ಶುಕ್ರವಾರ, ಅಕ್ಟೋಬರ್ 18, 2019
23 °C
ಸದಾಶಿವ ವರದಿ ಜಾರಿಗೆ ಒತ್ತಾಯಿಸಿ ಸಿ.ಎಂ. ಎದುರು ಘೋಷಣೆ

ಕಾರ್ಯಕರ್ತರನ್ನು ಹೊರಗೆ ಕಳಿಸಿದ ಪೊಲೀಸರು

Published:
Updated:
Prajavani

ಕಲಬುರ್ಗಿ: ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿಯನ್ನು ಶೀಘ್ರ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮುಖ್ಯಮಂತ್ರಿ ಜನತಾದರ್ಶನ ವೇಳೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗಿದ್ದರಿಂದ ಪೊಲೀಸರು ಅವರನ್ನು ಒತ್ತಾಯಪೂರ್ವಕವಾಗಿ ಹೊರಕ್ಕೆ ಕಳಿಸಿದರು.

ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಭಾಗವಹಿಸಲು ನಗರಕ್ಕೆ ಬಂದಿದ್ದ ಯಡಿಯೂರಪ್ಪ ಅವರು ಮಂಗಳವಾರ ಮಧ್ಯಾಹ್ನ ಐವಾನ್‌ ಇ ಶಾಹಿ ಅತಿಥಿಗೃಹದಲ್ಲಿ ಊಟ ಮಾಡಿದ ಬಳಿಕ ಕೆಲಹೊತ್ತು ಜನತಾ ದರ್ಶನ ನಡೆಸಿದರು. ಸಾರ್ವಜನಿಕರು ಹಾಗೂ ಸಂಘಟನೆಗಳ ಮುಖಂಡರಿಗೆ ಶಾಮಿಯಾನದಲ್ಲಿ ಕುರ್ಚಿ ಹಾಕಿ ಕುಳಿತುಕೊಳ್ಳುವಂತೆ ಸೂಚಿಸಲಾಗಿತ್ತು. ಮುಖ್ಯಮಂತ್ರಿ ಬರುತ್ತಿದ್ದಂತೆಯೇ ನೂಕುನುಗ್ಗಲು ಹೆಚ್ಚಾಯಿತು. ಅರ್ಜಿ ಸಲ್ಲಿಸಲು ದಲಿತ ಸಂಘರ್ಷ ಸಮಿತಿ ಸದಸ್ಯರು ಮುಂದಾಗುವ ಬದಲು ಯಡಿಯೂರಪ್ಪ ಅವರ ಗಮನ ಸೆಳೆಯಲು ಘೋಷಣೆ ಕೂಗಲಾರಂಭಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಪ್ರತಿಭಟನಾಕಾರರನ್ನು ಅತಿಥಿಗೃಹದ ಮುಂಭಾಗದಿಂದ ಗೇಟಿನವರೆಗೆ ಕರೆದೊಯ್ದರು. ಆಗಲೂ ಘೋಷಣೆ ಕೂಗುವುದು ನಿಲ್ಲಿಸಲಿಲ್ಲ. ಗೇಟಿನ ಎದುರು ಕುಳಿತು ಧರಣಿಗೆ ಮುಂದಾದರು.

ಜನತಾ ದರ್ಶನ ಮುಗಿಸಿದ ಬಳಿಕ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಉದ್ಘಾಟನೆಗೆ ತೆರಳಲು ಮುಖ್ಯಮಂತ್ರಿ ಕಾರು ಹತ್ತಿದರು. ಪೊಲೀಸರು ಗೇಟಿನ ಬಳಿಯಿಂದ ಕಾರ್ಯಕರ್ತರನ್ನು ಬೇರೆಡೆ ಕರೆದುಕೊಂಡು ಹೋದರು.

Post Comments (+)