ್ಟರ್ ಮೇಘವಿ ಅವರು ಕೇಳುತ್ತಿದ್ದ ಮಿಂಚಿನಂತ ಪ್ರಶ್ನೆಗಳಿಗಳಿಗೆ ವಿದ್ಯಾರ್ಥಿಗಳು ಶರವೇಗದಲ್ಲಿ ಉತ್ತರ ನೀಡಿದರು. ಸಭಿಕರಿಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ಹೇಳಲು ನಾಮುಂದು ತಾಮುಂದು ಎಂದು ಎಲ್ಲರೂ ಮುಗಿಬಿದ್ದಿದ್ದರು. ಎಲ್ಲಾ ಪ್ರಶ್ನೆಗಳಿಗೆ ಜಾಣ್ಮೆ, ತಾಳ್ಮೆ ಮತ್ತು ಚತುರತೆಯಿಂದ ಉತ್ತರ ನೀಡಿದ ವಿದ್ಯಾರ್ಥಿಗಳು ಎಲ್ಲರನ್ನೂ ಬೆರಗಾಗಿಸಿದರು.

ಖಾಸಗಿ ಶಾಲೆಗಳಿಗೆ ಪೈಪೋಟಿ ಎಂಬಂತೆ ಚಿತ್ತಾಪುರ ತಾಲ್ಲೂಕು ರಾಮತೀರ್ಥ ಮತ್ತು ಭೀಮಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಅಂತಿಮ ಹಂತದ ಸ್ಪರ್ಧಗೆ ಆಯ್ಕೆಯಾಗಿದ್ದು ವಿಶೇಷವಾಗಿತ್ತು. ರಾಮತೀರ್ಥ ಶಾಲೆಯ ಮೋಹನರೆಡ್ಡಿ ಮತ್ತು ಕರುಣಾ ಅವರ ತಂಡ ‘ಸ್ಟಾರ್ ಪರ್ಫಾರ್ಮರ್’ ಆಗಿ ಹೊರಹೊಮ್ಮಿ ಎಲ್ಲರಿಂದ ಚಪ್ಪಾಳೆ, ಅಭಿನಂದನೆಗನ್ನು ಗಿಟ್ಟಿಸಿಕೊಂಡರು. ಮೇಘವಿ ಅವರು ಕೂಡ ಈ ತಂಡವನ್ನು ಅಭಿನಂದಿಸಿದರು.

ಆರಂಭದಲ್ಲಿ 20 ಅಂಕಗಳಿಗೆ 20 ಲಿಖಿತ ಪ್ರಶ್ನೆಗಳನ್ನು ಕೇಳಲಾಯಿತು. ಇವುಗಳಲ್ಲಿ 10ರಿಂದ 15ನೇ ಪ್ರಶ್ನೆಗಳು ಸ್ಟಾರ್ ಮಾರ್ಕ್ (ನಕ್ಷತ್ರ ಗುರುತು)ನ ಪ್ರಶ್ನೆಗಳಾಗಿದ್ದವು. ಈ ಪ್ರಶ್ನೆಗಳಿಗೆ ಜಾಣ್ಮೆಯಿಂದ ಉತ್ತರಿಸುವಂತೆ ಮೇಘವಿ ಅವರು ಮೊದಲೇ ಹೇಳಿದ್ದರಿಂದ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಉತ್ತರ ಬರೆದರು. ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ, ಸಿನಿಮಾಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಇದ್ದವು.

ಲಿಖಿತ ಪ್ರಶ್ನೆಗಳಿಗೆ ಅತೀ ಹೆಚ್ಚು ಸರಿ ಉತ್ತರ ಬರೆದ ಕಲಬುರ್ಗಿಯ ಚಂದ್ರಕಾಂತ ಪಾಟೀಲ ಇಂಗ್ಲಿಷ್ ಮಾಧ್ಯಮ ಶಾಲೆ, ಎಸ್‌ಬಿಆರ್ ಪಬ್ಲಿಕ್ ಶಾಲೆ ಮತ್ತು ಸೇಡಂ ತಾಲ್ಲೂಕು ಮಳಖೇಡದ ಆದಿತ್ಯ ಬಿರ್ಲಾ ಪಬ್ಲಿಕ್ ಶಾಲೆ, ಚಿತ್ತಾಪುರ ತಾಲ್ಲೂಕು ರಾಮತೀರ್ಥ, ಭೀಮಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಎಸ್‌ಆರ್‌ಎಸ್‌ಡಿಎಫ್‌ ಶಾಲೆಗಳು ಕಲಬುರ್ಗಿ ವಲಯ ಮಟ್ಟದ ಅಂತಿಮ ಸುತ್ತಿಗೆ ಅರ್ಹತೆ ಪಡೆದವು.

ಅಂತಿಮ ಹಂತದಲ್ಲಿ ಐದು ಸುತ್ತಿನ ಸ್ಪರ್ಧೆಗಳು ನಡೆದವು. ಐಸ್ ಬ್ರೇಕರ್ಸ್, ಇಮೇಜ್, ಮಿಕ್ಸ್ಡ್‌ ಬ್ಯಾಗ್, ಕನೆಕ್ಟ್ ಮತ್ತು ಲಿಖಿತ ಹಾಗೂ ನೇರ ಉತ್ತರದ ಸ್ಪರ್ಧೆಗಳಿಗೆ ವಿದ್ಯಾರ್ಥಿಗಳು ಚುರುಕುನಿಂದ ಉತ್ತರ ನೀಡಿದರು.

ಮೊದಲ ಸುತ್ತಿನಿಂದ ಮುನ್ನಡೆ ಕಾಯ್ದುಕೊಂಡ ಚಂದ್ರಕಾಂತ ಪಾಟೀಲ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು 105 ಅಂಕಗಳೊಂದಿಗೆ ವಲಯಮಟ್ಟದ ವಿಜೇತರಾಗಿ ಚಪ್ಪಾಳೆ ಗಿಟ್ಟಿಸಿಕೊಂಡರು. ಮಳಖೇಡದ ಆದಿತ್ಯ ಬಿರ್ಲಾ ಪಬ್ಲಿಕ್ ಶಾಲೆಯ ಅಭಿನಂದನ್ ಅಗರವಾಲ್ ಮತ್ತು ನಾಗರಾಜ ಆರ್.ಹಳಿಮನಿ ದ್ವಿತೀಯ ಸ್ಥಾನ ಹಾಗೂ ಎಸ್‌ಬಿಆರ್ ಪಬ್ಲಿಕ್ ಶಾಲೆಯ ಅಜಯ್ ಎಸ್.ಕುಲಕರ್ಣಿ ಮತ್ತು ಅಪ್ಪಾರಾವ್ ಎ.ಮಾಲಿಪಾಟೀಲ ತೃತೀಯ ಸ್ಥಾನ ಪಡೆದರು. ಅಫಜಲಪುರದ ಎಸ್‌ಆರ್‌ಎಸ್‌ಎಫ್‌ಡಿ ಶಾಲೆ 30, ರಾಮತೀರ್ಥ ಮತ್ತು ಭೀಮಳ್ಳಿಯ ಸರ್ಕಾರಿ ಶಾಲೆಗಳು ಕ್ರಮವಾಗಿ 25 ಮತ್ತು 20 ಅಂಕಗಳನ್ನು ಪಡೆದವು.

ಸಭಿಕರ ಸುತ್ತಿನ ಪ್ರಶ್ನೆಗಳಿಗೆ ಬಹುತೇಕರು ಉತ್ಸಾಹದಿಂದ ಉತ್ತರಿಸಿದರು. ಮೈಕ್ ಕೊಡುವಂತೆ ವಿದ್ಯಾರ್ಥಿಗಳು ಕಿರುಚುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವಿಜೇತ ಸಭಿಕರಿಗೆ ‘ಪ್ರಜಾವಾಣಿ’ ಕ್ಯಾಲೆಂಡರ್ ಮತ್ತು ಚಾಕೊಲೇಟ್‌ಗಳನ್ನು ಬಹುಮಾನವಾಗಿ ನೀಡಲಾಯಿತು. 3–4 ಪ್ರಶ್ನೆಗಳಿಗೆ ಸರಿ ಉತ್ತರ ನೀಡಿ, 3–4 ಕ್ಯಾಲೆಂಡರ್‌ಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳು ಸಂಭ್ರಮದಿಂದ ಬೀಗಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜಾ ಪಿ. ಮಾತನಾಡಿ, ‘ಪ್ರಜಾವಾಣಿ ಪತ್ರಿಕೆಯು ಶಾಲಾ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿರುವುದು ಶ್ಲಾಘನೀಯ. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರೂ ಗೆದ್ದವರೆ. ಏಕೆಂದರೆ ಸೋಲು–ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ. ಮುಂದಿನ ವರ್ಷ ನಡೆಯುವ ’ಪ್ರಜಾವಾಣಿ’ ರಸಪ್ರಶ್ನೆಗೆ ಸ್ಪರ್ಧೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗಬೇಕು’ ಎಂದು ಹೇಳಿದರು.

ವಿಜೇತ ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜಾ ಪಿ. ಮತ್ತು ಸೈಯ್ಯದ್ ಅಕ್ಬರ್ ಹುಸೇನಿ ಶಾಲೆ (ಐಸಿಎಸ್‌ಸಿ)ಯ ಪ್ರಾಂಶುಪಾಲರಾದ ಅಯೋನಾ ವ್ಯಾಲರೀ ಅವರು ನಗದು ಬಹುಮಾನ ಮತ್ತು ಟ್ರೋಫಿಯನ್ನು ವಿತರಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !