ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಗೆ ಪ್ರಿಯಾಂಕ್ ಖರ್ಗೆ ಅಪಮಾನ: ತೇಲ್ಕೂರ

Last Updated 16 ಆಗಸ್ಟ್ 2022, 9:29 IST
ಅಕ್ಷರ ಗಾತ್ರ

ಕಲಬುರಗಿ: ‘ಪ್ರಚಾರದ ಗೀಳು, ಬಾಯಿ ಚಪಲಕ್ಕೆ ಪ್ರಿಯಾಕ್‌ ಖರ್ಗೆ ಅವರು ಮನಸೋಇಚ್ಛೆ ಕೀಳಾಗಿ ಮಾತನಾಡಿ ನಾಡಿನ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ’ ಎಂದು ಕಲಬುರಗಿ–ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ಅಧ್ಯಕ್ಷ, ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಟೀಕಿಸಿದರು.

'ನಮ್ಮ ಮನೆಗಳಲ್ಲಿನ ಅಣ್ಣ, ತಮ್ಮ, ಅಕ್ಕ, ತಂಗಿ, ತಾಯಿ ನೌಕರಿಗೆ ಹೋಗುತ್ತಾರೆ. ಅವರೆಲ್ಲಾ ಮಂಚವನ್ನೇರಿ ನೌಕರಿ ಹೋಗಿದ್ದಾರಾ? ಅವರ ಮನೆಯಲ್ಲೂ ಎಲ್ಲರೂ ಹಾಗೆಯೇ ಹೋಗಿದ್ದಾರಾ’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಮಹಿಳೆಯರ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸಬೇಕು. ನೌಕರಿಗೆ ಹೋಗುವವರ ಮನೆಯಲ್ಲಿರುವ ಹಿರಿಯರಿಗೆ ಎಂಥ ಭಾವನೆ ಮೂಡುತ್ತದೆ? ಮನಸ್ಸಿಗೆ ಬಂದಂತೆ ನಾಲಿಗೆ ಹರಿಬಿಡುವುದು ಸರಿಯಲ್ಲ.
ಪ್ರಿಯಾಂಕ್ ಖರ್ಗೆ ಅವರು ಕೂಡಲೇ ಕ್ಷಮೆ ಕೇಳಬೇಕು’ ಎಂದು ಅವರು ಒತ್ತಾಯಿಸಿದರು.

‘ರಮೇಶ ಜಾರಕಿಹೊಳಿ ಅವರ ವಿರುದ್ಧ ವೈಯಕ್ತಿಕವಾಗಿ ದೂರು ನೀಡಲಾಗಿದೆ. ಅವರು ಯಾವುದಾದರೂ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸಿ, ಕೆಲಸ ಕೊಡಿಸಿದ್ದಾರಾ? ವೈಯಕ್ತಿಕವಾಗಿ ಹಲವರಿಗೆ ಅನೈತಿಕ ಸಂಬಂಧಗಳು ಇವೆ' ಎಂದರು.

ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಕಾಂಗ್ರೆಸ್‌ನ ಡಿ.ಕೆ ಶಿವಕುಮಾರ, ಸಿದ್ದರಾಮಯ್ಯ ಅವರೂ ಖಂಡಿಸಬೇಕಿತ್ತು. ಕೀಳು ಮಟ್ಟದ ಹೇಳಿಕೆಗಳಿಂದ ಕುಟುಂಬಗಳು ಒಡೆದು, ಸಂಬಂಧಗಳಲ್ಲಿ ಬಿರುಕು ಮೂಡುತ್ತವೆ. ಯುವತಿಗೆ ನೌಕರಿ ಇದೆ ಎಂಬ ಕಾರಣಕ್ಕೆ ಕೆಲವರು ಮದುವೆಯಾಗುತ್ತಾರೆ. ಇಂಥ ಹೇಳಿಕೆಗಳಿಂದ ಅವರ ಸಂಬಂಧಗಳು ಉಳಿಯುತ್ತವೆಯೇ' ಎಂದು ಪ್ರಶ್ನಿಸಿದರು.

‘ಅಕ್ಕ ತಂಗಿಯವರ ಜತೆಗೆ ಬೆಳೆದವರು, ಮಹಿಳೆಯರನ್ನು ಗೌರವದಿಂದ ನೋಡುವುದನ್ನು ಕಲಿಯಿರಿ. ಲಂಚದ ಬಗ್ಗೆ ಮಾತನಾಡಿದ್ದು ಸರಿ. ಆದರೆ, ಮಂಚದ ಬಗ್ಗೆ ಮಾತನಾಡುವ ನೈತಿಕತೆ ಏನಿದೆ? ವಿರೋಧ ಪಕ್ಷವಾಗಿ ಯಾವ ವಿಷಯಗಳನ್ನು ಜನರ ಮುಂದೆ ತರಬೇಕು ಎಂಬುದು ಅವರಿಗೆ ಗೊತ್ತಿಲ್ಲ. ಸರ್ಕಾರದ ವಿರುದ್ಧ ಮಾತನಾಡಲು ಅವರಿಗೆ ಏನೂ ಸಿಗುತ್ತಿಲ್ಲ. ಹೀಗಾಗಿ ಇಂತಹ ಹೇಳಿಕೆ ಕೊಡುತ್ತಿದ್ದಾರೆ’ ಎಂದರು.

ಪಿಎಫ್‌ಐ, ಎಸ್‌ಡಿಪಿಐ ವಿರುದ್ಧ ಮಾಹಿತಿ ಸಂಗ್ರಹ: ಸಿದ್ದರಾಮಯ್ಯ ಅವರ ಸರ್ಕಾರ ಇದ್ದಾಗ ಪಿಎಫ್‌ಐ, ಎಸ್‌ಡಿಪಿಐ ಮೇಲಿದ್ದ ದೂರುಗಳನ್ನು ಹಿಂಪಡೆದರು. ಆ ಸಂಘಟನೆಗಳನ್ನು ನಿಷೇಧಿಸುವುದು ಮಾತ್ರವಲ್ಲ, ಯಾರೆಲ್ಲ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ಸರ್ಕಾರ ಕಲೆ ಹಾಕುತ್ತಿದೆ. ಸಮಯ ಬಂದಾಗ ಅವುಗಳ ಮೇಲೆ ಹಿಡಿತ ಸಾಧಿಸಲಾಗುವುದು. ಕೆಲವು ಸಂಘಟನೆಗಳು ಹೆಸರು ಬದಲಾಯಿಸಿಕೊಂಡು ಕೆಲಸ ಮಾಡುತ್ತಿವೆ. ಈ ಬಗ್ಗೆ ವಿಸ್ತೃತವಾದ ತನಿಖೆ ವರದಿಯನ್ನು ಈಗಾಗಲೇ ರಾಷ್ಟ್ರೀಯ ತನಿಖಾ ದಳಕ್ಕೆ(ಎನ್ಐಎ) ಸಲ್ಲಿಸಲಾಗಿದೆ. ಅಲ್ಲಿಂದ ವರದಿ ಬಂದ ಮೇಲೆ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಸಂಘಟನೆಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT