ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಾಕ್‌ಡೌನ್‌ ಬಾಧಿತರ ಖಾತೆಗೆ ₹ 10 ಸಾವಿರ ಹಾಕಿ’

ಶಾಸಕ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಶರಣಪ್ರಕಾಶ ಪಾಟೀಲ ಜಂಟಿ ಪತ್ರಿಕಾಗೋಷ್ಠಿ
Last Updated 28 ಏಪ್ರಿಲ್ 2021, 3:25 IST
ಅಕ್ಷರ ಗಾತ್ರ

ಕಲಬುರ್ಗಿ: ಲಾಕ್‌ಡೌನ್ ತರುವುದಿಲ್ಲ ಎಂದು ಹೇಳುತ್ತಲೇ ಸರ್ಕಾರ ರಾಜ್ಯದಾದ್ಯಂತ ಮಂಗಳವಾರ ರಾತ್ರಿಯಿಂದ 14 ದಿನಗಳವರೆಗೆ ಲಾಕ್‌ಡೌನ್ ಘೋಷಿಸಿದ್ದು, ಇದರಿಂದ ವಿವಿಧ ವಲಯದ ಜನರಿಗೆ ಉದ್ಯೋಗವಿಲ್ಲದಂತಾಗಿದೆ. ಜೀವನೋಪಾಯಕ್ಕಾಗಿಅವರ ಖಾತೆಗಳಿಗೆ ತಲಾ ₹ 10 ಸಾವಿರ ಪರಿಹಾರದ ಹಣ ಹಾಕಬೇಕು ಎಂದು ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಂತರವೂ ಲಾಕ್‌ಡೌನ್ ಮುಂದುವರಿದರೆ ಲಾ ₹ 7 ಸಾವಿರ ಜಮಾ ಮಾಡಬೇಕು. ನಿತ್ಯದ ದುಡಿಮೆಯನ್ನೇ ನಂಬಿಕೊಂಡಿರುವವರ ಕೈಬಿಡಬಾರದು. ಲಾಕ್‌ಡೌನ್ ಅವಧಿಯಲ್ಲಿ ವೈದ್ಯಕೀಯ ಮೂಲಸೌಕರ್ಯವನ್ನು ಹೆಚ್ಚಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಸರ್ಕಾರ ಸಾಕಷ್ಟು ಎಡವಿದೆ’ ಎಂದರು.

ಗೊಂದಲ ಮೂಡಿಸುವ ಆದೇಶ: ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ಲಾಕ್‌ಡೌನ್‌ನಿಂದ ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ. ಆದರೆ, ಕಟ್ಟಡ ನಿರ್ಮಾಣಕ್ಕೆ ಪೂರಕವಾದ ಸಿಮೆಂಟ್, ಕಬ್ಬಿಣ, ಪ್ಲಂಬಿಂಗ್ ಪೈಪ್, ಎಲೆಕ್ಟ್ರಿಕಲ್ ವಸ್ತುಗಳನ್ನು ತರಬೇಕೆಂದರೆ ಆ ಅಂಗಡಿಗಳನ್ನೆಲ್ಲ ಬಂದ್ ಮಾಡಲಾಗಿದೆ. ಜೊತೆಗೆ ಕಾರ್ಮಿಕರನ್ನು ಕರೆತರಲು ವಾಹನಗಳಿಗೂ ಅನುಮತಿ ನೀಡಿಲ್ಲ. ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರವನ್ನೂ ಬಂದ್ ಮಾಡಲಾಗಿದೆ. ಎಲ್ಲ ಕಟ್ಟಡ ಕಾರ್ಮಿಕರು ಗುರುತಿನ ಚೀಟಿ ಇಟ್ಟುಕೊಳ್ಳಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು.

ಸಿಬ್ಬಂದಿ ನೇಮಕವಾಗಲಿ: ಕೋವಿಡ್ ಹತೋಟಿಗೆ ತರಲು ಜಿಮ್ಸ್ ಮತ್ತು ಇಎಸ್‌ಐಸಿಗೆ ಅಗತ್ಯ ಸಿಬ್ಬಂದಿ ನೇಮಕ, ಐಸಿಯು ಬೆಡ್‌ಗಳ ರೂಪಿಸುವುದು, ಆಕ್ಸಿಜನ್ ಮತ್ತು ರೆಮ್‌ಡಿಸಿವಿರ್ ಪೂರೈಕೆ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು. ಅಲ್ಲದೇ, ಜಿಮ್ಸ್ 200 ಗ್ರೂಪ್ ಸಿ ಹಾಗೂ ಡಿ ದರ್ಜೆಯ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ. ಹಳೆಯ ಅಧಿಸೂಚನೆಯನ್ನು ಹೊರಡಿಸಿ ಅವರನ್ನು ನೇಮಕ ಮಾಡಿಕೊಳ್ಳಲು ಏನಡ್ಡಿ? ಜನರ ಜೀವ ಹೋಗುತ್ತಿರುವ ಸಂದರ್ಭದಲ್ಲಿ ದೀರ್ಘ ಪ್ರಕ್ರಿಯೆಗಳನ್ನು ಮಾಡುತ್ತಾ ಕಾಲ ಕಳೆದರೆ ಹೇಗೆ ಎಂದು ಬೇಸರ ವ್ಯಕ್ತಪಡಿಸಿದರು.

ಇಎಸ್‌ಐಸಿ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಸರಿಯಾಗಿ ಬಳಸಿ ಕೊಂಡರೆ ಎಲ್ಲರಿಗೂ ಅಲ್ಲಿಯೇ ಚಿಕಿತ್ಸೆ ನೀಡಬಹುದು. ಆದರೆ, ಈ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿಲ್ಲ ಎಂದು ಆರೋಪಿಸಿದರು. ಸಂಸದರೂ ಇದರತ್ತ ಗಮನ ಹರಿಸದೆ, ಕಾಟಾಚಾರಕ್ಕೆ ಎಂಬಂತೆ ತಾಲ್ಲೂಕುಗಳಿಗೆ ಭೇಟಿ ನೀಡುತ್ತಿದ್ದಾರೆ ಹೊರತು ಪರಿಣಾಮಕಾರಿ ಕೆಲಸಗಳು ಆಗುತ್ತಿಲ್ಲ ಎಂದರು.

ರಾಜ್ಯ ಸರ್ಕಾರಕ್ಕೆ ಕೊರೊನಾ ಬಿಕ್ಕಟ್ಟು ನಿಭಾಯಿಸಲು ನೆರವು ನೀಡುತ್ತಿಲ್ಲ. ಆಕ್ಸಿಜನ್ ಕೊಡದಿದ್ದರೆ ಆಸ್ಪತ್ರೆಗಳನ್ನು ಮುಚ್ಚಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರಧಾನಿ ಮೋದಿ ಅವರಿಗೆ ಹೇಳುತ್ತಾರೆ. ಮತ್ತೊಂದೆಡೆ ರಾಜ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳುತ್ತಾರೆ. ಯಾರನ್ನು ನಂಬಬೇಕು ಎಂದು ಪ್ರಸ್ನಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಡಾ.ಕಿರಣ ದೇಶಮುಖ, ಶಿವಕುಮಾರ ಹೊನಗುಂಟಿ, ಪ್ರವೀಣ ಪಾಟೀಲ ಹರವಾಳ, ಶಿವಾನಂದ ಪಾಟೀಲ ಮರತೂರ, ಸಂತೋಷ ದಣ್ಣೂರ, ರಮೇಶ ಮರಗೋಳ, ರವಿ ರಾಠೋಡ, ಅಶೋಕ ಕಪನೂರ ಇದ್ದರು.

‌’300 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಬಹುದು’

ಜಿಲ್ಲಾಡಳಿತ ಇದ್ದ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡರೆ ಹೆಚ್ಚುವರಿಯಾಗಿ 300 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಬಹುದು ಎಂದು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು.

ಜಿಮ್ಸ್‌ನಲ್ಲಿ ಮೇಲಿನ ಎರಡು ಮಹಡಿಗಳ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದೆ. ಅಲ್ಲಿ 100 ಆಕ್ಸಿಜನ್ ಬೆಡ್‌ಗಳನ್ನು ಅಳವಡಿಸಬಹುದು. ಜಿಮ್ಸ್ ಪಕ್ಕದಲ್ಲಿರುವ ಟ್ರಾಮಾ ಸೆಂಟರ್, ತಾಯಿ, ಮಕ್ಕಳ ತೀವ್ರ ನಿಗಾ ಆಸ್ಪತ್ರೆಯನ್ನು ಬಳಸಿಕೊಂಡರೆ 60ರಿಂದ 100 ಬೆಡ್‌ಗಳನ್ನು ಅಳವಡಿಸಬಹುದು. ಇಎಸ್‌ಐಸಿಯಲ್ಲಿ 20 ಕೆಎಲ್‌ ಆಕ್ಸಿಜನ್ ಘಟಕವನ್ನು ಅಳವಡಿಸಿಕೊಂಡರೆ ಹೆಚ್ಚುವರಿಯಾಗಿ 100 ಬೆಡ್‌ಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಬಹುದು ಎಂದರು.

ಈ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ವಾರದ ಹಿಂದೆಯೇ ಕರೆ ಮಾಡಿ ಸಲಹೆ ನೀಡಿದ್ದೇನೆ. ಆದರೆ, ಅಷ್ಟೇನೂ ಸಹಕಾರಿಯಾಗದ ಬೇರೆ ಸರ್ಕಾರಿ ಕಟ್ಟಡಗಳನ್ನು ಹುಡುಕುತ್ತಿದ್ದಾರೆ. ಅಲ್ಲಿ ಐಸೋಲೇಶನ್ ಕೇಂದ್ರಗಳನ್ನು ತೆರೆಯಬಹುದೇ ಹೊರತು ಆಕ್ಸಿಜನ್ ಅವಶ್ಯವಿರುವ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದಿಲ್ಲ ಎಂದರು.

ಜಿಲ್ಲಾಡಳಿತದ ಬಳಿ ಅಗತ್ಯ ಹಣ ಇಲ್ಲದಿದ್ದರೂ ನಾವು ಸಮಾನಮನಸ್ಕರಿಂದ, ಸಿಮೆಂಟ್‌ ಕಾರ್ಖಾನೆಗಳ ಸಿಎಸ್‌ಆರ್‌ ನಿಧಿಯಿಂದ ಸಂಗ್ರಹಿಸಿಕೊಡಲು ಸಿದ್ಧರಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT