ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಂತ್ಯ ಕರ್ಫ್ಯೂ, ಗಡಿ ಬಂದ್‌ ಕ್ರಮ ಅವೈಜ್ಞಾನಿಕ

ಬಡವರನ್ನೇ ಗುರಿಯಾಗಿಸಿಕೊಂಡ ಬಿಜೆಪಿ ಸರ್ಕಾರ: ಕಾಂಗ್ರೆಸ್‌ ಮುಖಂಡ ಅಲ್ಲಮಪ್ರಭು ಪಾಟೀಲ ಆರೋಪ
Last Updated 8 ಆಗಸ್ಟ್ 2021, 15:31 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕೋವಿಡ್ ಮೂರನೇ ಅಲೆಯ ನೆಪದಲ್ಲಿ ರಾಜ್ಯದಾದ್ಯಂತ ಹೇರಿರುವ ವಾರಾಂತ್ಯ ಕರ್ಫ್ಯೂ ಹಾಗೂ ಗಡಿ ಬಂದ್‌ ನಿರ್ಧಾರಗಳು ಅವೈಜ್ಞಾನಿಕವಾಗಿವೆ. ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಬಡವರನ್ನೇ ಗುರಿಯಾಗಿಸಿಕೊಂಡು ಇಂಥ ನಿರ್ಧಾರ ಜಾರಿ ಮಾಡುತ್ತಿದೆ’ ಎಂದು ಕಾಂಗ್ರೆಸ್‌ ಮುಖಂಡ ಅಲ್ಲಮಪ್ರಭು ಪಾಟೀಲ ದೂರಿದರು.

‘ಕೊವಿಡ್‌ ಮೂರನೇ ಅಲೆ ಇನ್ನೂ ಆರಂಭವಾಗಿಲ್ಲ. ಸದ್ಯ ಕಾಣಿಸಿಕೊಳ್ಳುತ್ತಿರುವುದು ಎರಡನೇ ಅಲೆಯ ಮುಂದುವರಿದ ಭಾಗ ಎಂದು ತಜ್ಞರೇ ಹೇಳಿದ್ದಾರೆ. ಆದರೂ ಮೂರನೇ ಅಲೆಯ ಭಯ ಎಂದು ಹೇಳಿ ರಾಜ್ಯ ಸರ್ಕಾರ ಮಹಾರಾಷ್ಟ್ರದ ಗಡಿ ಬಂದ್‌ ಮಾಡಿದೆ. ಅಲ್ಲದೇ ವಾರಾಂತ್ಯ ಲಾಕ್‌ಡೌನ್‌ ಕಾರಣ ಸಣ್ಣಪುಟ್ಟ ವ್ಯಾಪಾರಿಗಳು, ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಕೊರೊನಾ ಶನಿವಾರ ಮತ್ತು ಭಾನುವಾರ ಮಾತ್ರ ಬರುತ್ತದೆಯೇ? ರಾಜ್ಯ ಸರ್ಕಾರದ ಉದ್ದೇಶವೇನು ಎಂಬುದು ಅರ್ಥವಾಗುತ್ತಿಲ್ಲ’ ಎಂದು ಅವರು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಒಂದೆಡೆ ಮೂರನೇ ಅಲೆ ಮಕ್ಕಳನ್ನು ಬಾಧಿಸುತ್ತದೆ ಎಂದೂ ಹೇಳುತ್ತಿದ್ದಾರೆ. ಇನ್ನೊಂದೆಡೆ ಆಗಸ್ಟ್‌ 23ರಿಂದ ಶಾಲೆಗಳನ್ನೂ ಆರಂಭಿಸುತ್ತಿದ್ದಾರೆ. ಇವರ ನಿರ್ಧಾರಗಳೇ ಅವೈಜ್ಞಾನಿಕವಾಗಿವೆ. ಹೊಸ ಮುಖ್ಯಮಂತ್ರಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗದೇ ಎಡವುತ್ತಿದ್ದಾರೆ’ ಎಂದರು.

‘ಬಿಜೆಪಿ ಹೊಸ ಸರ್ಕಾರ ಬಂದ ಮೇಲೆ ಮಂತ್ರಿಗಳು ರಾಜ್ಯದೆಲ್ಲೆಡೆ ಮೆರವಣಿಗೆ, ಸಂಭ್ರಮ, ಸನ್ಮಾನ ಸಮಾರಂಭ ನಡೆಸುತ್ತಿದ್ದಾರೆ. ಇವರಿಗೆ ಯಾವ ನಿರ್ಬಂಧ ಇಲ್ಲವೇ? ಆಗಸ್ಟ್‌ 16ರಿಂದ 20ರವರೆಗೆ ಸ್ವತಃ ಕೇಂದ್ರ ಮಂತ್ರಿಗಳೇ ರಾಜ್ಯದಲ್ಲಿ ಜನಾಶೀರ್ವಾದ ರ್‍ಯಾಲಿ ಆಯೋಜಿಸಿದ್ದಾರೆ. ಇದರಿಂದ ಕೊರೊನಾ ಹಬ್ಬುವುದಿಲ್ಲವೇ? ಇವರಿಗಾದರೇ ಯಾವುದೇ ನಿಯಮವಿಲ್ಲ. ಬಡವರು ವ್ಯಾಪಾರಿ ಮಾಡಿಕೊಂಡು ಬದುಕಲು ಅಡಚಣೆ ಮಾಡುತ್ತಿರುವುದು ಖಂಡನಾರ್ಹ’ ಎಂದೂ ಅವರು ಕಿಡಿ ಕಾರಿದರು.

‘ಕೊರೊನಾ ವೈರಾಣು ನಿಯಂತ್ರಣಕ್ಕೆ ಪೂರ್ಣ ಲಾಕ್‌ಡೌನ್‌ ಮಾಡುವುದಾದರೆ ನಮ್ಮ ಬೆಂಬಲವಿದೆ. ಆದರೆ, ಅದಕ್ಕೂ ಮುನ್ನ ಸಂಕಷ್ಟಕ್ಕೆ ಸಿಲುಕುವ ವರ್ತಕರು, ಕಾರ್ಮಿಕರು, ರೈತರಿಗೆ ನೆರವಿನ ಪ್ಯಾಕೇಜ್‌ ನೀಡಿಯೇ ಬಂದ್‌ ಮಾಡಬೇಕು’ ಎಂದೂ ಅಲ್ಲಮಪ್ರಭು ಆಗ್ರಹಿಸಿದರು.

‘ಗಡಿಗಳಲ್ಲಿ ಖಾಸಗಿ ವಾಹನಗಳಲ್ಲಿ ಬರುವ ಸಾಮಾನ್ಯರನ್ನು ವಾಪಸ್‌ ಕಳಿಸಲಾಗುತ್ತಿದೆ. ಆದರೆ, ರೈಲುಗಳು, ವಿಮಾನಗಳು ಸಂಚರಿಸುತ್ತಲೇ ಇವೆ. ಇವುಗಳಲ್ಲಿ ಬರುವವರಿಂದ ಕೊರೊನಾ ಹರಡುವುದಿಲ್ಲವೇ? ಮಾತ್ರವಲ್ಲ; ಕೇವಲ ಐದು ಚೆಕ್‌ಪೋಸ್ಟ್‌ ತೆರೆದು ತಲಾ ಇಬ್ಬರು ಸಿಬ್ಬಂದಿ ನಿಲ್ಲಿಸಿದ್ದಾರೆ. ಇದರಿಂದ ನಿಯಂತ್ರಣ ಹೇಗೆ ಸಾಧ್ಯ? ಮಹಾರಾಷ್ಟ್ರದಿಂದ ಬದಲು ಅನ್ಯಮಾರ್ಗಗಳು ಸಾಕಷ್ಟಿವೆ. ಈ ನಿರ್ಧಾರ ಸಂಪೂರ್ಣ ಅಸಮಂಜಸ’ ಎಂದೂ ಹೇಳಿದರು.

ಕಾಂಗ್ರೆಸ್‌ ದಕ್ಷಿಣ ವಿಧಾನಸಭಾ ಬ್ಲಾಕ್‌ ಅಧ್ಯಕ್ಷ ನೀಲಕಂಠ ಮೂಲಗೆ, ಮುಖಂಡರಾದ ಹುಲಿಗೆಪ್ಪ ಕನಕಗಿರಿ, ಸತೀಶ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT