ಶುಕ್ರವಾರ, ಮೇ 20, 2022
25 °C

ಭಾವಚಿತ್ರ ತೆರವು ಪ್ರಕರಣ: ಪ್ರತಿಭಟನಾ ಮೆರವಣಿಗೆ 31ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ರಾಯಚೂರು ನ್ಯಾಯಾಲಯದ ಆವರಣದಲ್ಲಿ ಗಣರಾಜ್ಯೋತ್ಸವದ ದಿನದಂದು ಡಾ.ಬಿ.ಆರ್‌. ಅಂಬೇಡ್ಕರ್ ಅವರ ಭಾವಚಿತ್ರ ತೆರವುಗೊಳಿಸಿದ ಘಟನೆ ಖಂಡಿಸಿ ಇದೇ 31ರಂದು ದಲಿತ, ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದೆ’ ಎಂದು ಹಿರಿಯ ದಲಿತ ಮುಖಂಡ ವಿಠ್ಠಲ ದೊಡ್ಡಮನಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಕಾನೂನಿನ ಅನುಸಾರ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಅದೇ ದಿನ ಕಲಬುರಗಿಯ ಡಿಎಆರ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಗಣರಾಜ್ಯೋತ್ಸವದ ಧ್ವಜಾರೋಹಣದಲ್ಲಿಯೂ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇರಿಸಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಪ್ರಶ್ನಿಸಿದರೆ ಹಾರಿಕೆಯ ಉತ್ತರ ನೀಡಿದ್ದಾರೆ. ಕಲಬುರಗಿ ಜಿಲ್ಲಾಧಿಕಾರಿಯೂ ತಪ್ಪಿತಸ್ಥರಿದ್ದಾರೆ. ಹೀಗಾಗಿ, ಈ ಎರಡೂ ಘಟನೆಗಳು ಖಂಡನೀಯ’ ಎಂದರು.

‘ಅಂದು ಗಂಜ್‌ನ ನಗರೇಶ್ವರ ಶಾಲೆಯಿಂದ ಸರ್ದಾರ್‌ ವಲ್ಲಭಭಾಯಿ ಪಟೇಲ್ ವೃತ್ತದ ಮೂಲಕ ಮಿನಿ ವಿಧಾನಸೌಧಕ್ಕೆ ಮೆರವಣಿಗೆ ಮೂಲಕ ಬಂದು ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಲಿದ್ದೇವೆ’ ಎಂದು ಹೇಳಿದರು.

ದಲಿತ ಮುಖಂಡ ಡಾ.ಮಲ್ಲೇಶಿ ಸಜ್ಜನ ಮಾತನಾಡಿ, ‘ಪ್ರಕರಣದ ವಿವರಣೆ ಪಡೆಯಲು ಹೈಕೋರ್ಟ್‌ ನ್ಯಾಯಮೂರ್ತಿಯವರು ರಾಯಚೂರಿಗೆ ಭೇಟಿ ಕೊಟ್ಟಿದ್ದಾರೆ. ಎಲ್ಲವನ್ನು ಸಮಗ್ರವಾಗಿ ಪರಿಶೀಲಿಸಿ ವರದಿ ನೀಡಬೇಕು. ನ್ಯಾಯಾಧೀಶರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಲು ಅಡ್ವೊಕೇಟ್ ಜನರಲ್ ಅವರು ಅನುಮತಿ ನೀಡಬೇಕು’ ಎಂದರು.

ಮುಖಂಡರಾದ ಅರ್ಜುನ್ ಭದ್ರೆ, ಸುರೇಶ ಹಾದಿಮನಿ, ಪ್ರಕಾಶ ಮೂಲಭಾರತಿ, ಪರಮೇಶ್ವರ ಖಾನಾಪುರ, ಎ.ಬಿ. ಹೊಸಮನಿ, ಮರೆಪ್ಪ ಹಳ್ಳಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.