ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಪಾಸ್ ರಸ್ತೆ ನಿರ್ಮಾಣಕ್ಕೆ ಆಗ್ರಹ

ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ ಮನವಿ ಸಲ್ಲಿಸಿದ ಡಾ.ಜಾಧವ
Last Updated 26 ಏಪ್ರಿಲ್ 2022, 5:19 IST
ಅಕ್ಷರ ಗಾತ್ರ

ಕಲಬುರಗಿ: ನಗರದ ರಿಂಗ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವುದರಿಂದ ರಾಷ್ಟ್ರೀಯ ಹೆಚ್ಚಾರಿ ‘150ಇ’ ಯಿಂದ ರಾ.ಹೆ. 150ರ ಮೂಲಕ ರಾ.ಹೆ. 50ಕ್ಕೆ ಸಂಪರ್ಕ ಕಲ್ಪಿಸುವ ನೂತನ ಬೈಪಾಸ್ ರಸ್ತೆಯನ್ನು ನಿರ್ಮಿಸಬೇಕು ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಸಂಸದ ಡಾ. ಉಮೇಶ ಜಾಧವ ಮನವಿ ಸಲ್ಲಿಸಿದರು.

ಗಾಣಗಾಪುರದ ದತ್ತ ಮಂದಿರಕ್ಕೆ ಸೋಮವಾರ ಭೇಟಿ ನೀಡಿದ್ದ ಸಚಿವರನ್ನು ಭೇಟಿ ಮಾಡಿದ ಸಂಸದರು, ‘41.43 ಕಿ.ಮೀ. ರಸ್ತೆ ನಿರ್ಮಾಣ ಹಾಗೂ ಭೂಸ್ವಾಧೀನಕ್ಕೆ ₹ 1,700 ಕೋಟಿ ಅಗತ್ಯವಿದ್ದು, ಈ ಯೋಜನೆಗೆ ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಅಫಜಲಪುರ ತಾಲ್ಲೂಕಿನ ಗಾಣಗಾಪುರದಿಂದ ತೆಲ್ಲೂರ, ಆನೂರ, ಕರಜಗಿ, ಮಣ್ಣೂರ, ಇಂಡಿ ಮೂಲಕ ಪಂಢರಾಪುರಕ್ಕೆ ಸಂಪರ್ಕ ಕಲ್ಪಿಸಲು ಈಗ ಇರುವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಬೇಕು. 59 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲು ₹ 410 ಕೋಟಿ ಬೇಕಾಗುತ್ತದೆ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ‘150 ಇ’ಯಲ್ಲಿ ಸರ್ವಿಸ್ ರಸ್ತೆಯನ್ನು ನಿರ್ಮಿಸಬೇಕು ಹಾಗೂ ಹುಮನಾಬಾದ್ ಬೇಸ್‌ನಿಂದ ಆಳಂದ ಚೆಕ್‌ಪೋಸ್ಟ್‌ವರೆಗೆ ಮೇಲ್ಸೇತುವೆ ನಿರ್ಮಿಸಬೇಕು. ಚಿಂಚೋಳಿ ಹಾಗೂ ಮಿರಿಯಾಣ ಮಧ್ಯದ ದ್ವಿಪಥ ರಸ್ತೆಯನ್ನು ವಿಸ್ತರಿಸಬೇಕು ಹಾಗೂ ಮರು ನಿರ್ಮಾಣ ಮಾಡಬೇಕು. ಕಲಬುರಗಿಯ ಹೈಕೋರ್ಟ್‌ನಿಂದ ಅಫಜಲಪುರ ತಾಲ್ಲೂಕಿನ ಬಳೂರ್ಗಿವರೆಗಿನ ರಾಷ್ಟ್ರೀಯ ಹೆದ್ದಾರಿ ಹದಗೆಟ್ಟಿದ್ದು, ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು. ಶಹಾಬಾದ್‌ ಕ್ರಾಸ್‌ನಿಂದ ಚಿತ್ತಾಪುರ ಕ್ರಾಸ್‌ವರೆಗಿನ ರಾಷ್ಟ್ರೀಯ ಹೆದ್ದಾರಿ 150ನ್ನು ದುರಸ್ತಿ ಮಾಡಬೇಕು. ತೆಲಂಗಾಣ, ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ರಾ.ಹೆ. 9ರ ಬಳಿಯ ಸಸ್ತಾಪುರ–ನಾರಾಯಣಪೇಟೆ ಮಧ್ಯದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು. ಚಿಂಚೋಳಿ, ಸೇಡಂ, ಚಿತ್ತಾಪುರ, ವಾಡಿ, ನಾಲವಾರ, ಸನ್ನತಿ, ಶಹಾಪುರ ಮಧ್ಯದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನು ಘೋಷಿಸಬೇಕು. 170 ಕಿ.ಮೀ. ಉದ್ದದ ರಸ್ತೆಗೆ ₹ 850 ಕೋಟಿ ಬೇಕಾಗುತ್ತದೆ ಎಂದರು.

ಕೆಕೆಆರ್‌ಡಿಬಿ ಅಧ್ಯಕ್ಷ ರೇವೂರ ಮನವಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ವಿಮಾನ ನಿಲ್ದಾಣದಲ್ಲಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಕಲಬುರಗಿ ಹೊರವಲಯದಲ್ಲಿ ಮತ್ತೊಂದು ರಿಂಗ್‌ ರಸ್ತೆಗೆ ಅನುಮೋದನೆ ನೀಡುವಂತೆ ಮನವಿ ಸಲ್ಲಿಸಿದರು.

ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ದಿಲೀಷ್ ಶಶಿ, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಬೀದರ್‌ನ ಗುತ್ತಿಗೆದಾರ ಗುರುನಾಥ ಕೊಳ್ಳುರ ಈ ಸಂದರ್ಭದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT