ಬಿಜೆಪಿಯಿಂದ ಜನರ ಜೇಬಿಗೆ ಕತ್ತರಿ: ಪ್ರಿಯಾಂಕ್ ಟೀಕೆ

ಕಲಬುರ್ಗಿ: ದೇಶದ ಜನರಿಗೆ ಅಚ್ಛೆ ದಿನ್ ಭರವಸೆ ನೀಡುತ್ತಾ ಕೇಂದ್ರದಲ್ಲಿ ಅಧಿಕಾರ ಹಿಡಿದ ಬಿಜೆಪಿ ಪಕ್ಷ ಕಳೆದ 7 ವರ್ಷದಿಂದ ಜನರ ಜೇಬಿಕೆ ಕತ್ತರಿ ಹಾಕುವುದನ್ನೇ ಕಾಯಕವನ್ನಾಗಿಸಿಕೊಂಡಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
‘ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮೊದಲು ಬಿಜೆಪಿ ಪಕ್ಷ ಸ್ವರ್ಗವನ್ನೇ ಧರೆಗಿಳಿಸುವುದಾಗಿ ಜನಸಾಮಾನ್ಯರಿಗೆ ಭರವಸೆ ನೀಡಿತ್ತು. ಆದರೆ ಅಧಿಕಾರಕ್ಕೆ ಬಂದ ಮೇಲೆ ರಕ್ತ ಹೀರುವ ತಿಗಣೆಯಂತೆ ವರ್ತಿಸುತ್ತಿದೆ. ನೋಟು ಅಮಾನ್ಯೀಕರಣ, ಜಿಎಸ್‌ಟಿ ಮೇಲೆ ಹೆಚ್ಚುವರಿ ತೆರಿಗೆ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಅಡುಗೆ ಅನಿಲ ಬೆಲೆಯಲ್ಲಿ ಅಪಾರ ಏರಿಕೆ ಜೊತೆಗೆ ಈ ಮುಂಚೆ ನೀಡಲಾಗುತ್ತಿದ್ದ ಸಬ್ಸಿಡಿ ಕೂಡಾ ರದ್ದು ಮಾಡಿದೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಪ್ರಧಾನ ಮಂತ್ರಿ ಮೋದಿ ಅವರು ತಮ್ಮ ಉದ್ಯಮಿ ಮಿತ್ರರಿಗೆ ಲಾಭ ಮಾಡಿಕೊಡಲು ಅವರ ಸಾಲ ಮನ್ನಾ ಮಾಡಲು ಜನಸಾಮಾನ್ಯರ ಮೇಲೆ ತೆರಿಗೆ ಭಾರ ಹೊರೆಸಿದ್ದಾರೆ. ಕಳೆದ 7 ವರ್ಷದಲ್ಲಿ ಅಡುಗೆ ಅನಿಲ ಬೆಲೆ ₹ 410ರಿಂದ ₹ 885ಕ್ಕೆ, ಪೆಟ್ರೋಲ್ ಬೆಲೆ ₹ 71ರಿಂದ ₹ 105, ಡೀಸೆಲ್ ಬೆಲೆ ₹ 57ರಿಂದ ₹ 95ಕ್ಕೆ ಏರಿಕೆಯಾಗಿದೆ’ ಎಂದಿದ್ದಾರೆ.
‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಒಂದು ಬ್ಯಾರೆಲ್‌ಗೆ 145 ಡಾಲರ್ ಇದ್ದಾಗ ಅಂದಿನ ಕಾಂಗ್ರೆಸ್ ಸರ್ಕಾರ ₹ 60ರಿಂದ ₹ 70 ಪೆಟ್ರೋಲ್ ಬೆಲೆ ನಿಗದಿಪಡಿಸಿತ್ತು. ಪ್ರಸ್ತುತ ಕಚ್ಚಾ ತೈಲದ ಬೆಲೆ ಒಂದು ಬ್ಯಾರಲ್‌ಗೆ 70 ಡಾಲರ್‌ಗೆ ಕುಸಿದಿದ್ದರೂ ಬಿಜೆಪಿ ಸರ್ಕಾರ ಪೆಟ್ರೋಲ್ ಬೆಲೆ ಶತಕದ ಗಡಿ ದಾಟಿಸಿದೆ’ ಎಂದು ವ್ಯಂಗ್ಯವಾಡಿದ್ದಾರೆ.
‘ಕೇವಲ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲದೇ ವಿದ್ಯುತ್ ಬೆಲೆಯನ್ನು ಶೇ 30ರಷ್ಟು ಹೆಚ್ಚಿಸಿದೆ. ಇದಲ್ಲದೇ, ಖಾಲಿ ನಿವೇಶನ, ಮನೆಯ ಮೇಲಿನ ತೆರಿಗೆ ಹೆಚ್ಚಿಸಿದೆ. ಕಬ್ಬಿಣದ ದರ ಪ್ರತಿ ಟನ್‌ಗೆ ₹ 30 ಸಾವಿರದಿಂದ ₹ 40 ಸಾವಿರದವರೆಗೆ ಹೆಚ್ಚಿಸಿದೆ’ ಎಂದು ಟೀಕಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.