ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಮಹಾನಗರ ಪಾಲಿಕೆ ಚುನಾವಣೆ ನಡೆಸಲು ಆಗ್ರಹ

Last Updated 10 ಆಗಸ್ಟ್ 2021, 3:50 IST
ಅಕ್ಷರ ಗಾತ್ರ

ಕಲಬುರ್ಗಿ: ‘ಸ್ಥಳೀಯ ಮಹಾನಗರ ಪಾಲಿಕೆಗೆ ಕಳೆದ ಮೂರು ವರ್ಷಗಳಿಂದ ಚುನಾವಣೆ ನಡೆಸಿಲ್ಲ. ಜನಪ್ರತಿನಿಧಿಗಳು ಇಲ್ಲದೇ ಇಷ್ಟು ದೀರ್ಘಕಾಲ ಒಂದು ಸ್ಥಳೀಯ ಸಂಸ್ಥೆ ಮುಂದುವರಿದಿರುವುದು ಪ್ರಜಾಪ್ರಭುತ್ವ ಲಕ್ಷಣವಲ್ಲ. ಕೂಡಲೇ ಚುನಾವಣೆ ನಡೆಸಬೇಕು’ ಎಂದು ಆಮ್‌ ಆದ್ಮಿ ಪಕ್ಷದ ಮುಖಂಡ ಎಚ್.ಡಿ. ಬಸವರಾಜು ಆಗ್ರಹಿಸಿದರು.

‘ಮೂರು ವರ್ಷಗಳಿಂದಲೂ ಪಾಲಿಕೆ ಕೇವಲ ಅಧಿಕಾರಿಗಳ ಆಡಳಿತಕ್ಕೆ ಸೀಮಿತವಾಗಿದೆ. ಜನಪ್ರತಿನಿಧಿ ಇಲ್ಲದಿದ್ದರೆ ಯಾವ ಅಭಿವೃದ್ಧಿ ಕಾರ್ಯ ನಿರೀಕ್ಷಿಸಲು ಸಾಧ್ಯವಿಲ್ಲ. ತಮ್ಮ ವಾರ್ಡಿಗೆ ಒಬ್ಬ ಪ್ರತಿನಿಧಿಯೇ ಇಲ್ಲವೆಂದರೆ ಜನರು ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು? ಈ ಹಿಂದೆ ವಾರ್ಡ್‌ ವಿಂಗಡನೆ ವಿಚಾರ ನ್ಯಾಯಾಲಯದಲ್ಲಿ ಇದ್ದುದರಿಂದ ವಿಳಂಬವಾಗಿತ್ತು. ಈಗ ಆ ಸಮಸ್ಯೆ ಏನೂ ಇಲ್ಲ. ಆದರೂ ರಾಜ್ಯ ಸರ್ಕಾರ ತನ್ನ ಸ್ವಹಿತಾಸಕ್ತಿ ಕಾರಣದಿಂದ ಚುನಾವಣೆ ನಡೆಸುತ್ತಿಲ್ಲ’ ಎಂದೂ ಅವರು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಕಳೆದ ಎರಡು ವರ್ಷಗಳಿಂದ ಕೊರೊನಾ ಹಾವಳಿ, ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹದಂಥ ಪ್ರಕೃತಿ ವಿಕೋಪಗಳೂ ಜನರನ್ನು ಕಂಗೆಡಿಸಿವೆ. ಜಿಲ್ಲೆಯ ಸಂಸದರು, ಶಾಸಕರು ಕೂಡ ಸಕಾಲಕ್ಕೆ ಸ್ಪಂದಿಸದೇ ಜನ ಕಂಗಾಲಾಗಿದ್ದಾರೆ. ಕಳೆದ ವರ್ಷದ ಬೆಳೆ ಪರಿಹಾರಕ್ಕೂ ರೈತರು ಪರದಾಡುತ್ತಿದ್ದಾರೆ. ಮಾರ್ಚ್, ಏ‌ಪ್ರಿಲ್‌ನಲ್ಲಿ ಬೆಡ್‌ಗಳು ಸಿಗದೇ ಜನ ಎಷ್ಟು ಪರದಾಡಿದರೂ ಆಗ ಸ್ಪಂದಿಸಲು ಯಾರೂ ಇರಲಿಲ್ಲ. ಸ್ಥಳೀಯ ಸಂಸ್ಥೆಗೆ ಪ್ರತಿನಿಧಿಗಳೇ ಇಲ್ಲದಿದ್ದರೆ ಇಂಥ ಸಮಸ್ಯೆಗಳಲ್ಲಿ ಸ್ಪಂದಿಸುವವರು ಯಾರು’ ಎಂದೂ ಅವರು ಪ್ರಶ್ನಿಸಿದರು.

ವೈದ್ಯಕೀಯ ಸೌಕರ್ಯ ಕೊರತೆ: ‘ಕೊರೊನಾ ಎರಡು ಅಲೆಗಳಿಂದ ಇಷ್ಟು ದೊಡ್ಡ ನಷ್ಟವಾದರೂ ಜಿಲ್ಲೆಯ ಜನಪ್ರತಿನಿಧಿಗಳು ಪಾಠ ಕಲಿತಿಲ್ಲ. ದೊಡ್ಡ ಇಎಸ್‌ಐಸಿ ಕಟ್ಟಡವಿದ್ದರೂ ಪೂರ್ಣ ಬಳಕೆ ಮಾಡಿಕೊಳ್ಳಲು ಆಗುತ್ತಿಲ್ಲ. ಇದೊಂದು ಸ್ಮಾರಕದಂತೆ ಉಳಿದುಕೊಳ್ಳುವ ಅಪಾಯವಿದೆ. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಸದ ಡಾ.ಉಮೇಶ ಜಾಧವ ಅವರು ಈ ಕಟ್ಟಡವನ್ನು ವೈದ್ಯಕೀಯ ವ್ಯವಸ್ಥೆಗೆ ಪೂರ್ಣವಾಗಿ ಬಳಕೆಯಾಗುವಂತೆ ಗಮನ ಹರಿಸಬೇಕು’ ಎಂದರು.

‘ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಲಾಲ್‌ಕೃಷ್ಣ ಅಡ್ವಾನಿ ಅವರಿದ್ದ ಬಿಜೆಪಿ ಈಗ ಉಳಿದಿಲ್ಲ. ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರ ತತ್ವಗಳೇ ಈಗ ನಡೆಯುತ್ತಿವೆ. ಕೊಡಗು ಜಿಲ್ಲೆಯ ವಿರಾಜಪೇಟೆ ಕ್ಷೇತ್ರದಿಂದ ನಾನು ಬಿಜೆಪಿಯಿಂದಲೇ ಎರಡು ಬಾರಿ ಶಾಸಕನಾಗಿದ್ದೆ. ಆದರೆ, ಸದ್ಯ ಬದಲಾದ ತತ್ವಗಳಿಂದ ಬೇಸತ್ತು ಹೊರಬಂದಿದ್ದೇನೆ’ ಎಂದೂ ಅವರು ಹೇಳಿಕೊಂಡರು.

ಪಕ್ಷದ ರಾಜ್ಯ ಘಟಕದ ಮಾಧ್ಯಮ ಸಂಚಾಲಕ ಜಗದೀಶ ಸದಂ,ಜಿಲ್ಲಾ ಮಾಧ್ಯಮ ಸಂಚಾಲಕ ಸಂಜೀವ ಕರೇಕಲ್,ಮುಖಂಡರಾದ ವಿಜಯ ಶಾಸ್ತ್ರೀಮಠ, ಅಂಜನಾ ಯತನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT