ಸೋಮವಾರ, ಜನವರಿ 20, 2020
27 °C

ಖಾಸಗಿ ರೈಲು: ಮೊದಲ ಪಟ್ಟಿಯಲ್ಲಿ ಕಲಬುರ್ಗಿ, ಬೆಂಗಳೂರಿಗೆ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಖಾಸಗಿ ರೈಲು ಸೇವೆಗೆ ಆರಂಭಿಸಲು ಮುಂದಾಗಿರುವ ರೈಲ್ವೆ ಇಲಾಖೆ, ತನ್ನ ಮೊದಲ ಪಟ್ಟಿಯಲ್ಲಿ ಕಲಬುರ್ಗಿ ಹಾಗೂ ಬೆಂಗಳೂರು ರೈಲ್ವೆ ನಿಲ್ದಾಣಗಳನ್ನೂ ಸೇರಿಸಿದೆ.

ನವದೆಹಲಿ ಹಾಗೂ ಮುಂಬೈ ಕೇಂದ್ರಿತವಾಗಿ ಒಟ್ಟು 150 ಖಾಸಗಿ ರೈಲುಗಳ ಸೇವೆ ಮೊದಲ ಹಂತದಲ್ಲಿ ಆರಂಭಗೊಳ್ಳಲಿದೆ. ಇದರಲ್ಲಿ ಕಲಬುರ್ಗಿ–ಪನ್‌ವೆಲ್‌ (ಮುಂಬೈ) ಹಾಗೂ ಬೆಂಗಳೂರು–ನವದೆಹಲಿ, ಬೆಂಗಳೂರು– ಪಾಟ್ನಾ (ಬಿಹಾರ) ಮಧ್ಯೆ ಖಾಸಗಿ ರೈಲು ಸೇವೆ ಆರಂಭಗೊಳ್ಳಲಿದ್ದು, ವಾರದಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂಬುದು ರೈಲ್ವೆ ಇಲಾಖೆಯ ಮೂಲಗಳ ಮಾಹಿತಿ.

ಮುಂಬೈ–ಕೋಲ್ಕತ್ತ, ಮುಂಬೈ–ಚೆನ್ನೈ, ಮುಂಬೈ–ಗುವಾಹಟಿ, ನವದೆಹಲಿ–ಮುಂಬೈ, ತಿರುವನಂತಪುರ–ಗುವಾಹಟಿ, ನವದೆಹಲಿ–ಕೋಲ್ಕತ್ತ, ನವದೆಹಲಿ–ಬೆಂಗಳೂರು, ನವದೆಹಲಿ– ಚೆನ್ನೈ, ಕೋಲ್ಕತ್ತ– ಚೆಲ್ನಾ ಮತ್ತು ಚೆನ್ನೈ– ಜೋಧಪುರ, ಮುಂಬೈ–ವಾರಾಣಸಿ, ಮುಂಬೈ– ಪುಣೆ, ಮುಂಬೈ–ಲಖನೌ, ಮುಂಬೈ– ನಾಗಪುರ, ನಾಗಪುರ– ಪುಣೆ, ಸಿಕಂದರಾಬಾದ್– ವಿಶಾಖಪಟ್ಟಣಂ, ಪಾಟ್ನಾ– ಬೆಂಗಳೂರು, ಪುಣೆ– ಪಾಟ್ನಾ, ಚೆನ್ನೈ– ಕೊಯಮತ್ತೂರು, ಚೆನ್ನೈ–ಸಿಕಂದರಾಬಾದ್, ಸೂರತ್–ವಾರಾಣಸಿ ಮತ್ತು ಭುವನೇಶ್ವರ–ಕೋಲ್ಕತ್ತ ಮಾರ್ಗಗಳಲ್ಲಿ ಖಾಸಗಿ ಸಹಭಾಗಿತ್ವ ಪಡೆಯಲಾಗಿದೆ.

ಇದನ್ನೂ ಓದಿ: ರೈಲಿನ ಲಟ– ಪಟ ಸದ್ದು ಮಾಯ!

‘ರೈಲ್ವೆ ನಿಗದಿ ಮಾಡುವ ದರದಲ್ಲೇ ಖಾಸಗಿ ರೈಲುಗಳನ್ನು ಓಡಿಸಬೇಕು ಎಂಬ ನಿಯಮ ಮಾಡಲಾಗಿದೆ. ಇದೇ ರೀತಿ ಮುಂದುವರಿದರೆ ಇದು ಪ್ರಯಾಣಿಕರಿಗೆ ಹೆಚ್ಚು ಅನುಕೂಲಕರ. ಜತೆಗೆ, ಕಲಬುರ್ಗಿಯಿಂದ ಮುಂಬೈಗೆ ಪ್ರತಿ ದಿನ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಖಾಸಗಿ ರೈಲುಗಳು ರಾತ್ರಿ ಸಮಯದಲ್ಲಿ ಸಂಚರಿಸಿದರೆ ಹೆಚ್ಚು ಅನುಕೂಲವಾಗಲಿದೆ’ ಎಂಬುದು ಕಲಬುರ್ಗಿ ರೈಲ್ವೆ ವಿಭಾಗೀಯ ಕಚೇರಿ ಹೋರಾಟ ಸಮಿತಿ ಸಂಚಾಲಕ ಸುನಿಲ ಕುಲಕರ್ಣಿ ಪ್ರತಿಕ್ರಿಯೆ.

‘ಸೊಲ್ಲಾಪುರ ರೈಲ್ವೆ ವಿಭಾಗದಲ್ಲೇ ಅತಿ ಹೆಚ್ಚು ಲಾಭ ತಂದುಕೊಡುವುದು ಕಲಬುರ್ಗಿ ಜಿಲ್ಲೆ. ಇದನ್ನು ಗಮನಿಸಿಯೇ ಖಾಸಗಿ ವ್ಯಕ್ತಿಗಳು ಪ್ರಸ್ತಾವ ಸಲ್ಲಿಸಿದ್ದಾರೆ. ಆದರೆ, ದರ ದುಬಾರಿಯಾಗಿ ಖಾಸಗಿ ಸೇವೆ ಪ್ರಯಾಣಿಕರಿಗೆ ಹೊರೆಯಾಗಬಾರದು’ ಎಂಬುದು ಅವರ ಮನವಿ.

ಇದನ್ನೂ ಓದಿ: ಪ್ರಯಾಣ ದರ ಹೆಚ್ಚಿಸಿದ ರೈಲ್ವೆ ಇಲಾಖೆ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು