ಶನಿವಾರ, ಡಿಸೆಂಬರ್ 14, 2019
22 °C

ಹಾಗರಗಾ: ಪಿಡಿಒ, ಇಒ ವರ್ಗಾವಣೆಗೆ ಒತ್ತಾಯಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಅನುದಾನ ದುರ್ಬಳಕೆ ಮಾಡಿರುವ ತಾಲ್ಲೂಕಿನ ಹಾಗರಗಾ ಗ್ರಾಮ ಪಂಚಾಯಿತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮತ್ತು ಕಾರ್ಯನಿರ್ವಾಹಕ ಅಧಿಕಾರಿ (ಇಒ)ಯನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿ ಹಾಗರಗಾ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ದಲಿತ ಸಂಘರ್ಷ ಸಮಿತಿ ಸದಸ್ಯರು ಮಂಗಳವಾರ ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಪಿಡಿಒ ಮತ್ತು ಇಒ ಅವ್ಯವಹಾರದ ಕುರಿತು ಈಗಾಗಲೇ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ವರದಿ ಸಲ್ಲಿಸಲಾಗಿದೆ. ಆದರೂ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸೂರ್ಯಕಾಂತ ಶಂಕರ ದೂರಿದರು.

ಅಲ್ಲದೇ, ಹಾಗರಗಾ, ಖಾಜಾ ಕೋಟನೂರ, ಆಜಾದಪುರ ಗ್ರಾಮಗಳಲ್ಲಿ ಹಲವಾರು ಸಮಸ್ಯೆಗಳಿದ್ದು, ಅಧಿಕಾರಿಗಳು ಜನರಿಗೆ ಸ್ಪಂದಿಸುತ್ತಿಲ್ಲ  ಫಾಗಿಂಗ್ ಮಷಿನ್ ಬಳಸಿ ಪೌಡರ್ ಹೊಡೆಯದೇ ಇರುವುದರಿಂದ ಗ್ರಾಮದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿ ಸಾರ್ವಜನಿಕರು ಡೆಂಗಿ, ಮಲೆರಿಯಾದಂಥ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ತಿಳಿಸಿದರು.

ಆಜಾದಪುರ ಗ್ರಾಮದಲ್ಲಿ ಬಹಳಷ್ಟು ಬೋರ್‌ವೆಲ್‌ಗಳು ಕೆಟ್ಟು ಹೋಗಿದ್ದು, ದುರಸ್ತಿ ಮಾಡಿಸದೇ ಇರುವುದರಿಂದ ಸಾರ್ವಜನಿಕರು ನೀರಿನ ದಾಹದಿಂದ ಬಳಲುವಂತಾಗಿದೆ. ಇದಕ್ಕೆ ಪಿಡಿಒ ಮತ್ತು ಇಒ ಅವರ ನಿರ್ಲಕ್ಷ್ಯವೇ ಕಾರಣವಾಗಿದ್ದು, ಈ ಕೂಡಲೇ ಇವರಿಬ್ಬರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ಗ್ರಾ.ಪಂ. ಸದಸ್ಯರಾದ ಮೀನಾಕ್ಷಿ ಸೂರ್ಯಕಾಂತ, ಎಸ್.ಪ್ರಕಾಶ್, ಖತಲಪ್ಪಾ, ದಲಿತ ಸಂಘರ್ಷ ಸಮಿತಿ ಸದಸ್ಯರಾದ ಶಿವಕುಮಾರ ಕೋರಳ್ಳಿ, ಆನಂದ ಗದ್ದಿ, ಅರ್ಜುನ ಭದ್ರೆ, ಮಲ್ಲಿಕಾರ್ಜುನ ಖನ್ನಾ ಇದ್ದರು.

ಪ್ರತಿಕ್ರಿಯಿಸಿ (+)