ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ದಿನಗಳಲ್ಲಿ ಒತ್ತುವರಿ ತೆರವು

ಪಾಲಿಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ ಸಚಿವ ಪ್ರಿಯಾಂಕ್‌ ಖರ್ಗೆ
Last Updated 2 ಜುಲೈ 2019, 12:10 IST
ಅಕ್ಷರ ಗಾತ್ರ

ಕಲಬುರ್ಗಿ: ‘ಐತಿಹಾಸಿಕ ಬಹಮನಿ ಕೋಟೆಯೂ ಸೇರಿದಂತೆ ನಗರದಲ್ಲಿ ಎಲ್ಲೆಲ್ಲಿ ಒತ್ತುವರಿ ನಡೆದಿದೆಯೋ ಅದೆಲ್ಲವನ್ನೂ ತೆರವುಗೊಳಿಸಲು 15 ದಿನ ಮಾತ್ರ ಗಡುವು ನೀಡಲಾಗುವುದು. ಈ ಪ್ರಕ್ರಿಯೆ ನಾಳೆಯಿಂದಲೇ (ಜುಲೈ 3) ಆರಂಭವಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ನಗರದಲ್ಲಿ ಸೋಮವಾರ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಅವರು ನಡೆಸಿದ ಕುಂದು– ಕೊರತೆ ನಿವಾರಣಾ ಸಭೆಯಲ್ಲಿ ಒತ್ತುವರಿ ತೆರವು ಕುರಿತು ಸಾರ್ವಜನಿಕರ ಮನವಿಗೆ ಪ್ರತಿಕ್ರಿಯಿಸಿದ ಸಚಿವ ಖರ್ಗೆ, ‘ಕೋಟೆಯೊಳಗೆ ಹಿಂದೆ 50 ಮನೆ ಮಾತ್ರ ಇದ್ದವು. ಈಗ 300 ಆಗಿವೆ ಎಂಬ ಮಾಹಿತಿ ಇದೆ. ಇವುಗಳ ತೆರವಿಗೆ ಹೈಕೋರ್ಟ್‌ ಆದೇಶ ನೀಡಿದೆ. ನಾವು ಅದನ್ನು ಪಾಲಿಸಲೇಬೇಕು. ಈ ಬಗ್ಗೆ ಬುಧವಾರವೇ ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು’ ಎಂದು ಅವರು ಪಾಲಿಕ ಆಯುಕ್ತೆ ಬಿ.ಫೌಜಿಯಾ ತರನ್ನುಮ್‌ ಅವರಿಗೆ ನಿರ್ದೇಶನ ನೀಡಿದರು.

‘ಹೈಕೋರ್ಟ್‌ ಆದೇಶದ ಬಗ್ಗೆ ಮೊದಲು ಒಂದು ವಾರ ತಿಳಿ ಹೇಳುತ್ತೇವೆ. ಸ್ವಯಂ ಪ್ರೇರಣೆಯಿಂದ ತೆರವು ಮಾಡಲು ಮನವೊಲಿಸಿ, ಇದಕ್ಕೂ ಒಂದು ವಾರ ಸಮಯ ನೀಡುತ್ತೇವೆ. ಅದಾಗ್ಯೂ ಸರಿಯಾಗಿ ಸ್ಪಂದಿಸದಿದ್ದರೆ ನಾವೇ ಒತ್ತುವರಿ ತೆರವು ಮಾಡುತ್ತೇವೆ. ಇದು ಕೋಟೆಯೊಳಗಿನ ಪ್ರದೇಶಕ್ಕೆ ಮಾತ್ರ ಸೀಮಿತವಲ್ಲ; ಇಡೀ ನಗರದಲ್ಲಿ ಎಲ್ಲೆಲ್ಲಿ ಒತ್ತುವರಿ ಆಗಿದೆಯೋ ಅದೆಲ್ಲವನ್ನೂ ‘ಖುಲ್ಲಾ’ ಮಾಡಬೇಕು. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಜಿಲ್ಲಾಧಿಕಾರಿ ಜತೆಗೆ ಚರ್ಚಿಸಿ ಕ್ಷಿ‍ಪ್ರ ಕ್ರಮಕ್ಕೆ ಮುಂದಾಗಬೇಕು’ ಎಂದೂ ಅವರು ಕಟ್ಟುನಿಟ್ಟಿನ ಆದೇಶ ನೀಡಿದರು.

‘ನಾನು ಶಾಸಕ, ಸಚಿವ ಆಗುವ ಮುಂಚಿನಿಂದಲೂ ಒತ್ತುವರಿ ಮಾಡಿಕೊಂಡಿದ್ದರ ಬಗ್ಗೆ ಧ್ವನಿ ಎತ್ತಿದ್ದೇನೆ. ಆದರೆ, ಈಗ ಅಧಿಕಾರ ಇದ್ದರೂ ಕೆಲಸ ಮಾಡಲು ಆಗುತ್ತಿಲ್ಲ. ಇದಕ್ಕೆ ನಮ್ಮ ಜನಪ್ರತಿನಿಧಿಗಳೇ ಅಡ್ಡಗಾಲು ಹಾಕುತ್ತಿದ್ದಾರೆ. ದಯವಿಟ್ಟು ಎಲ್ಲ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಪಾಲಿಕೆ ಸದಸ್ಯರು ಸಹಕಾರ ಕೊಡಬೇಕು. ಮಾಧ್ಯಮಗಳೂ ನನ್ನೊಂದಿಗೆ ಕೈಜೋಡಿಸಬೇಕು. ನಾನು ನಗರಾಭಿವೃದ್ಧಿ ಸಚಿವರ ಮುಂದೆ ಉದ್ದೇಶಪೂರ್ವಕವಾಗಿಯೇ ಈ ಮಾತು ಎತ್ತಿದ್ದೇನೆ. ಇನ್ನು ಮುಂದೆ ಯಾರೂ ತಕರಾರು ಮಾಡಬೇಡಿ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT