ಸೋಮವಾರ, ಡಿಸೆಂಬರ್ 16, 2019
25 °C
ಎಐಎಂಎಸ್‌ಎಸ್‌, ಎಐಡಿಎಸ್‌ಒ, ಎಬಿವಿಪಿ, ವುಮೆನ್‌ ಇಂಡಿಯಾ ಮೂವ್‌ಮೆಂಟ್‌ ಸಂಘಟನೆಗಳಿಂದ ಧರಣಿ

ಬಾಲಕಿ ಮೇಲಿನ ಅತ್ಯಾಚಾರ, ಕೊಲೆಗೆ ತೀವ್ರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಚಿಂಚೋಳಿ ತಾಲ್ಲೂಕಿನ ಯಾಕಾಪುರ ಗ್ರಾಮದಲ್ಲಿ ನಡೆದ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಖಂಡಿಸಿ ನಗರದಲ್ಲಿ ಬುಧವಾರ ಸರಣಿ ಪ್ರತಿಭಟನೆಗಳು ನಡೆದವು.

ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್‌), ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ), ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಹಾಗೂ ವುಮೆನ್‌ ಇಂಡಿಯಾ ಮೂವ್‌ಮೆಂಟ್‌ ಸಂಘಟನೆಯ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

ಎಐಎಂಎಸ್‌ಎಸ್‌, ಎಐಡಿಎಸ್ಒ: ಎರಡೂ ಸಂಘಟನೆಗಳ ಕಾರ್ಯಕರ್ತರು ಜಂಟಿಯಾಗಿ ನಗರದ ಎಸ್‌ವಿಪಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಬಾಲಕಿ ಮೇಲಿನ ದೌರ್ಜನ್ಯ ಹಾಗೂ ಕುಕೃತ್ಯವನ್ನು ಖಂಡಿಸಿದರು. 

ಯಾಕಾಪುರ ಗ್ರಾಮದಲ್ಲಿ ಬಾಲಕಿಯ ಮೇಲೆ ಹೀನ ಅಪರಾಧ ಎಸಗಿದ ಯಲ್ಲಪ್ಪನಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಇತ್ತೀಚೆಗೆ ಹೈದರಾಬಾದ್‌ನ ಶಂಶಾದ್‌ನಲ್ಲಿ ನಡೆದ ಪಶುವೈದ್ಯೆಯ ದಾರುಣ ಸಾವು ದೇಶದ ಜನರ ಮನಸ್ಸನ್ನು ಕದಡಿಬಿಟ್ಟಿದೆ. ಬಲವಂತವಾಗಿ ಗುಂಪು ಅತ್ಯಾಚಾರ ಮಾಡಿ, ಕೊಲೆ ಮಾಡಿ ನಂತರ ದೇಹಕ್ಕೆ ಬೆಂಕಿ ಹಚ್ಚಿ ಸುಟ್ಟ ವಿಕೃತ ವ್ಯಕ್ತಿಗಳ ಕ್ರೌರ್ಯವನ್ನು ಕೇಳಿದರೆ ಮೈ ನಡುಗುತ್ತದೆ. ಒಂದು ನಾಗರಿಕ ಸಮಾಜದಲ್ಲಿ ಇಂತಹ ಪಾಶವೀ ಕೃತ್ಯಗಳನ್ನು ಎಸಗಲು ಭಯವೇ ಇರದಂತಹ ಪರಿಸ್ಥಿತಿ ಇರುವುದು ಖಂಡನಾರ್ಹವಾಗಿದೆ ಎಂದು ಟೀಕಿಸಿದರು.

ಎರಡು ತಿಂಗಳಲ್ಲೇ ಹಲವಾರು ಮಹಿಳೆಯರ ಮೇಲೆ ದೌರ್ಜನ್ಯ ನಡೆದಿರುವುದು ನಾಚಿಕೆಗೇಡಿನ ಸಂಗತಿ. ದಾವಣಗೆರೆಯಲ್ಲಿ ಮನೆಯಲ್ಲಿ ಆಡುತ್ತಿದ್ದ ಎಂಟು ವರ್ಷದ ಬಾಲಕಿಯನ್ನು ದನದ ಕೊಟ್ಟಿಗೆಗೆ ಎಳೆದೊಯ್ದು ಅತ್ಯಾಚಾರ ಮಾಡಲಾಗಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಜನ್ಮದಿನ ಆಚರಿಸಲು ಗೆಳೆಯನ ಜೊತೆ ಪಾರ್ಕಿಗೆ ತೆರಳಿದ್ದ ‍ಪ್ರಥಮ ಪಿ.ಯು. ವಿದ್ಯಾರ್ಥಿನಿಯ ಮೇಲೆ ಆರು ಜನ ಸೇರಿ ಗುಂಪು ಅತ್ಯಾಚಾರ ಮಾಡಿದ್ದಾರೆ. ಗುಜರಾತ್‌ನ ರಾಜಕೋಟ್‌ನಲ್ಲಿ ಎಂಟು ವರ್ಷದ ಮಗುವನ್ನು ಅಪಹರಿಸಿ ಥಳಿಸಿ ಅತ್ಯಾಚಾರ ಮಾಡಲಾಗಿದೆ. ನಮ್ಮ ದೇಶದಲ್ಲಿ ಅತ್ಯಾಚಾರಿಗಳಿಗೆ, ಮಹಿಳೆಯರಿಗೆ ಅಗೌರವ ತೋರುವವರಿಗೆ ಕಾನೂನಿನಲ್ಲಿ ಶಿಕ್ಷೆಗಳೇ ಇಲ್ಲದಿರುವುದು, ನಮ್ಮ ಜನಪ್ರತಿನಿಧಿಗಳೇ ಅಪರಾಧಿಗಳಾಗಿರುವುದು ಹಾಗೂ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲತೆಯನ್ನು, ವಿಕೃತಿಯನ್ನು ಯಾವ ಅಡೆತಡೆಯಿಲ್ಲದೇ ಪ್ರಸಾರ ಮಾಡಲು ಸರ್ಕಾರವೇ ಬೆನ್ನೆಲುಬಾಗಿ ನಿಂತಿರುವುದು ಈ ಘಟನೆಗಳಿಗೆ ಕುಮ್ಮಕ್ಕು ನೀಡುತ್ತಿವೆ ಎಂದು ಟೀಕಿಸಿದರು.

ಇಂತಹ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಸಮಾಜದಲ್ಲಿ ಉನ್ನತ ನೀತಿ, ಮೌಲ್ಯಗಳ ಆಧಾರದಲ್ಲಿ ಸಮಾಜದ ಕಟ್ಟುಪಾಡುಗಳನ್ನು ಪೋಷಿಸಬೇಕು. ಮದ್ಯಪಾನ ಮತ್ತು ಮಾದಕ ವಸ್ತುಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಎಐಎಂಎಸ್‌ಎಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ಗುಂಡಮ್ಮ ಮಡಿವಾಳ, ಎಐಡಿಎಸ್‌ಒ ಜಿಲ್ಲಾ ಘಟಕದ ಅಧ್ಯಕ್ಷ ಹಣಮಂತ ಎಸ್‌.ಎಚ್‌., ಉಪಾಧ್ಯಕ್ಷೆ ಸ್ನೇಹಾ ಕಟ್ಟಿಮನಿ, ರಾಧಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌: ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಗೃಹಸಚಿವರಿಗೆ ಮನವಿ ಸಲ್ಲಿಸಿದರು.

‘ಹೈದರಾಬಾದ್‌ನಲ್ಲಿ ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಸಜೀವ ದಹನ ಮಾಡಿರುವ ಬೆನ್ನಲ್ಲೇ ಚಿಂಚೋಳಿ ತಾಲ್ಲೂಕಿನ ಯಾಕಾಪುರದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು ಹೇಯಕೃತ್ಯ. ಸಹಾಯ ಮಾಡುವ ನೆಪದಲ್ಲಿ ಸಮಾಜದಲ್ಲಿ ಅತ್ಯಾಚಾರ, ದೌರ್ಜನ್ಯಗಳು ಹೆಚ್ಚುತ್ತಿದ್ದು, ಮಹಿಳೆಯರನ್ನು ಅತ್ಯಾಚಾರವೆಸಗಿ ಸುಟ್ಟು ಕೊಲೆ ಮಾಡುವ ಮಾನಸಿಕತೆಯುಳ್ಳವರು ಭೂಮಿ ಮೇಲೆ ಬದುಕುವುದು ಯೋಗ್ಯವಲ್ಲ. ಇಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಹೈದರಾಬಾದ್‌ನ ದಂತವೈದ್ಯೆ ಹಾಗೂ ಯಾಕಾಪುರದ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ತ್ವರಿತಗತಿಯ ನ್ಯಾಯಾಲಯಕ್ಕೆ ಹಸ್ತಾಂತರಿಸಿದ ಅತ್ಯಾಚಾರಿಗಳು ಹಾಗೂ ಕೊಲೆಗಾರರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೇವಣಸಿದ್ದ ಜಾಡರ, ಜಿಲ್ಲಾ ಸಂಚಾಲಕ ನಾಗರಾಜ ಬಟಗೇರಾ, ವಿದ್ಯಾರ್ಥಿ ಮುಖಂಡರಾದ ತೋಟಪ್ಪ, ಓಂಕಾರ, ಪ್ರಿಯಾ, ಕೃಷ್ಣಪ್ಪ, ವೈಭವ, ವಿಶ್ವ ಪಾಟೀಲ, ಅರುಣ ಬಿರಾದಾರ ನೇತೃತ್ವ ವಹಿಸಿದ್ದರು.

ಅತ್ಯಾಚಾರ ಖಂಡಿಸಿ ಬೀದಿಗಿಳಿದ ಮುಸ್ಲಿಂ ಮಹಿಳೆಯರು

ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿ ವುಮೆನ್‌ ಇಂಡಿಯಾ ಮೂವ್‌ಮೆಂಟ್‌ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಅಪರಾಧ ಕೃತ್ಯಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಆದರೆ, ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ ಬಹಳ ಕಡಿಮೆ ಪ್ರಮಾಣದಲ್ಲಿ ಆಗುತ್ತಿದೆ. ಅದರಲ್ಲಿಯೂ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ತುಳಿತಕ್ಕೊಳಗಾದವರಿಗೆ ನ್ಯಾಯದಾನವು ಮರೀಚಿಕೆಯಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಮಹಿಳೆಯರಿಗೆ ಅಸುರಕ್ಷಿತ ಭಾವನೆ ಬೇರೂರಿದ್ದು, ಉದ್ಯೋಗ, ಶಿಕ್ಷಣ ಸೇರಿದಂತೆ ಇತರ ಪ್ರಜಾಸತ್ತಾತ್ಮಕ ಹಕ್ಕುಗಳು ಅವರಿಗೆ ದಕ್ಕುತ್ತಿಲ್ಲ ಎದು ಬೇಸರ ವ್ಯಕ್ತಪಡಿಸಿದರು.

ಹೈದರಾಬಾದ್‌ನ ಪಶುವೈದ್ಯೆ, ಕೊಯಮತ್ತೂರಿನ ಬಾಲಕಿ ಹಾಗೂ ಚಿಂಚೋಳಿಯಲ್ಲಿ ನಡೆದ ಹೇಯಕೃತ್ಯಗಳ ಪ್ರಕರಣಗಳಿಗೆ ಸೂಕ್ತ ನ್ಯಾಯ ದೊರಕಿಸುವ ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ನ್ಯಾಯಾಲಯಗಳು ಶೀಘ್ರ ವಿಚಾರಣೆಯನ್ನು ಆರಂಭಿಸಬೇಕು ಎಂದು ಮುಸ್ಲಿಂ ಮಹಿಳೆಯರು ಒತ್ತಾಯಿಸಿದರು.

ವುಮೆನ್‌ ಇಂಡಿಯಾ ಮೂವ್‌ಮೆಂಟ್‌ನ ಜಿಲ್ಲಾ ಘಟಕದ ಅಧ್ಯಕ್ಷೆ ರೆಹನಾ ಬೇಗಂ, ಮುಖಂಡರಾದ ಆಯೇಷಾ, ವಹೀದಾ ಬೇಗಂ, ಅಜ್ರಾ, ಸನಾ ಸುಲ್ತಾನಾ, ಆಯೇಷಾ ಏಜಾಝ್‌, ಮುಬೀನಾ, ಅತಿಯಾ ಅಫ್ರೀನ್ ಇದ್ದರು.

ಜೆಡಿಎಸ್‌ನಿಂದ ಖಂಡನೆ

ಯಾಕಾಪುರದ ಬಾಲಕಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಘಟನೆಯನ್ನು ಜಿಲ್ಲಾ ಜಾತ್ಯತೀತ ಜನತಾದಳ ಖಂಡಿಸಿದೆ. 

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಶಾಮರಾವ ಸೂರನ್, ದೇಶದಲ್ಲಿ ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಆದರೆ, ಸರ್ಕಾರ ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಬೇಟಿ ಪಡಾವೊ ಬೇಟಿ ಬಚಾವೊ ಬರೀ ಘೋಷಣೆಯಾಗಿಯೇ ಉಳಿದಿದೆ. ದೇಶದಲ್ಲಿ ಇಂದಿಗೂ ಮಹಿಳೆಯರ ರಕ್ಷಣೆಗೆ ಕಠಿಣ ಕಾನೂನುಗಳಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೀನ ಕೃತ್ಯಗಳಲ್ಲಿ ತೊಡಗಿದ ಅಪರಾಧಿಗಳಿಗೆ ತಕ್ಷಣ ಗಲ್ಲಿಗೇರಿಸುವ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)