ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ಹಿರಿತನ ಪರಿಗಣಿಸುವುದಿಲ್ಲ: ಹಂಗಾಮಿ ಕುಲಸಚಿವ ಡೋಣೂರ

ಸಿಯುಕೆ ಹಂಗಾಮಿ ಕುಲಸಚಿವ ಡೋಣೂರ ಪ್ರತಿಕ್ರಿಯೆ
Last Updated 24 ಜನವರಿ 2021, 5:18 IST
ಅಕ್ಷರ ಗಾತ್ರ

ಕಲಬುರ್ಗಿ: ‘ಸೇವಾ ಹಿರಿತನ ಕಡೆಗಣಿಸಿ ಕುಲಪತಿ ಅವರು ಬಸವರಾಜ ಡೋಣೂರ ಅವರನ್ನು ಹಂಗಾಮಿ ಕುಲಸಚಿವರನ್ನಾಗಿ ನೇಮಕ ಮಾಡಿದ್ದಾರೆ ಎಂದು ಪ್ರೊ.ಶಿವಗಂಗಾ ರುಮ್ಮಾ ಹೇಳಿದ್ದಾರೆ. ಪ್ರೊ.ರುಮ್ಮಾ ಅವರ ಹೇಳಿಕೆ ಅಸತ್ಯದಿಂದ ಕೂಡಿದೆ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಹಂಗಾಮಿ ಕುಲಸಚಿವ ಪ್ರೊ.ಬಸವರಾಜ ಡೋಣೂರ
ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಹಂಗಾಮಿ ಕುಲಪತಿಯನ್ನು ನೇಮಕ ಮಾಡಲು ಸೇವಾ ಹಿರಿತನ ಪರಿಗಣಿಸಬೇಕೆಂದು ಕೇಂದ್ರ ಶಿಕ್ಷಣ ಸಚಿವಾಲಯ ಹೇಳುತ್ತದೆ. ಆದರೆ, ಹಂಗಾಮಿ ಕುಲಸಚಿವ, ವಿತ್ತಾಧಿಕಾರಿ ಅಥವಾ ಪರೀಕ್ಷಾ ನಿಯಂತ್ರಕರನ್ನು ನೇಮಕ ಮಾಡಲು ಸೇವಾ ಹಿರಿತನ ಪರಿಗಣಿಸುವ ಅಗತ್ಯವಿಲ್ಲವೆಂದು ವಿ.ವಿ ನಿಯಮಗಳು ತಿಳಿಸುತ್ತವೆ. ತಮ್ಮ ನಂಬಿಕೆಗೆ ಅರ್ಹವಾದ ಯಾವುದೇ ಪ್ರಾಧ್ಯಾಪಕರನ್ನು, ಅಷ್ಟೇ ಏಕೆ ಸಹಪ್ರಾಧ್ಯಾಪಕರನ್ನೂ ಕುಲಸಚಿವ, ವಿತ್ತಾಧಿಕಾರಿ ಅಥವಾ ಪರೀಕ್ಷಾ ನಿಯಂತ್ರಕರನ್ನಾಗಿ ನೇಮಕ ಮಾಡಬಹುದು. ವಿಶ್ವವಿದ್ಯಾಲಯದ ಈ ನಿಮಯ ಗೊತ್ತಿದ್ದರೂ ಪ್ರೊ.ರುಮ್ಮಾ ಅವರು ಇಂಥ ಹೇಳಿಕೆ ನೀಡಿದ್ದು ನನಗೆ ಅಪಾರ ನೋವು ತಂದಿದೆ’ ಎಂದು ಅವರು
ಹೇಳಿದ್ದಾರೆ.

‘ಪ್ರೊ.ಶಿವಗಂಗಾ ರುಮ್ಮಾ ಅವರಿಗೆ ಅರ್ಹತೆ ಇದ್ದರೆ, ಸೇವಾ ಹಿರಿತನವೇ ಮಾದರಿಯಾಗಿದ್ದರೆ, ಕುಲಪತಿ ಅವರು ಅವರನ್ನೇ ಕುಲಸಚಿವರನ್ನಾಗಿ ಮಾಡಲಿ. ನನ್ನ ಅಭ್ಯಂತರವೇನೂ ಇಲ್ಲ. ನಾನು ಅತ್ಯಂತ ಸಂತೋಷದಿಂದ ಅವರಿಗೆ ಅಧಿಕಾರ ಹಸ್ತಾಂತರ ಮಾಡುತ್ತೇನೆ. ಇಲ್ಲ ಎನ್ನುವುದಾದರೆ ಅವರ ತಮ್ಮ ಹೇಳಿಕೆಯನ್ನು ಹಿಂದೆ ಪಡೆಯಬೇಕು ಮತ್ತು ಮುಂದೆ ಹೀಗೆ ಹೇಳಿಕೆಯನ್ನು ನೀಡಬಾರದು’ ಎಂದು ಪ್ರೊ.ಡೋಣೂರ ಅವರು
ತಿಳಿಸಿದ್ದಾರೆ.

‘ನಾವು ಮೂಲಭೂತವಾಗಿ ಶಿಕ್ಷಕರಾಗಿದ್ದರಿಂದ ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯುವಂಥ ಮತ್ತು ವಿಶ್ವವಿದ್ಯಾಲಯದ ಘನತೆಗೆ ಧಕ್ಕೆ ತರುವಂಥ ಮಾತುಗಳನ್ನು ಆಡಬಾರದು. ನನಗೆ ಅಧಿಕಾರದ ದಾಹವಿಲ್ಲ, ಹಪಾಹಪಿಯೂ ಇಲ್ಲ. ಹಂಗಾಮಿ ಕುಲಸಚಿವ ಜವಾಬ್ದಾರಿಯನ್ನು ಒಪ್ಪಿಕೊಳ್ಳಲು ವಿಶ್ವವಿದ್ಯಾಲಯದ ಕುಲಪತಿ ಆದೇಶ ಪರಿಪಾಲಿಸುವುದೇ ಕಾರಣವಾಗಿದೆ. ನನ್ನ ಸಂಸ್ಥೆಗೆ ನನ್ನ ನಿಷ್ಠೆ ಇದೆ. ಒಬ್ಬ ಜವಾಬ್ದಾರಿಯುತ ನೌಕರನಾಗಿ ನಾನು ಕುಲಪತಿ ಆದೇಶ ಸ್ವೀಕರಿಸಿದ್ದೇನೆ. ಅಧಿಕಾರದಲ್ಲಿರುವಷ್ಟು ಕಾಲ ಅತ್ಯಂತ ಬದ್ಧತೆಯಿಂದ ನಿಯಮಗಳಿಗೆ ಅನುಗುಣವಾಗಿ ಕರ್ತವ್ಯ ನಿಭಾಯಿಸುತ್ತೇನೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT