ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದತ್ತಾತ್ರೇಯ, ಶರಣಬಸವೇಶ್ವರರ ಸ್ಮರಣೆ

ರಾಷ್ಟ್ರಕೂಟರ ನಾಡಿನಲ್ಲಿ ಸಂಚಲನ ಮೂಡಿಸಿದ ಪ್ರಧಾನಿ ನರೇಂದ್ರ ಮೋದಿ
Last Updated 20 ಜನವರಿ 2023, 5:13 IST
ಅಕ್ಷರ ಗಾತ್ರ

ಮಳಖೇಡ (ಕಲಬುರಗಿ ಜಿಲ್ಲೆ): ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡನಲ್ಲಿ ಗುರುವಾರ ನಡೆದ ಲಂಬಾಣಿ ಸಮುದಾಯದವರಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣದಲ್ಲಿ ಜಗಜ್ಯೋತಿ ಬಸವೇಶ್ವರ, ಗಾಣಗಾಪುರದ ದತ್ತಾತ್ರೇಯ ದೇವರು, ಶರಣಬಸವೇಶ್ವರರನ್ನು ಸ್ಮರಿಸಿದರು.

ಮೊದಲು ಲಂಬಾಣಿ ಭಾಷೆಯಲ್ಲಿ ಭಾಷಣ ಪ್ರಾರಂಭಿಸಿದ ನರೇಂದ್ರ ಮೋದಿಯವರು, ‘ಕರ್ನಾಟಕ ತಾಂಡೇರ್ ಮಾರ್ ಗೋರ್ ಬಂಜಾರ ಭಾಯಿ–ಬಿಯಾ, ನಾಯಕ್, ಡಾವ್, ಕಾರಬಾರಿ, ಹಾತ್ ಜೋಡೇನ್ ರಾಮ್ ರಾಮ್, ಜೈ ಸೇವಾಲಾಲ್ ಮಹಾರಾಜ್’ ಎಂದು ಹೇಳಿದರು.

ಇದರಿಂದ ಉಲ್ಲಸಿತರಾದ ಸಭಿಕರು ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದರು. ಬಳಿಕ ಕನ್ನಡದಲ್ಲಿ ಮಾತನಾಡಿದ ಮೋದಿ, ಕಲಬುರಗಿಯ ಶರಣಬಸವೇಶ್ವರ ಮತ್ತು ಗಾಣಗಾಪುರದ ದತ್ತಾತ್ರೇಯ ದೇವರಿಗೆ ವಂದನೆ, ಪ್ರಖ್ಯಾತ ರಾಷ್ಟ್ರಕೂಟ ಸಾಮ್ರಾಜ್ಯದ ರಾಜ
ಧಾನಿಗೆ ಮತ್ತು ಕನ್ನಡ ನಾಡಿನ ಸಮಸ್ತ ಜನರಿಗೆ ನಮಸ್ಕಾರಗಳು’ ಎಂದರು.

ತಮ್ಮ ಭಾಷಣದುದ್ದಕ್ಕೂ ವಿಶ್ವಗುರು ಬಸವಣ್ಣನವರ ಆದರ್ಶಗಳ ಬಗ್ಗೆ ಹೇಳುತ್ತಾ, ತಮ್ಮ ಸರ್ಕಾರ ಅವರ ಆದರ್ಶಗಳನ್ನು ಸಾಕಾರಗೊಳಿಸಲು ಯತ್ನಿಸುತ್ತಿದೆ ಎಂದರು.

‘ಕೇಂದ್ರ ಸರ್ಕಾರ 90ಕ್ಕೂ ಹೆಚ್ಚು ಬಗೆಯ ಅರಣ್ಯ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುತ್ತಿದ್ದು, ಗ್ರಾಮಗಳಾಗಿ ಪರಿವರ್ತನೆಗೊಂಡ ತಾಂಡಾ ನಿವಾಸಿಗಳಿಗೂ ಈ ಸವಲತ್ತು ಸಿಗಲಿದೆ. ಆಯುಷ್ಮಾನ್ ಭಾರತ ಯೋಜನೆ ಮೂಲಕ ಬಡವರಿಗೆ ಉಚಿತ ಆರೋಗ್ಯ ಸೌಲಭ್ಯ ನೀಡುತ್ತಿದ್ದು, ಪಡಿತರ ಸಾಮಗ್ರಿ ವಿತರಣೆಯಲ್ಲು ಹೆಚ್ಚು ಪಾರದರ್ಶಕತೆ ತರಲಾಗಿದೆ’ ಎಂದರು.

‘ಈಗ ಜನಧನ್ ಯೋಜನೆ, ಮುದ್ರಾ ಯೋಜನೆಗಳ ಮೂಲಕ ದೇಶದ 20 ಕೋಟಿಗೂ ಹೆಚ್ಚು ಜನರು ಭದ್ರತೆ ಇಲ್ಲದೆ ಸಾಲ ಪಡೆದು, ಹೊಸ ಹೊಸ ಉದ್ಯಮಿಗಳ ಉಗಮವಾಗಿದೆ. ಮೆಡಿಕಲ್, ಇಂಜಿನಿಯರಿಂಗ್ ಸೇರಿದಂತೆ ಹಲವು ಉನ್ನತ ಶಿಕ್ಷಣವನ್ನು ಸ್ಥಳೀಯ ಭಾಷೆಯಲ್ಲಿಯೇ ವ್ಯಾಸಂಗ ಮಾಡಲು ಅನುಕೂಲ ಮಾಡಿಕೊಡಲಾಗಿದೆ’ ಎಂದರು.

ಇದಕ್ಕೂ ಮುನ್ನ ಸುಹಾನಾ ಸೈಯದ್, ಐಶ್ವರ್ಯಾ ರಘುರಾಮ್, ವಿ.ಮಹೇಶ ಮೊದಲಾದ ಕಲಾವಿದರು ಜನಪ್ರಿಯ ಹಾಡುಗಳನ್ನು ಹಾಡಿ ರಂಜಿಸಿದರು. ವಿವೇಕಾನಂದ ವಿದ್ಯಾನಿಕೇತನ ಶಾಲೆಯ ಮಕ್ಕಳು ನಾಡಗೀತೆಯನ್ನು ಹಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌, ಕೇಂದ್ರ ಸಚಿವ ಭಗವಂತ ಖೂಬಾ, ಸಚಿವರಾದ ಮುರುಗೇಶ ನಿರಾಣಿ, ಪಶು ಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ಅಧ್ಯಕ್ಷ ದತ್ತಾತ್ರೆಯ ಸಿ. ಪಾಟೀಲ ರೇವೂರ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ, ಸ್ಥಳೀಯ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಸಂಸದ ಡಾ. ಉಮೇಶ ಜಿ. ಜಾಧವ, ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷ ಪಿ.ರಾಜೀವ್, ಶಾಸಕರಾದ ಸುಭಾಷ ಆರ್. ಗುತ್ತೆದಾರ, ಬಸವರಾಜ ಮತ್ತಿಮಡು, ಡಾ. ಅವಿನಾಶ ಜಾಧವ್, ವಿಧಾನಪರಿಷತ್ ಸದಸ್ಯರಾದ ಸುನೀಲ್ ವಲ್ಯಾಪುರೆ, ಶಶೀಲ್ ಜಿ. ನಮೋಶಿ, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎನ್. ಜಯರಾಂ, ನಿರ್ದೇಶಕ ರಾಜೇಂದ್ರ ಪ್ರಸಾದ್, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಎಸ್ಪಿ ಇಶಾ ಪಂತ್, ಜಿ.ಪಂ. ಸಿಇಒ ಡಾ. ಗಿರೀಶ್ ಡಿ. ಬದೋಲೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತೆ ಗರೀಮಾ ಪನ್ವಾರ್, ಕೆಕೆಆರ್‌ಡಿಬಿ ಉಪ ಕಾರ್ಯದರ್ಶಿ ಆನಂದ್ ಮೀನಾ, ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಉಡುಗೊರೆ: ನರೇಂದ್ರ ಮೋದಿ ಅವರಿಗೆ ರಾಜ್ಯ ಸರ್ಕಾರದ ವತಿಯಿಂದ ಬಂಜಾರ ಮಹಿಳೆ ಕಸೂತಿ ಹಾಕುತ್ತಿರುವ ಚಿತ್ರ ಹಾಗೂ ಅಲ್ಲಮಪ್ರಭುಗಳ ನೇತೃತ್ವದಲ್ಲಿ ಕಲ್ಯಾಣದಲ್ಲಿ ಅನುಭವ ಮಂಟಪದಲ್ಲಿ ಸಂಸತ್ ಕಲಾಪ ನಡೆಯುತ್ತಿರುವ ಕಲಾಕೃತಿಯನ್ನು ರಾಜ್ಯ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದರು.

ಸಾಮಾಜಿಕ ಪರಿವರ್ತನೆ: ಬೊಮ್ಮಾಯಿ

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಕರ್ನಾಟಕ ಇತಿಹಾಸದಲ್ಲಿ ಸಾಮಾಜಿಕ ಪರಿವರ್ತನೆಯ ಅತಿದೊಡ್ಡ ಕಾರ್ಯಕ್ರಮ ಇದಾಗಿದೆ. ತಾಂಡಾ, ಹಾಡಿ, ಹಟ್ಟಿ ಮುಂತಾದ ಜನವಸತಿ ಪ್ರದೇಶಗಳ ಜನರ ಜಾಗ ನಿಮ್ಮದಾಗಿರಲಿಲ್ಲ. 50 ವರ್ಷಗಳಬೇಡಿಕೆಯನ್ನು ನರೇಂದ್ರ ಮೋದಿಯವರ ಪ್ರೇರಣೆಯಿಂದ ನಾವು ಈಡೇರಿಸಿದ್ದೇವೆ. ನರೇಂದ್ರ ಮೋದಿ ಅವರು ‘ಸಮಾಜ ಪರಿವರ್ತಕ‘ ಎಂದು ಬಣ್ಣಿಸಿದರು.

‘ನಮ್ಮ ಡಬಲ್ ಎಂಜಿನ್ ಸರ್ಕಾರ ಸಾಮಾಜಿಕ ಭದ್ರತೆ ಕೊಡುವ ಮೂಲಕ ಇಂತಹ ಶೋಷಿತ ಸಮುದಾಯಕ್ಕೆ ಸಾಮಾಜಿಕ ಪರಿವರ್ತನೆ ಮಾಡುತ್ತಿದ್ದೇವೆ. ಪ್ರಧಾನಮಂತ್ರಿಗಳು ಹಕ್ಕುಪತ್ರ ನೀಡಿದ್ದು, ಸಮಾಜಕ್ಕೆ ದೊಡ್ಡ ಗೌರವ ಕೊಟ್ಟಂತೆ ಆಗಿದೆ. ನಮ್ಮ ಸರ್ಕಾರ ಸಾಮಾಜಿಕ ನ್ಯಾಯ, ಸಾಮಾಜಿಕ ಭದ್ರತೆ ಮತ್ತು ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದೆ’ ಎಂದರು.

ಸಂಸದರನ್ನು ತಡೆದ ಎಸ್‌ಪಿಜಿ ಪಡೆ!

ವೇದಿಕೆಯ ಕಾರ್ಯಕ್ರಮ ಮುಗಿಸಿ ಹೆಲಿಕಾಪ್ಟರ್‌ನತ್ತ ತೆರಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಸದ ಡಾ. ಉಮೇಶ ಜಾಧವ್ ಅವರು ಹಿಂಬಾಲಿಸಲು ಮುಂದಾದರು. ಆದರೆ, ಅದಕ್ಕೆ ತಡೆಯೊಡ್ಡಿದ ಪ್ರಧಾನಿಯವರ ವಿಶೇಷ ಭದ್ರತಾ ಪಡೆಯ (ಎಸ್‌ಪಿಜಿ) ಅಧಿಕಾರಿಗಳು ಮತ್ತೊಂದು ದ್ವಾರದಿಂದ ಹೋಗುವಂತೆ ತಿಳಿಸಿದರು.

ಹೀಗಾಗಿ, ಅನಿವಾರ್ಯವಾಗಿ ಮತ್ತೊಂದು ದ್ವಾರದ ಮೂಲಕ ಸಂಸದರು ವೇದಿಕೆಯಿಂದ ಇಳಿದರು. ಪ್ರಧಾನಿ ಅವರು ವೇದಿಕೆಯ ಬಲಬದಿಯಿಂದ ಇಳಿದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹಾಗೂ ಶಾಸಕರು ಎಡಬದಿಯ ದ್ವಾರದಿಂದ ವೇದಿಕೆ ಇಳಿದರು.

ಇದಕ್ಕೂ ಮುನ್ನ ಬೆಳಿಗ್ಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದ ಪ್ರಧಾನಿ ಅವರನ್ನು ಸ್ವಾಗತಿಸುವ ನಿಟ್ಟಿನಲ್ಲಿ ನಿಲ್ದಾಣದೊಳಗೆ ಹೊರಟಿದ್ದ ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ ಹಾಗೂ ಬಸವರಾಜ ಮತ್ತಿಮಡು ಅವರಿಗೆ ಪೊಲೀಸರು ತಡೆಯೊಡ್ಡಿದರು.

ಪ್ರಧಾನಿ ಅವರನ್ನು ಸ್ವಾಗತಿಸುವ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ. ಹಾಗಾಗಿ, ಒಳಗೆ ಬಿಡುವುದಿಲ್ಲ ಎಂದರು. ಇದರಿಂದ ಕೆರಳಿದ ತೇಲ್ಕೂರ ಅವರು ಕೆಲಹೊತ್ತು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ನಂತರ ಹಿರಿಯ ಅಧಿಕಾರಿಯೊಬ್ಬರು ಪೊಲೀಸರಿಗೆ ಕರೆ ಮಾಡಿದ ಬಳಿಕ ತೇಲ್ಕೂರ ಅವರನ್ನು ಒಳಗೆ ಬಿಡಲಾಯಿತು.

ದಶಕಗಳಿಂದ ಆಗದ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಕರ್ತೃತ್ವ ಶಕ್ತಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಇಚ್ಛಾಶಕ್ತಿಯಿಂದ ನೆರವೇರಿದೆ. ಇದಕ್ಕಾಗಿ ಇಡೀ ಬಂಜಾರ ಸಮುದಾಯ ಇವರಿಗೆ ಋಣಿಯಾಗಿರುತ್ತದೆ

ಡಾ. ಉಮೇಶ ಜಾಧವ್ ಸಂಸದ

ರಾಷ್ಟ್ರಕೂಟರ ರಾಜಧಾನಿ ಮಳಖೇಡದ ನನ್ನ ಕ್ಷೇತ್ರದಲ್ಲಿ ಐತಿಹಾಸಿಕ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. ಸರ್ಕಾರ ಸದಾ ಬಂಜಾರ ಸಮುದಾಯದೊಂದಿಗೆ ಇರುತ್ತದೆ

ರಾಜಕುಮಾರ ಪಾಟೀಲ ತೇಲ್ಕೂರ

ಶಾಸಕ, ಕೆಕೆಆರ್‌ಟಿಸಿ ಅಧ್ಯಕ್ಷ

ವೇದಿಕೆಗೇರದ ಗಣ್ಯರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೂ ಆದ ಸಂಸದ ನಳಿನ್‌ಕುಮಾರ್ ಕಟೀಲ್ ಕಾರ್ಯಕ್ರಮದಲ್ಲಿ ಸಾಮಾನ್ಯ ಪ್ರೇಕ್ಷಕರಂತೆ ಭಾಗವಹಿಸಿದ್ದರು. ವೇದಿಕೆಯ ಎದುರಿನ ಆಸನದಲ್ಲಿ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸಿದರು.

ವಿಧಾನಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ, ಶಶೀಲ್ ಜಿ. ನಮೋಶಿ, ಬಾಬುರಾವ ಚಿಂಚನಸೂರ ಸೇರಿದಂತೆ ಹಲವರು ವೇದಿಕೆ ಎದುರಿನ ಆಸನಗಳಲ್ಲಿ ಕುಳಿತು ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.

ಡಿ.ಸಿ. ಕಾರು ಏರಿದ ಸಚಿವ ಅಶೋಕ: ಪ್ರಧಾನಿ ಅವರನ್ನು ಬೀಳ್ಕೊಟ್ಟ ಬಳಿಕ ಕಂದಾಯ ಸಚಿವ ಆರ್. ಅಶೋಕ ಅವರು ತಮಗಾಗಿ ಮೀಸಲಿದ್ದ ಕಾರನ್ನು ಬಿಟ್ಟು ಹತ್ತಿರದಲ್ಲೇ ಇದ್ದ ಜಿಲ್ಲಾಧಿಕಾರಿ ಅವರ ಕಾರಿನಲ್ಲಿ ಕುಳಿತು ಕಲಬುರಗಿ ತಲುಪಿದರು. ವಿಪರೀತ ಜನದಟ್ಟಣಿ ಇದ್ದುದರಿಂದ ತಮ್ಮ ಕಾರನ್ನು ಹತ್ತಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT