ಪಕ್ಷ ಸೂಚಿಸಿದರೆ ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ: ಪ್ರಿಯಾಂಕ್

7

ಪಕ್ಷ ಸೂಚಿಸಿದರೆ ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ: ಪ್ರಿಯಾಂಕ್

Published:
Updated:
Prajavani

ಕಲಬುರ್ಗಿ: ‘ಪಕ್ಷ ಸೂಚಿಸಿದರೆ ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧನಿದ್ದೇನೆ. ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬೇಡಿ ಎಂದು ಹೇಳಿದರೆ ಸ್ಪರ್ಧಿಸುವುದಿಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಭಾನುವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಒಂದು ವೇಳೆ ಹೈಕಮಾಂಡ್ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ ಎಂದು ಹೇಳಿದರೆ ಆ ಕೆಲಸವನ್ನೇ ಮಾಡುತ್ತೇನೆ’ ಎಂದರು.

ಲೋಕಸಭಾ ಚುನಾವಣೆಯಲ್ಲಿ ಜಾಧವ ಅವರು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್, ‘ಬಿಜೆಪಿ ಬಳಿ ಅಭ್ಯರ್ಥಿಗಳಿಲ್ಲ. ಹೀಗಾಗಿ ಜಾಧವ ಅವರನ್ನು ಸೆಳೆಯಲು ಮುಂದಾಗಿದ್ದಾರೆ. ನಾವು ಕೂಡ ಲೋಕಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ’ ಎಂದರು.

ಕೆಟ್ಟದ್ದಾದರೆ ನನ್ನ ತಲೆಗೆ: ‘ಚಿಂಚೋಳಿ ಶಾಸಕ ಡಾ. ಉಮೇಶ ಜಾಧವ ಅವರು ಉಗ್ರಾಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವುದಾಗಿ ಹೇಳಿದ್ದರು. ಇದಾದ 4–5 ದಿನಗಳ ಬಳಿಕ ಸಂಪರ್ಕಕ್ಕೆ ಸಿಕ್ಕಿಲ್ಲ. ಕಲಬುರ್ಗಿಯಲ್ಲಿ ಒಳ್ಳೆಯದಾದರೆ ಯಾರೂ ಹೇಳುವುದಿಲ್ಲ. ಕೆಟ್ಟದ್ದಾದರೆ ಅದನ್ನು ನನ್ನ ತಲೆಗೆ ಕಟ್ಟುತ್ತಾರೆ. ಮಾಲೀಕಯ್ಯ ಗುತ್ತೇದಾರ, ಡಾ. ಉಮೇಶ ಜಾಧವ, ಬಾಬುರಾವ ಚಿಂಚನಸೂರ ಸೇರಿದಂತೆ ಎಲ್ಲರೂ ನನ್ನ ತಲೆಗೆ ಕಟ್ಟುತ್ತಾರೆ’ ಎಂದು ಹೇಳಿದರು.

‘ಜಾಧವ ಅವರು ಹೇಳಿರುವ ಅಧಿಕಾರಿಗಳನ್ನು ಅವರ ಕ್ಷೇತ್ರಕ್ಕೆ ವರ್ಗಾವಣೆ ಮಾಡಿದ್ದೇವೆ. ಯಾರ ಕ್ಷೇತ್ರದಲ್ಲೂ ಹಸ್ತಕ್ಷೇಪ ಮಾಡಿಲ್ಲ. ಜಾಧವ ಅವರು ಬಿಜೆಪಿಗೆ ಹೋಗುವುದಾದರೆ ಹೋಗಲಿ. ಆದರೆ, ಆರೋಪ ಮಾಡಿ ಹೋಗಬಾರದು’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !