ಭಾನುವಾರ, ಆಗಸ್ಟ್ 14, 2022
26 °C
ಜನತಾ ಲೇಔಟ್‌, ಮಹಾಲಕ್ಷ್ಮಿ ನಗರ, ಕಲ್ಯಾಣ ನಗರಗಳಲ್ಲಿ ಕಾಣದ ಸುಧಾರಣೆ

ಕಲಬುರ್ಗಿ: ಮತ್ತೆ ಮಳೆ, ಮತ್ತವೇ ಸಮಸ್ಯೆ!

ರಾಮಮೂರ್ತಿ ಪಿ. Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಸಣ್ಣ ಮಳೆಯಾದರೂ ಮನೆಯೊಳಗೆ ನುಗ್ಗುವ ನೀರು, ಸಂಜೆಯಾದಂತೆ ಕಾಡುವ ಸೊಳ್ಳೆಗಳು, ಅಪಘಾತಕ್ಕೀಡು ಮಾಡುವ ರಸ್ತೆಯ ಗುಂಡಿಗಳು, ಕೊಳಚೆ ನೀರಿನಲ್ಲಿ ದಾರಿ ಕಾಣದೆ ಸಂಚರಿಸಲು ಪ್ರಯಾಸಪಡುವ ಪಾದಾಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು.

ಕಲಬುರ್ಗಿ ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯ ವಾರ್ಡ್‌ ಸಂಖ್ಯೆ 33ರ ಜನತಾ ಲೇಔಟ್‌, ಮಹಾಲಕ್ಷ್ಮಿನಗರ ಮತ್ತು ಕಲ್ಯಾಣ ನಗರದಲ್ಲಿ ಮಳೆ ಸುರಿದಾಗಲೆಲ್ಲ, ಕಾಡುವ ಸಮಸ್ಯೆಗಳು ಇವು. ಹಲವು ವರ್ಷಗಳಿಂದ ಇಲ್ಲಿನ ನಿವಾಸಿಗಳು ಈ ರೀತಿಯ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ.

ಮನೆಗಳ ಎದುರು ಚರಂಡಿ ಇದ್ದರೂ ನೀರು ಸರಾಗವಾಗಿ ಮುಂದೆ ಹರಿಯುವುದಿಲ್ಲ. ಚರಂಡಿಗಳಲ್ಲಿ ಕಲ್ಲು, ಮಣ್ಣು ತುಂಬಿದೆ. ಮಳೆ ಬಂದರೆ ಕಾಲೊನಿಗಳಲ್ಲಿ ಎಲ್ಲೆಂದರಲ್ಲಿ ನೀರು ನಿಲ್ಲುತ್ತೆ. ಬಹುತೇಕ ಕಡೆ ರಸ್ತೆ ಕಾಣುವುದಿಲ್ಲ. ಅಲ್ಲಿನ ಇಡೀ ಆವರಣ ಕೆಸರುಮಯವಾಗುತ್ತದೆ.

ಚರಂಡಿ ಸ್ವಚ್ಛಗೊಳಿಸುವುದೇ ಬೇಡ!:‌ ‘ಮನೆಗಳ ಎದುರಿನ ಚರಂಡಿಗಳಲ್ಲಿ ವರ್ಷವಿಡೀ ತುಂಬಿರುವ ಕಲ್ಲು ಮಣ್ಣನ್ನು ತೆಗೆಯಲು ಮತ್ತು ಚರಂಡಿ ಸ್ವಚ್ಛಗೊಳಿಸಲು ಮಳೆಗಾಲದಲ್ಲಿ ಪೌರಕಾರ್ಮಿಕರು ಬರುತ್ತಾರೆ. ಆದರೆ, ನಾವೇ ಅವರನ್ನು ತಡೆಯುತ್ತೇವೆ. ಮಳೆ ನೀರು ಮನೆಗಳ ಮುಂದಿನ ಚರಂಡಿ ಮೂಲಕ ಮುಖ್ಯ ಚರಂಡಿ ಸೇರಿ ಅಲ್ಲಿಂದ ರಾಜಕಾಲುವೆ ಸೇರಬೇಕು. ಆದರೆ ಅದು ಇಲ್ಲಿ ಉಲ್ಟಾ ಆಗುತ್ತಿದೆ’ ಎಂದು ಜನತಾ ಲೇಔಟ್‌ ನಿವಾಸಿ ಬನಶಂಕರ ಪಾಗ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಳೆಯಾದಾಗ ಮುಖ್ಯ ಚರಂಡಿಯ ನೀರು ಸರಾಗವಾಗಿ ಸಾಗಲ್ಲ. ಮುಖ್ಯನಾಲೆ ಚಿಕ್ಕದಾಗಿರುವುದು ಹಾಗೂ ಹಾಳಾಗಿರುವ ಕಾರಣ ಪದೇ ಪದೇ ಬ್ಲಾಕ್‌ ಆಗುತ್ತದೆ. ಹೀಗಾಗಿ ಮುಖ್ಯ ಚರಂಡಿ ನೀರು ಸಣ್ಣ ಚರಂಡಿಗಳ ಮೂಲಕ
ವಾಪಸ್‌ ಕಾಲೊನಿಗೆ ಬರುತ್ತದೆ. ಚರಂಡಿಯಲ್ಲಿ ಕಲ್ಲು ಮಣ್ಣು ತುಂಬಿಕೊಂಡಿದ್ದರೆ, ಮುಖ್ಯ ಕಾಲುವೆ ನೀರು ಮನೆಯೊಳಗೆ ನೀರು ನುಗ್ಗುವುದು ತಪ್ಪುತ್ತದೆ’ ಎಂದು ಅವರು ತಿಳಿಸಿದರು.

‘ಲಾಲಗೇರಿ ಕ್ರಾಸ್‌ನಿಂದ ಮಾರ್ಕೆಟ್ ರಸ್ತೆಯ ಕಡೆಗೆ ಸಾಗುವ ಮುಖ್ಯ ಚರಂಡಿಯನ್ನು ಸರಿಪಡಿಸದ ಹೊರತು ಸಮಸ್ಯೆ ಬಗೆಹರಿಯಲ್ಲ. ಹಲವು ಕಡೆ ಚರಂಡಿಗಳ ಮೇಲೆ ಸ್ಲ್ಯಾಬ್‌ ಹಾಕಿಲ್ಲ. ಸಂಜೆ ವೇಳೆ ಅಲ್ಲಿ ಮಕ್ಕಳು, ಪ್ರಾಣಿಗಳ ಬೀಳುವ ಅಪಾಯವಿದೆ. ಈ ಬಗ್ಗೆ ಹಲವು ಬಾರಿ ತಿಳಿಸಿದರೂ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿಲ್ಲ’ ಎಂದು ನಿವಾಸಿ ಸುರೇಶ ಪೊದ್ದಾರ ಬೇಸರ ವ್ಯಕ್ತಪಡಿಸಿದರು.

‘ಬಡಾವಣೆ ಪ್ರವೇಶಿಸುವ ಮುಖ್ಯರಸ್ತೆಯಲ್ಲೇ ಇರುವ ದೊಡ್ಡ ಗುಂಡಿಗಳಲ್ಲಿ ಯಾವಾಗಲೂ ನೀರು ನಿಂತಿರುತ್ತದೆ. ವಾಹನ ಸವಾರರು ಅಷ್ಟೇ ಅಲ್ಲ, ಪಾದಚಾರಿಗಳು ಸುಗಮವಾಗಿ ನಡೆಯುವುದು ಕಷ್ಟ. ದಿನಕ್ಕೆ ಒಬ್ಬರಾದರೂ ಕೆಳಗಡೆ ಬಿದ್ದು ಗಾಯಗೊಳ್ಳುತ್ತಾರೆ. ವರ್ಷಗಳಿಂದ ಇದೇ ಪರಿಸ್ಥಿತಿಯಿದ್ದು, ಸ್ವಲ್ಪವೂ ಬದಲಾಗಿಲ್ಲ’ ಎಂದು ಮಹಾಲಕ್ಷ್ಮಿನಗರದ ನಿವಾಸಿ ರಮೇಶ ಪಾಟೀಲ ತಿಳಿಸಿದರು.

‘ಶುದ್ಧ ನೀರು ಎಂಬುದು ನಮ್ಮ ಪಾಲಿಗೆ ಕನಸಾಗಿದೆ. ಪಾಲಿಕೆಯಿಂದ 6 ದಿನಗಳಿಗೊಮ್ಮೆ ಪೂರೈಸಲಾಗುವ ನೀರು ಕಲುಷಿತವಾಗಿರುತ್ತದೆ. ಆ ನೀರನ್ನು ಬಳಸಲೂ ಆಗುವುದಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ವಿಡಿಯೊ, ಚಿತ್ರ ಕಳಿಸಿದರೂ ಪ್ರಯೋಜನವಾಗಿಲ್ಲ’ ಎಂದು ಅವರು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು