ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ಖಂಡಿಸಿ ಮಹಿಳೆಯರ ಅಹೋರಾತ್ರಿ ಧರಣಿ

ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯುವರೆಗೂ ಹೋರಾಟ: ಕನೀಜ್ ಫಾತಿಮಾ ಎಚ್ಚರಿಕೆ
Last Updated 19 ಜನವರಿ 2020, 10:33 IST
ಅಕ್ಷರ ಗಾತ್ರ

ಕಲಬುರ್ಗಿ: ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ರಾಷ್ಟ್ರೀಯ ಜನಸಂಖ್ಯೆ ನೋಂದಣಿಯನ್ನು ವಿರೋಧಿಸಿ, ಶಾಸಕಿ ಕನೀಜ್‌ ಫಾತಿಮಾ ಅವರ ನೇತೃತ್ವದಲ್ಲಿ ನೂರಾರು ಮಹಿಳೆಯರು ನಗರದ ಜಗತ್‌ ವೃತ್ತದಲ್ಲಿ ಶನಿವಾರ ಅಹೋರಾತ್ರಿ ಧರಣಿ ನಡೆಸಿದರು.

‘ಕೇಂದ್ರ ಸರ್ಕಾರ ದೇಶವನ್ನು ಧರ್ಮದ ಆಧಾರದ ಮೇಲೆ ವಿಭಜನೆ ಮಾಡುತ್ತಿದೆ. ಆಡಳಿತದಲ್ಲಿನ ವೈಫಲ್ಯಗಳನ್ನು ಮುಚ್ಚಿಹಾಕಲು ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಮುಂತಾದ ತಲೆ– ಬುಡವಿಲ್ಲದ ಕಾಯ್ದೆಗಳನ್ನು ಜಾರಿ ಮಾಡುತ್ತಿದೆ. ಈ ಮೂಲಕ ಜನರ ಚಿತ್ತವನ್ನು ಬೇರೆಡೆ ಸೆಳೆಯುವ ಹುನ್ನಾರ ಖಂಡನೀಯ’ ಎಂದು ಕನೀಜ್‌ ಫಾತಿಮಾ ಕಿಡಿಕಾರಿದರು.

‘ನಾವು ಯಾವುದೇ ಸಂಘಟನೆಯಿಂದ ಧರಣಿ ಹಮ್ಮಿಕೊಂಡಿಲ್ಲ. ಎಲ್ಲ ಸಮುದಾಯಗಳ ಮಹಿಳೆಯರೇ ಸ್ವಯಂಪ್ರೇರಣೆಯಿಂದ ಸೇರಿಕೊಂಡು ಸತ್ಯಾಗ್ರಹ ಮಾಡುತ್ತಿದ್ದಾರೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯಲೇಬೇಕು.ಅಲ್ಲಿಯವರೆಗೂ ಹೋರಾಟ ನಿಲ್ಲುವುದಿಲ್ಲ’ ಎಂದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ನೂರಾರು ಮಹಿಳೆಯರು ಇನ್‌ಕ್ವಿಲಾಬ್‌ ಜಿಂದಾಬಾದ್, ಆವಾಜ್‌ ದೋ ಹಮ್‌ ಏಕ್‌ ಹೈ, ನಾರೇ ತಕ್‌ಬೀರ್‌, ಅಲ್ಲಾಹು ಅಕ್ಬರ್‌... ಮುಂತಾದ ಘೋಷಣೆಗಳನ್ನು ನಿರಂತರ ಮೊಳಗಿಸಿದರು.

ಕಾಂಗ್ರೆಸ್‌ ಮುಖಂಡ ಡಾ.ಶರಣಪ್ರಕಾಶ ಪಾಟೀಲ, ಹೋರಾಟಗಾರ ವಿಠಲ ದೊಡ್ಡಮನಿ, ಮಹಿಳಾ ಮುಖಂಡರಾದ ಲತಾ ರಾಠೋಡ, ಕೆ.ನೀಲಾ, ಚಂದ್ರಿಕಾ ಪರಮೇಶ್ವರ, ರಬಿಯಾ ಖಾನ್, ವಾಣಿಶ್ರೀ, ಸರೋಜಾ ಕುಮಾರ, ಪುತಲಿ ಬೇಗಂ, ಆಲಿಯಾ, ಜಾಮೀದಾ ಬೇಗಂ, ಯಾಸ್ಮಿನ್ ಬೇಗಂ, ಶಭಾನಾ ಬೇಗಂ, ನೂರ್‌ ಜಾನ್‌ ಬೇಗಂ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT