ಶುಕ್ರವಾರ, ನವೆಂಬರ್ 22, 2019
20 °C
ರಸ್ತೆ ಮೇಲೆ ಹರಿಯುವ ಚರಂಡಿ ನೀರು: ವಿದ್ಯುತ್‌ ಕೈಕೊಟ್ಟರೆ ಕುಡಿಯಲು ನೀರೂ ಇಲ್ಲ

ಸಮಸ್ಯೆಗಳ ತಾಣ ಚಿಕ್ಲಿ ಗ್ರಾಮ

Published:
Updated:
Prajavani

ಕಮಲನಗರ: ತಾಲ್ಲೂಕಿನ ಚಿಕ್ಲಿ(ಯು) ಗ್ರಾಮದ ಬಡಾವಣೆಯಲ್ಲಿ ಮೂಲ ಸೌಕರ್ಯ ಮರೀಚಿಕೆಯಾಗಿದೆ. ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ವಿದ್ಯುತ್ ಕೈಕೊಟ್ಟರೆ ಇಲ್ಲಿನ ಜನರಿಗೆ ಕುಡಿವ ನೀರೂ ಸಿಗುವುದಿಲ್ಲ. ರಸ್ತೆ ಪಕ್ಕದಲ್ಲಿಯೇ ಸೇತುವೆ ಇದೆ. ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿದೆ. ಜನ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಚಿಕ್ಲಿ(ಯು) ಗ್ರಾಮದಲ್ಲಿ ಪಂಚಾಯಿತಿ ಇದೆ. ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗಿ ವಿವಿಧ ಗ್ರಾಮಗಳಿಗೆ ಟ್ಯಾಂಕರ್ ನೀರು ಸರಬರಾಜು ಮಾಡಲಾಗಿತ್ತು.

‘ಚಿಕ್ಲಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ವಿಶ್ವ ಬ್ಯಾಂಕ್ ವಿಶೇಷ ಅನುದಾನ ನೀಡಿತ್ತು. ಆ ಅನುದಾನದ ಅಡಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೂ ನೀರಿನ ಸಮಸ್ಯೆ ಬಗೆಹರಿದಿಲ್ಲ. ಹಲವು ಬಾರಿ ಪ್ರತಿಭಟಿಸಿದರೂ ಪ್ರಯೋಜನವಾಗಿಲ್ಲ.

ಕೊಳವೆಬಾವಿಗಳ ಮೂಲಕ ನಲ್ಲಿಗಳಿಗೆ ಸಂಪರ್ಕ ಕಲ್ಪಸಲಾಗಿದೆ. ನೀರು ಶುದ್ಧವಾಗಿರಬೇಕು. ನೀರು ಕುಡಿದರೇ ಕೀಲು, ಮೂಳೆ ಬೇನೆ, ಮೊಣಕಾಲು ಬೇನೆ ಮತ್ತಿತರ ಸಾಂಕ್ರಾಮಿಕ ರೋಗ ಹರಡುವ ಮುಂಚೆಯೇ ಗ್ರಾಪಂ ಸಿಬ್ಬಂದಿ ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಹೇಳುತ್ತಾರೆ ನಿವಾಸಿಗಳು.

ವಿವಿಧ ಯೋಜನೆಗಳ ಅಡಿ ಗ್ರಾಮದಲ್ಲಿ ರಸ್ತೆ ನಿರ್ಮಿಸಲಾಗಿದೆ. ಆದರೆ ಮಳೆಗಾಲದಲ್ಲಿ ನೀರು ಮನೆಗಳಿಗೆ ನುಗ್ಗುತ್ತದೆ. ಅವೈಜ್ಞಾನಿಕವಾಗಿ ರೀತಿಯಲ್ಲಿ ರಸ್ತೆ, ಚರಂಡಿ ನಿರ್ಮಾಣ ಮಾಡಲಾಗಿದೆ. ಇದರಿಂದ ತ್ಯಾಜ್ಯದ ನೀರು ರಸ್ತೆ ಮೇಲೆ ಸಂಗ್ರಹಗೊಂಡು ರೋಗದ ಭೀತಿ ಎದುರಾಗಿದೆ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.

‘ಚುನಾವಣೆಗಳಲ್ಲಿ ವಿವಿಧ ಪಕ್ಷಗಳ ಮುಖಂಡರು ಬಂದು ಕುಡಿಯುವ ನೀರು, ವಿದ್ಯುತ್ ಸೌಲಭ್ಯ, ಬಡವರಿಗೆ ಮನೆ ಸೌಲಭ್ಯ ಕಲ್ಪಿಸಿಕೊಡುತ್ತೇವೆ ಎಂದು ಆಶ್ವಾಸನೆ ಕೊಟ್ಟು ಹೋಗುತ್ತಾರೆ. ಅದರಿಂದ ಪ್ರಯೋಜನವಾಗಿಲ್ಲ’ ಎಂದು ನಿವಾಸಿ ಬಾಬುರಾವ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ತಕ್ಷಣವೇ ಅಗತ್ಯ ಕ್ರಮಕೈಗೊಂಡು ಸಮಸ್ಯೆ ಬಗೆಹರಿಸಬೇಕು. ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಗ್ರಾಮದ ನಿವಾಸಿಗಳು ಒತ್ತಾಯಿಸುತ್ತಾರೆ.

ಪ್ರತಿಕ್ರಿಯಿಸಿ (+)