ಶುಕ್ರವಾರ, ಆಗಸ್ಟ್ 14, 2020
27 °C

ಕಲಬುರ್ಗಿ | ಕಾಗಿಣಾ ನದಿಯಲ್ಲಿ ಸಿಲುಕಿದ್ದ 8 ಮಂದಿ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಜಿಲ್ಲೆಯ ಸೇಡಂ ತಾಲ್ಲೂಕಿನ ಬಿಬ್ಬಳ್ಳಿ ಗ್ರಾಮದ ಬಳಿ ಶುಕ್ರವಾರ, ಉಕ್ಕಿ ಹರಿದ ಕಾಗಿಣಾ ನದಿಯಲ್ಲಿ ಸಿಲುಕಿದ್ದ ಎಂಟು ಮಂದಿಯನ್ನು ರಕ್ಷಿಸಲಾಗಿದೆ. ಇದೇ ಗ್ರಾಮದ ಶರಣು ಎಂಬ ಮೀನುಗಾರ ಇವರನ್ನು ರಕ್ಷಿಸುವ ಸಾಹಸ ಮಾಡಿದ್ದಾರೆ.

ನದಿ ದಂಡೆಯಲ್ಲಿನ ಮರಳು ತರಲು ಈ ಎಂಟು ಜನರು ಬೆಳಿಗ್ಗೆ ನದಿಗೆ ಇಳಿಸಿದ್ದರು. ಏಕಾಏಕಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಯಿತು. ತುಸು ದೂರ ತೇಲಿಕೊಂಡು ಹೋದ ಎಂಟೂ ಜನ ನದಿ ಮಧ್ಯದಲ್ಲಿ ಇದ್ದ ಪೊದೆಗಳ ಆಸರೆ ಪಡೆದರು. ಗುರುವಾರ ರಾತ್ರಿ ಕಾಗಿಣಾ ಪಾತ್ರದಲ್ಲಿ ಧಾರಾಕಾರ ಮಳೆ ಸುರಿದ ಕಾರಣ, ಬೆಳಿಗ್ಗೆ ಅಪಾರ ಪ್ರಮಾಣದ ನೀರು ಧುಮುಕಿ ಬಂತು. ಮರಳು ತೆಗೆಯಲು ಹೋದವರು ಓಡಿ ಬರಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.‌ ಬೆಳಿಗ್ಗೆ 10ಕ್ಕೆ ನದಿಗೆ ಇಳಿದಿದ್ದ ಇವರು ಒಂದೂವರೆ ತಾಸು ಜೀವ ಕೈಯಲ್ಲಿ ಹಿಡಿದುಕೊಂಡು ನಿಂತರು.‌

ನೀರಿನ ರಭಸ ಹೆಚ್ಚಾಗಿದ್ದನ್ನು ಕಂಡು ನದಿಯಲ್ಲಿ ಸಿಲುಕಿದ್ದ ಒಬ್ಬ ಯುವಕ ತನ್ನ ಮೊಬೈಲ್‌ನಿಂದ ಸ್ನೇಹಿತರಿಗೆ ಫೋನ್‌ ಮಾಡಿದ. ಗ್ರಾಮದ ಜನ ಪೊಲೀಸ್‌ ಕಂಟ್ರೋಲ್‌ ರೂಂ ಹಾಗೂ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ವಿಷಯ ಮುಟ್ಟಿಸಿದರು. ಸ್ಥಳಕ್ಕೆ ಧಾವಿಸಿದ ಸೇಡಂನ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು, ರಕ್ಷಣಾ ಕಾರ್ಯಕ್ಕೆ ಮುಂದಾದರು.

ಸಿಬ್ಬಂದಿ ಮಾರ್ಗದರ್ಶನದಂತೆ ಮಿನಿಬೋಟ್‌ ಮೂಲಕ ನದಿಗೆ ಇಳಿದ ಯುವಕ ಶರಣು; ಒಬ್ಬೊಬ್ಬರಾಗಿ ಎಲ್ಲರನ್ನೂ ದಡ ಸೇರಿಸಿದರು. ಈ ದೃಶ್ಯವನ್ನು ನದಿ ದಡದಲ್ಲಿ ನಿಂತಿದ್ದ ಕೆಲವರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು.

ಡಿವೈಎಸ್‌ಪಿ ವೀರಭದ್ರಯ್ಯ, ಸಿಪಿಐ ರಾಜಶೇಖರ ಅಳಗೋದಿ, ಅಗ್ನಿಶಾಮಕ ಠಾಣಾಧಿಕಾರಿ ಮಾಣಿಕ, ಆರು ಮಂದಿ ಸಿಬ್ಬಂದಿ, ಐವರು ಮೀನುಗಾರರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.‌

ಆರು ತಿಂಗಳ ಹಿಂದೆ ಎಫ್‌ಡಿಎ ಒಬ್ಬರು ಇದೇ ನದಿಯಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.