ಕಲಬುರ್ಗಿ: ‘ಆಳಂದ ಶಾಸಕರ ಮಗನ ಕುಮ್ಮಕ್ಕಿನಿಂದ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಡಿ.21 ರ ರಾತ್ರಿ ಕಡಗಂಚಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರ ಮನೆಗೆ ನುಗ್ಗಿ ಅವರ ಮೇಲೆ ವಿನಾಃ ಕಾರಣ ಹಲ್ಲೆ ನಡೆಸಿದ್ದಾರೆ’ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ ಆರೋಪಿಸಿದರು.
‘ಹಲ್ಲೆಗೊಳಗಾದ ಕರಿಬಸಪ್ಪ ನರೋಣಿ ಸೇರಿದಂತೆ ಇತರ ಕಾರ್ಯಕರ್ತರು ಕಡಗಂಚಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿವೈಎಸ್ಪಿ ಸೇರಿ ಇತರೆ ಪೊಲೀಸರನ್ನು ಅಮಾನತು ಮಾಡಬೇಕು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ
ಒತ್ತಾಯಿಸಿದರು.
‘ಆಳಂದಕ್ಕೆ ತೆರಳಿ ಕಾರ್ಯಕರ್ತರನ್ನು ಕರೆದುಕೊಂಡು ರಾತ್ರಿ ಡಿವೈಎಸ್ಪಿ ಕಚೇರಿ ಎದುರು ಧರಣಿ ನಡೆಸಲಾಯಿತು. ಒಂದೂವರೆ ಗಂಟೆ ಕಾದರೂ ಡಿವೈಎಸ್ಪಿ ಬರಲಿಲ್ಲ’ ಎಂದು ಅವರು ದೂರಿದರು.
‘ಈ ಸಂಬಂಧ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹಾಗೂ ಈಶಾನ್ಯ ವಲಯದ ಐಜಿಪಿ ಮನೀಶ್ ಕರ್ಬಿಕರ್ ಅವರಿಗೆ ದೂರು ನೀಡಲಾಗುವುದು. ಕಾರ್ಯಕರ್ತರೊಂದಿಗೆ ಡಿವೈಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು’ ಎಂದು ತಿಳಿಸಿದರು.
‘ಆಳಂದದಲ್ಲಿ ಶಾಸಕರು ಹಾಗೂ ಅವರ ಬೆಂಬಲಿಗರ ಗೂಂಡಾಗಿರಿ ಹೆಚ್ಚಾಗಿದೆ’ ಎಂದು ಆಪಾದಿಸಿದರು.
ಕೆಪಿಸಿಸಿ ಸದಸ್ಯ ಹನುಮಂತ ಭೂಸನೂರು, ಮುಖಂಡ ರಾಜಶೇಖರ ಯಕಂಚಿ ಇದ್ದರು.
‘ಅಕ್ರಮ ತಡೆದಿದ್ದಕ್ಕೆ ಆರೋಪ’
‘ಗ್ರಾಮ ಪಂಚಾಯಿತಿ ಚುನಾವಣೆಯ ನೀತಿ ಸಂಹಿತೆ ಉಲ್ಲಂಘಿಸಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಮನೆಯಲ್ಲಿ ರಾತ್ರಿ ಮಾಂಸದೂಟದ ವ್ಯವಸ್ಥೆ ಮಾಡಲಾಗಿದ್ದು, ನೂರಾರು ಜನರನ್ನು ಸೇರಿಸಿ ಹಣ ಹಂಚುವ ಯತ್ನ ನಡೆದಿದೆ ಎಂದು ಗ್ರಾಮದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗ ಪೊಲೀಸ್ ಅಧಿಕಾರಿಗಳು ಅಲ್ಲಿಗೆ ತೆರಳಿ ಜನರನ್ನು ಚದುರಿಸಿದ್ದಾರೆ. ಈ ಅಕ್ರಮ ಮರೆಮಾಚಲು ಬಿ.ಆರ್. ಪಾಟೀಲ ಅವರು ಇಂತಹ ಆರೋಪ ಮಾಡುತ್ತಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಹರ್ಷಾನಂದ ಗುತ್ತೇದಾರ ಪ್ರತ್ಯಾರೋಪ ಮಾಡಿದ್ದಾರೆ.
‘ಚುನಾವಣಾ ಅಕ್ರಮ ನಡೆಯಬಾರದು ಎಂಬ ಕಾರಣಕ್ಕೆ ರಾತ್ರಿ ತಿರುಗುವ ಎಲ್ಲರನ್ನೂ ಪೊಲೀಸರು ಚದುರಿಸಿದ್ದಾರೆ. ಮಹಿಳೆಯರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂಬುದು ಸುಳ್ಳು. ಮಾಜಿ ಶಾಸಕರು ದುರುದ್ದೇಶದ ಆರೋಪ ಮಾಡುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.