ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಸರ್ಗಿಕ ಸಂಪನ್ಮೂಲ ರಕ್ಷಿಸಿ; ಉಮೇಶ ಹೊಸೂರು

Last Updated 3 ಜುಲೈ 2022, 2:56 IST
ಅಕ್ಷರ ಗಾತ್ರ

ಕಲಬುರಗಿ: ‘ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಂಖ್ಯೆಯಿಂದ ನೈಸರ್ಗಿಕ ಸಂಪನ್ಮೂಲಗಳು ಕ್ಷೀಣಿಸುತ್ತಿರುವುದು ಆತಂಕಕಾರಿ’ ಎಂದು ಮುಂಬೈ ಎಸಿಸಿ ಲಿಮಿಟೆಡ್‌ ಉಪಾಧ್ಯಕ್ಷ ಉಮೇಶ ಹೊಸೂರು ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಶರಣಬಸವ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ‘ಬಹುಶಿಸ್ತೀಯ ಸಂಶೋಧನೆಯಲ್ಲಿ ಇತ್ತೀಚಿನ ಆವಿಷ್ಕಾರಗಳು’ ಕುರಿತ ರಾಷ್ಟ್ರೀಯ ಸಮ್ಮೇಳನದ ಎರಡನೇ ದಿನವಾದ ಶನಿವಾರ, ‘ಜಾಗತಿಕ ಮಟ್ಟದಲ್ಲಿ ಕ್ಷೀಣಿಸುತ್ತಿರುವ ನೈಸರ್ಗಿಕ ಸಂಪನ್ಮೂಲಗಳು ಹಾಗೂ ಸವಾಲುಗಳು’ ಕುರಿತು ಅವರು ಮಾತನಾಡಿದರು.

‘ಸಂಪನ್ಮೂಲಗಳು ಕರಗುವುದರ ಜತೆಗೆ ಜಾಗತಿಕ ಮಟ್ಟದಲ್ಲಿ ಆಕಾಶ, ಭೂಮಿ, ಗಾಳಿ, ನೀರಿನ ಗುಣಮಟ್ಟದ ಕೊರತೆಯೂ ಎದ್ದು ಕಾಣುತ್ತಿದೆ. ಇವುಗಳ ರಕ್ಷಣೆ ನಮ್ಮ ಮೊದಲ ಕರ್ತವ್ಯ ಆಗಬೇಕು’ಎಂದರು.

‘ಅಮೆರಿಕ, ಇಂಡೊನೇಷ್ಯಾ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಜನಸಾಂದ್ರತೆ ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ. ಜನಸಂಖ್ಯೆ ಪ್ರಮಾಣ ಏರಿಕೆಯಾದಂತೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಇದರಿಂದ ನೈಸರ್ಗಿಕ ಸಂಪನ್ಮೂಲ ಹಾಗೂ ಕೈಗಾರಿಕೆಗಳ ಉತ್ಪಾದನೆ ಮೇಲೆ ಒತ್ತಡ ಬಿಳುತ್ತಿದೆ. ಇದು ವಸ್ತುವಿನ ಗುಣಮಟ್ಟ ತಗ್ಗಿಸುತ್ತದೆ. ಪ್ರತಿಯೊಂದು ವಸ್ತುವಿನ ಗುಣಮಟ್ಟ ಕಾಯ್ದುಕೊಳ್ಳಲು ಜನಸಂಖ್ಯೆಯ ನಿಯಂತ್ರಣ ಅಗತ್ಯವಾಗಿದೆ. ಇದು ನಮ್ಮೆಲ್ಲರ ಕೈಯಲ್ಲಿಯೇ ಇದೆ’ ಎಂದು ಹೇಳಿದರು. ‘ಭೂಮಿಯ ಮೇಲೆ ಮೂರನೇ ಎರಡರಷ್ಟು ಭಾಗ ಜಲವೇ ಆವರಿಸಿಕೊಂಡಿದ್ದರೂ ಸ್ವಚ್ಛವಾದ ನೀರಿನ ಕೊರತೆ ಬಹುವಾಗಿ ಕಾಡುತ್ತಿದೆ. ಕಚ್ಚಾ ವಸ್ತುಗಳು, ಕಾರ್ಖಾನೆಗಳ ತ್ಯಾಜ್ಯಗಳನ್ನು ನದಿ ಹಾಗೂ ಸಮುದ್ರಕ್ಕೆ ಹರಿಬಿಟ್ಟ ಪರಿಣಾಮ ಜಲಮೂಲ ಕಲುಷಿತವಾಗುತ್ತಿದೆ. ಇದರಿಂದ ಜೀವಸಂಕುಲದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಾಗಾಗಿ, ನೀರಿನ ಸ್ವಚ್ಛತೆ ಕಾಪಾಡುವುದು ಹಿಂದೆಂದಿಗಿಂತಲೂ ಈಗ ಅಗತ್ಯವಾಗಿದೆ’ ಎಂದು ಅವರು ತಿಳಿಸಿದರು.

‘ಮಾಲಿನ್ಯಗಳನ್ನು ತಡೆಗಟ್ಟದೆ ಹೋದರೇ ಮುಂದಿನ ದಿನಗಳಲ್ಲಿ ಪರಿಸರದ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ. ಭವಿಷ್ಯದ ಪೀಳಿಗೆಗೆ ಉಸಿರಾಡಲೂ ಕಷ್ಟಕರವಾಗುತ್ತದೆ. ಸಂಪನ್ಮೂಲಗಳ ಅವಸಾನ ತಪ್ಪಿಸಲು, ಸರ್ಕಾರ ನವೀಕರಿಸಬಹುದಾದ ಸೌರ ವಿದ್ಯುತ್, ಪವನ ವಿದ್ಯುತ್, ಜಲ ವಿದ್ಯುತ್, ಜಿಯೋ ಥರ್ಮಲ್ ಎನರ್ಜಿ, ಬಯೋ ಎನರ್ಜಿಯಂತಹ ಯೋಜನೆಗಳಿಗೆ ಆದ್ಯತೆ ನೀಡುತ್ತಿದೆ’ ಎಂದರು. ಶರಣಬಸವ ವಿಶ್ವವಿದ್ಯಾಲಯದ ಸಮಕುಲಪತಿ ಪ್ರೊ.ವಿ.ಡಿ.ಮೈತ್ರಿ, ಕುಲಸಚಿವ ಡಾ.ಅನಿಲ್ ಕುಮಾರ ಬಿಡವೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT