ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ ರೈಲ್ವೆ ವಿಭಾಗ ರಚನೆ ಕೈಬಿಟ್ಟ ಕೇಂದ್ರ

ಸಂಸದ ಜಾಧವ ಪ್ರಶ್ನೆಗೆ ಸಚಿವ ಪಿಯೂಷ್ ಗೋಯಲ್ ಪ್ರತಿಕ್ರಿಯೆ
Last Updated 17 ಮಾರ್ಚ್ 2021, 11:50 IST
ಅಕ್ಷರ ಗಾತ್ರ

ಕಲಬುರ್ಗಿ: 2014ರ ಬಜೆಟ್‌ನಲ್ಲಿ ಘೋಷಣೆಯಾದ ಕಲಬುರ್ಗಿ ಸೇರಿದಂತೆ ಮೂರು ಕಡೆಗಳಲ್ಲಿ ರೈಲ್ವೆ ವಿಭಾಗ ಆರಂಭಿಸುವ ಪ್ರಸ್ತಾವವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ರೈಲ್ವೆ ಸಚಿವ ಪಿಯೂಷ್‌ ಗೋಯಲ್ ಬುಧವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಕಲಬುರ್ಗಿ ಸಂಸದ ಡಾ.ಉಮೇಶ ಜಾಧವ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಗೋಯಲ್, ‘ಹಿರಿಯ ರೈಲ್ವೆ ಅಧಿಕಾರಿಗಳ ತಂಡವು ರೈಲ್ವೆ ವಿಭಾಗವನ್ನು ಆರಂಭಿಸುವ ಬಗ್ಗೆ ಪರಿಶೀಲನೆ ನಡೆಸಿತು. ಕಾರ್ಯಾಚರಣೆ, ಹಣಕಾಸು, ಆಡಳಿತಾತ್ಮಕ ಸೇರಿದಂತೆ ಇತರೆ ಅಂಶಗಳನ್ನು ಗಮನಿಸಿದ ಬಳಿಕ ಈ ಪ್ರಸ್ತಾವ ಕೈಬಿಡಬೇಕು ಎಂದು ವರದಿ ಸಲ್ಲಿಸಿದೆ. ಈ ವರದಿಯನ್ನು ಸಕ್ಷಮ ಪ್ರಾಧಿಕಾರವು ಒಪ್ಪಿಕೊಂಡಿದೆ’ ಎಂದು ತಿಳಿಸಿದ್ದಾರೆ.

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರಲ್ಲಿ ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರ್ಗಿ ರೈಲ್ವೆ ವಿಭಾಗ ಆರಂಭಿಸುವ ನಿರ್ಧಾರವನ್ನು ಬಜೆಟ್‌ನಲ್ಲಿ ಘೋಷಿಸಿದ್ದರು. ರಾಜ್ಯ ಸರ್ಕಾರ ಇದಕ್ಕೆ ಜಮೀನನ್ನೂ ನೀಡಿದೆ.

ಆಕ್ರೋಶ: ‘ಹಣಕಾಸು, ಆಡಳಿತಾತ್ಮಕ ಕಾರಣ ನೀಡಿ ಕಲಬುರ್ಗಿ ರೈಲ್ವೆ ವಿಭಾಗ ರಚನೆ ಕೈಬಿಟ್ಟಿರುವ ಕೇಂದ್ರ ಸರ್ಕಾರ, ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದ ರಾಯಗಡ ರೈಲ್ವೆ ವಿಭಾಗಕ್ಕೆ ಮಂಜೂರಾತಿ ನೀಡಿ ಕಾಮಗಾರಿಯನ್ನೂ ಆರಂಭಿಸಿದೆ. ಇದು ಕೇಂದ್ರದ ಮಲತಾಯಿ ಧೋರಣೆಯಲ್ಲವೇ’ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಚಾಲಕ ಸುನೀಲ ಕುಲಕರ್ಣಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT