ಶುಕ್ರವಾರ, ಫೆಬ್ರವರಿ 28, 2020
19 °C
ಕಲಬುರ್ಗಿ ವಿಭಾಗದ ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಶಿಪ್‌ನಲ್ಲಿ ವಿದ್ಯಾರ್ಥಿಗಳ ಸಾಧನೆ

ಪ್ರಜಾವಾಣಿ ಕ್ವಿಜ್‌: ರೇಣುಕಾ ಫೌಂಡೇಶನ್‌ ಸ್ಕೂಲ್‌ನ ದಿಶಾ, ಮುಬಿನ್‌ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇಲ್ಲಿನ ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಕಲಬುರ್ಗಿ ವಲಯ ಮಟ್ಟದ ‘ಪ್ರಜಾವಾಣಿ’ ಕ್ವಿಜ್‌ ಚಾಂಪಿಯನ್‌ಷಿಪ್‌ನಲ್ಲಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಹಾವಳಗಾದ ಶ್ರೀ ರೇಣುಕಾ ಫೌಂಡೇಶನ್‌ ಸ್ಕೂಲ್‌ ವಿದ್ಯಾರ್ಥಿಗಳಾದ ದಿಶಾ ಸಂಗಣ್ಣ ಮತ್ತು ಮುಬಿನ್‌ ಬಿಲ್ಲಾಡ ಪ್ರಥಮ ಸ್ಥಾನ ಪಡೆದು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಅಂತಿಮ ಸುತ್ತಿಗೆ ಆಯ್ಕೆಯಾದರು.

ಬೆಳಿಗ್ಗೆಯಿಂದ ಆರಂಭವಾದ ಚಾಂಪಿಯನ್‌ಶಿಪ್‌ನಲ್ಲಿ ಕಲಬುರ್ಗಿ, ಬೀದರ್‌, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಯ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೊದಲ ಸುತ್ತಿನಲ್ಲಿ ಲಿಖಿತ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಲಾಯಿತು. ಅದರಲ್ಲಿ ಆಯ್ದೆಯಾದ ಆರು ತಂಡಗಳನ್ನು ಎರಡನೇ ಸುತ್ತಿಗೆ ಆಯ್ಕೆ ಮಾಡಲಾಯಿತು.

ಅಂತಿಮ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿಸಿದ ಹಾವಳಗಾದ ಶ್ರೀ ರೇಣುಕಾ ಫೌಂಡೇಶನ್‌ ಸ್ಕೂಲ್‌ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಸ್ಥಾನವನ್ನು ಕಲಬುರ್ಗಿಯ ಅಪ್ಪಾ ಪಬ್ಲಿಕ್ ಸ್ಕೂಲ್‌ ವಿದ್ಯಾರ್ಥಿಗಳಾದ ದೀಪ್ತಿ ಎಸ್‌.ಎಂ. ಮತ್ತು ಸ್ಫೂರ್ತಿ ಎಸ್‌.ಎಸ್. ಪಡೆದರು. ಎಸ್‌ಬಿಆರ್‌ ಪ್ರೌಢಶಾಲೆಯ ಅಭಯ್ ಹರವಾಳಕರ್‌ ಮತ್ತು ಮುಬಶೀರ್‌ ಅಫ್ಜಲ್‌ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ನಗರದ ಸರ್ಕಾರಿ ಪ್ರೌಢಶಾಲೆಯ ಭಾಗ್ಯಶ್ರೀ ಮತ್ತು ಉಮೇಶ್, ಎಸ್‌ಆರ್‌ಎನ್‌ ಮೆಹ್ತಾ ಪ್ರೌಢಶಾಲೆಯ ವರುಣ್‌ ಮತ್ತು ಯೋಗೇಶ್, ಬೀದರ್‌ನ ಚನ್ನಬಸವೇಶ್ವರ ಚನ್ನಬಸವ ಗುರುಕುಲದ ನಾಗೇಶ ಮತ್ತು ಸುನಿಲ್‌ ಎರಡನೇ ಸುತ್ತಿಗೆ ಪ್ರವೇಶ ಪಡೆದ ಇತರ ಮೂರು ತಂಡಗಳ ವಿದ್ಯಾರ್ಥಿಗಳು.

ವಿಜೇತ ತಂಡಗಳಿಗೆ ಟ್ರೋಫಿ, ಪ್ರಶಸ್ತಿ ಮೊತ್ತ ಹಾಗೂ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರಾಜಾ ಪಿ., ‘ಇಲ್ಲಿಗೆ ಬರುವ ಎಲ್ಲರೂ ತಮ್ಮದೇ ತಂಡ ಗೆಲ್ಲಬೇಕು ಎಂದು ಬಯಸುತ್ತಾರೆ. ಹಾಗೆ ನೋಡಿದರೆ ಎಲ್ಲರೂ ವಿಜೇತರೇ. ಈ ವರ್ಷ ಬಹುಮಾನ ಪಡೆಯಲು ಸಾಧ್ಯವಾಗದವರು ಮುಂದಿನ ಪ್ರಯತ್ನದಲ್ಲಿ ಸಾಧನೆ ಮಾಡಿ’ ಎಂದು ಹಾರೈಸಿದರು.

ಕ್ವಿಜ್‌ ಮಾಸ್ಟರ್‌ ಮೇಘವಿ ಮಂಜುನಾಥ್‌ ಅವರು ಸ್ಪರ್ಧೆಗಳನ್ನು ನಡೆಸಿಕೊಟ್ಟರು.

ಪ್ರಾಥಮಿಕ ಸುತ್ತಿನಲ್ಲಿ 20 ಪ್ರಶ್ನೆಗಳನ್ನು ಕೇಳಲಾಗಿತ್ತು. ವಿವಿಧ ಶಾಲೆಗಳಿಂದ ಬಂದಿದ್ದ ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಬರೆಯುವಂತೆ ತಿಳಿಸಲಾಗಿತ್ತು. ಅವುಗಳ ಮೌಲ್ಯಮಾಪನ ಮಾಡಿ ಅದರಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಆರು ತಂಡಗಳಿಗೆ ಮುಂದಿನ ಸುತ್ತಿಗೆ ಆಯ್ಕೆ ಮಾಡಲಾಯಿತು. ವಿಡಿಯೊ, ಆಡಿಯೊ ಮೂಲಕ ಉತ್ತರಗಳಿಗೆ ಸುಳಿವು ನೀಡಲಾಯಿತು. ಆದಾಗ್ಯೂ ಆ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದಾದಾಗ ಪ್ರಶ್ನೆಗಳನ್ನು ಸಭಿಕರಿಗೆ ವರ್ಗಾಯಿಸಲಾಯಿತು. ಉತ್ತರ ಹೇಳಿದವರಿಗೆ ಬಹುಮಾನವನ್ನೂ ನೀಡಲಾಯಿತು.

ಇದಕ್ಕೂ ಮುನ್ನ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕೆನ್‌ ಬ್ರಿಡ್ಜ್‌ ಶಾಲೆಯ ನಿರ್ದೇಶಕ ನೌಶಾದ್ ಇರಾನಿ, ರೆಡ್ಡಿಸ್‌ ಕಂಪ್ಯೂಟರ್ಸ್‌ನ ಶಾಂತರೆಡ್ಡಿ ಪೇಠಶಿರೂರ, ಎಸ್‌ಬಿಆರ್ ಶಾಲೆಯ ಶ್ರೀಶೈಲ ಹೊಗಾಡೆ, ಎಸ್‌ಆರ್‌ಎನ್‌ ಮೆಹ್ತಾ ಶಾಲೆ ವಿದ್ಯಾರ್ಥಿ ಭಾಗೇಶ್‌ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು