ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಅನುವುಗಾರರ ಬದಲು ಬೇರೆಯವರ ನೇಮಕಕ್ಕೆ ವಿರೋಧ

ಶ್ರಮಜೀವಿಗಳ ವೇದಿಕೆಯಿಂದ ನಡೆಯುತ್ತಿರುವ ಪ್ರತಿಭಟನೆ 3ನೇ ದಿನಕ್ಕೆ
Last Updated 27 ಫೆಬ್ರುವರಿ 2020, 13:48 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕೃಷಿ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡಿಕೊಂಡು ಬರುತ್ತಿರುವ ರೈತ ಅನುವುಗಾರರನ್ನು ಕೈಬಿಟ್ಟು, ಅವರ ಬದಲಿಗೆ ಡಿಪ್ಲೊಮಾ ಓದಿದವರನ್ನು ಹೊರ ಗುತ್ತಿಗೆ ಆಧಾರದ ಮೇಲೆ ಏಜೆನ್ಸಿ ಮೂಲಕ ನೇಮಕ ಮಾಡಿಕೊಳ್ಳಲು ಕೃಷಿ ಇಲಾಖೆಯ ಕೆಲ ಅಧಿಕಾರಿಗಳು ಷಡ್ಯಂತ್ರ ನಡೆಸಿದ್ದಾರೆ’ ಎಂದು ಶ್ರಮಿಜೀವಿಗಳ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಆರೋಪಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಚಿವಾಲಯದಲ್ಲಿರುವ ಮೇಲಧಿಕಾರಿಗಳಿಗೆ ಅವರ ಕೆಳ ಹಂತದ ಕೆಲವು ಅಧಿಕಾರಿಗಳು ಸೇರಿಕೊಂಡು ಅನುವುಗಾರರು ತಾಂತ್ರಿಕ ಪರಿಣಿತರಲ್ಲ. ಅವರನ್ನು ಕೈಬಿಟ್ಟು, ಕೃಷಿ ಡಿಪ್ಲೊಮಾ ಕಲಿತವರನ್ನು ಹೊರ ಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳುವುದು ಒಳ್ಳೆಯದು ಎಂದು ಹೇಳುತ್ತಿದ್ದಾರೆ. ಖಾಸಗಿ ರಸಗೊಬ್ಬರ ಹಾಗೂ ಬೀಜ ಕಂಪನಿಯವರೇ ಕೆಲ ತರಬೇತಿಯನ್ನು ತಮ್ಮಲ್ಲಿ ಕೆಲಸ ಮಾಡುವವರಿಗೆ ಕೊಡಿಸಿರುತ್ತಾರೆ. ಅಂಥವರೇ ರೈತ ಅನುವುಗಾರರ ಬದಲು ಇವರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಕೆಲವರು ಕುತಂತ್ರ ನಡೆಸಿದ್ದಾರೆ. ಆಕಾಂಕ್ಷಿಗಳಿಂದ ಲಕ್ಷಾಂತರ ರೂಪಾಯಿಯನ್ನು ಲಂಚವಾಗಿ ಪಡೆಯುತ್ತಿರುವ ಗುಮಾನಿಗಳೂ ಇವೆ’ ಎಂದರು.

ಇತ್ತೀಚೆಗೆ ಕೃಷಿ ಇಲಾಖೆ ಅಧಿಕಾರಿಗಳು ಪ್ರತಿಭಟನೆ ನಡೆಸಿದ್ದು, ಖಾಲಿ ಹುದ್ದೆಗಳಿಗೆ ಸಿಬ್ಬಂದಿ ನೇಮಕ ಮಾಡುವ ಮೂಲಕ ತಮ್ಮ ಮೇಲೆ ಬಿದ್ದಿರುವ ಹೆಚ್ಚುವರಿ ಕೆಲಸದ ಒತ್ತಡವನ್ನು ಕಡಿಮೆ ಮಾಡುವಂತೆ ಮನವಿ ಮಾಡಿದ್ದಾರೆ. ಆ ಹುದ್ದೆಗಳಿಗೆ ರೈತ ಅನುವುಗಾರರನ್ನೇ ಪರಿಗಣಿಸಬೇಕು ಎಂದು ಒತ್ತಾಯಿಸಿ ಕಲಬುರ್ಗಿಯಲ್ಲಿ ನಡೆಯುತ್ತಿರುವ ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದೆ. ಬೇಡಿಕೆಗೆ ಸ್ಪಂದಿಸುವವರೆಗೂ ಹೋರಾಟ ನಿಲ್ಲುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಣ ಸೂಗೂರ, ಕೊಪ್ಪಳದ ಮೌನೇಶ , ಬಾಗಲಕೋಟೆಯ ಪಿ.ಎಸ್.ಪಾಟೀಲ,ವಿಜಯಪುರದ ಚಂದು ಚಲವಾದಿ ಇದ್ದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ವಿಧಾನಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ಕೃಷಿ ಸಚಿವ ಬಿ.ಸಿ.ಪಾಟೀಲ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು. ಅನುವುಗಾರರ ಹೋರಾಟ ಗಮನಕ್ಕೆ ಬಂದಿದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಚಂದ್ರಶೇಖರ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT