ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ| ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು

ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ವಿರೋಧಿ ಸಮಾವೇಶಕ್ಕೆ ಹರಿದು ಬಂದ ಜನಗಳು
Last Updated 22 ಜನವರಿ 2020, 11:18 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದ ಹೊರವಲಯದ ಹಾಗರಗಾ ಕ್ರಾಸ್‌ ಬಳಿಯ ರಿಂಗ್‌ ರಸ್ತೆಯಲ್ಲಿ ಅಕ್ಷರಶಃ ವಾಹನಗಳ ಬದಲು ಜನಸಾಗರ. ಸಿಎಎ, ಎನ್ಆರ್‌ಸಿ, ಎನ್‌ಪಿಆರ್‌ ವಿರೋಧಿಸಿ ದೇಶದಾದ್ಯಂತ ನಡೆಯುತ್ತಿರುವ ಭಾರಿ ಹೋರಾಟಗಳ ಹಿನ್ನೆಲೆಯಲ್ಲಿ ನಗರದಲ್ಲಿಯೂ ತಮ್ಮ ಪ್ರತಿರೋಧ ದಾಖಲಿಸಲು ಏಳು ಜಿಲ್ಲೆಗಳ ಲಕ್ಷಕ್ಕೂ ಅಧಿಕ ಜನರು ಸಾಗರೋಪಾದಿಯಲ್ಲಿ ಪೀರ್‌ ಬಂಗಾಲಿ ಮೈದಾನದತ್ತ ಮಂಗಳವಾರ ಹರಿದು ಬಂದರು.

ಪೀಪಲ್ಸ್‌ ಫೋರಂ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಲು ಪ್ರತಿಭಟನಾಕಾರರು ಯಾದಗಿರಿ, ಬೀದರ್‌ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕಾಲ್ನಡಿಗೆಯಲ್ಲಿಯೂ ಬಂದಿದ್ದರು.

ಮಧ್ಯಾಹ್ನ 3 ಗಂಟೆಯಾಗುತ್ತಿದ್ದಂತೆಯೇ ಜನಸಂದಣಿ ಹೆಚ್ಚಾಯಿತು. ಹೀಗಾಗಿ ಪೊಲೀಸರು ಖರ್ಗೆ ಪೆಟ್ರೋಲ್‌ ಪಂಪ್‌ನಿಂದ ಹುಮನಾಬಾದ್‌ ರಸ್ತೆಯತ್ತ ತೆರಳುವ ರಿಂಗ್‌ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ಬಂದ್‌ ಮಾಡಲಾಯಿತು. ಪೊಲೀಸರ ಜೊತೆಗೆ ಪೀಪಲ್ಸ್‌ ಫೋರಂನ ಸ್ವಯಂಸೇವಕರು ಸಂಚಾರ ನಿಯಂತ್ರಣದಲ್ಲಿ ತೊಡಗಿದರು. ಸಮಾವೇಶದಲ್ಲಿ ಭಾಗವಹಿಸಲು ಮಹಿಳೆಯರು ಬಂದಾಗ ಅವರನ್ನು ಸುತ್ತುವರೆದ ಯುವಕರ ಗುಂಪು ಕಾರ್ಯಕ್ರಮ ನಡೆಯಲಿರುವ ಪೀರ ಬಂಗಲಾ ಮೈದಾನದವರೆಗೂ ರಕ್ಷಣೆ ನೀಡಿತು.

ಸಂಜೆ 4ಕ್ಕೆ ಕಾರ್ಯಕ್ರಮ ಆರಂಭವಾಯಿತು. ರಾತ್ರಿ 11ರವರೆಗೂ ಲಕ್ಷಕ್ಕೂ ಅಧಿಕ ಜನರು ಮೈದಾನ ಬಿಟ್ಟು ಹೊರನಡೆಯಲಿಲ್ಲ.

ಅಫಜಲಪುರ ಶಾಸಕ ಎಂ.ವೈ.ಪಾಟೀಲ, ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್‌, ಭಾಲ್ಕಿ ಶಾಸಕ ಈಶ್ವರ ಖಂಡ್ರೆ, ಫೋರಂ ಮುಖಂಡರಾದ ನಾಸೀರ್ ಹುಸೇನ್ ಉಸ್ತಾದ್‌, ಮಹ್ಮದ ಅಸಗರ್ ಚುಲ್‍ಬುಲ್, ಇಲಿಯಸ್ ಬಾಗವಾನ್, ಬಾಬಾಖಾನ್, ಕೇದಾರಲಿಂಗಯ್ಯ ಹಿರೇಮಠ, ಪಶ್ಚಿಮ ಬಂಗಾಳದ ಸಚಿವ ಸಿದ್ದಿಕಿ ಉಲ್ಲಾ, ಫರಾಜುಲ್ ಇಸ್ಲಾಂ, ನೀಲಕಂಠ ಮೂಲಗೆ,ಲಂಡನ್ ಬಂತೇಜಿ, ಮಹೇಶ ರಾಠೋಡ, ನೀಲಾ ಕೆ, ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯ ಅಖಿಲ ಭಾರತ ಅಧ್ಯಕ್ಷ ವಿ.ಎನ್‌.ರಾಜಶೇಖರ, ಜಬ್ಬಾರ ಹುಸೇನ್, ಸಂಜಯ ಮಾಕಲ್, ಅಲಂಖಾನ್, ಮಜರ್ ಅಲಂಖಾನ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.

ಯಾರು ಏನೆಂದರು?

ಬಾಂಗ್ಲಾದೇಶಿಯರು ಎಂದುಕೊಂಡು ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ‌ಬಡವರು ವಾಸಿಸುವ ಗುಡಿಸಲುಗಳನ್ನು ಬಿಜೆಪಿ ಸರ್ಕಾರ‌ ಕೆಡವಿ ಅವರ ಹೊಟ್ಟೆಯ‌ ಮೇಲೆ ಬರೆ ಹಾಕಿದೆ. ಸ್ಥಳೀಯರು ಯಾರು, ಬಾಂಗ್ಲಾದೇಶಿಯರು ಯಾರು ಎಂಬುದರ ಪೂರ್ವಾಪರ ವಿಚಾರಿಸದೇ ಗುಡಿಸಲು ನೆಲಸಮಗೊಳಿಸುವ ಮನಸ್ಸಾದರೂ ಹೇಗೆ ಬಂತು?

ಮಂಗಳೂರಿನಲ್ಲಿ ಬಾಂಬ್‌ ದೊರೆತ ಪ್ರಕರಣಕ್ಕೆ ಸಂಬಂಧಿಸಿದ ನನ್ನ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಂದ ದೇಶಭಕ್ತಿಯ ಪಾಠ ಕಲಿಯಬೇಕಿಲ್ಲ. ನರೇಂದ್ರ ‌ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾವಿರಾರು ‌ ಅಲ್ಪಸಂಖ್ಯಾತರನ್ನು ಕೊಲೆ ಮಾಡಲಾಗಿದೆ. ಹೆಣ್ಣುಮಕ್ಕಳ ಹೊಟ್ಟೆ ‌ಸೀಳಿ ಭ್ರೂಣ ಹೊರತೆಗೆದು ಕೊಲ್ಲಲಾಯಿತು. ಇದನ್ನು ‌ಇಡೀ‌ ದೇಶ ಮರೆಯುವುದಿಲ್ಲ.

-ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ


ಈ ದೇಶಕ್ಕೆ ಆರ್‌ಎಸ್‍ಎಸ್ ಎಂಬುದು ರೋಗದಂತೆ ಅಂಟಿಕೊಂಡಿದೆ. ಅದನ್ನು ಸಂಪೂರ್ಣವಾಗಿ ತೊಡೆದು ಹಾಕಿ ನಿರ್ಮೂಲನೆ ಮಾಡಿ ಸುಭಿಕ್ಷ ಭಾರತವನ್ನು ನಿರ್ಮಿಸಬೇಕು. ಬಿಜೆಪಿ, ಆರ್‌ಎಸ್‍ಎಸ್, ವಿಎಚ್‍ಪಿಯವರು ನನ್ನ ಮೇಲೆ ಹಲವು ಸಲ ದಾಳಿ ನಡೆಸಿ ಕೊಲೆಗೆ ಯತ್ನಿಸಿದರೂ, ನಾನು ನಿಮ್ಮ ಮುಂದೆ ನಿಂತಿದ್ದೇನೆ. ನನ್ನ ಉಸಿರು ಇರುವರೆಗೂ ಆರ್‌ಎಸ್‍ಎಸ್ ನಿರ್ಮೂಲನೆ ಮಾಡಲು ಹೋರಾಟ ಮಾಡುತ್ತೇನೆ.
-ಸ್ವಾಮಿ ಅಗ್ನಿವೇಶ್‌, ಸಾಮಾಜಿಕ ಚಿಂತಕ

ಕೇಂದ್ರದ ಬಿಜೆಪಿ ಸರ್ಕಾರವು ನಾಗಪುರದ ಪರ್ಯಾಯ ಶಕ್ತಿಗಳ ಕೈಯಲ್ಲಿದೆ. ಪೌರತ್ವ (ತಿದ್ದುಪಡಿ) ಕಾಯ್ದೆಯಂತಹ ಕರಾಳ ಶಾಸನಗಳು ನಾಗಪುರದ ರಿಮೋಟ್‌ ಕಂಟ್ರೋಲ್‌ನಿಂದಲೇ ಜಾರಿಯಾಗುತ್ತವೆ. ಇದು ನಮ್ಮೆಲ್ಲರಿಗೂ ಮಾಡು ಇಲ್ಲವೇ ಮಡಿ ಹೋರಾಟವಾಗಿದ್ದು, ಈ ಕಾಯ್ದೆ ಹಿಮ್ಮೆಟ್ಟುವವರೆಗೂ ನಾವು ವಿರಮಿಸಬಾರದು.

-ಕನೀಜ್‌ ಫಾತಿಮಾ,ಶಾಸಕಿ

ದೇಶದ ಪ್ರಜಾಪ್ರಭುತ್ವವನ್ನೇ ಅಲುಗಾಡಿಸುವಂತ ಹುನ್ನಾರ ನಡೆದಿದೆ. ಹೀಗಾಗಿ ಈ ಸಮಾವೇಶದ ಮೂಲಕ ನಮ್ಮ ಕೂಗನ್ನು ದೆಹಲಿಗೆ ಮುಟ್ಟಿಸೋಣ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಬಿಸಿ ಮುಟ್ಟಿಸುವ ಮೂಲಕ ಶಾಸನ ಹಿಂದಕ್ಕೆ ಪಡೆಯುವಂತೆ ಮಾಡೋಣ.
-ಫಾದರ್ ಸ್ಟ್ಯಾನಿ ಲೋಬೊ


ಸಿಎಎ, ಎನ್‍ಆರ್‌ಸಿಯಿಂದ ದೇಶದ ಎಲ್ಲ ವರ್ಗದ ಜನರಿಗೂ ತೊಂದರೆಯಾಗಲಿದೆ. ಹಲವು ಸಮಸ್ಯೆಗಳು ಉಂಟಾಗಲಿವೆ. ಬಿಜೆಪಿಯವರೇ ಹೇಳುವಂತೆ ಈಗಿನದ್ದು ಬರಿ ಟ್ರೇಲರ್ ಮಾತ್ರ, ಪಿಕ್ಚರ್ ಬಾಕಿ ಇದೆ ಎನ್ನುತ್ತಿದ್ದಾರೆ. ಹೀಗಾಗಿ ಜನರ ಜಾಗೃತರಾಗಬೇಕು. ಇಲ್ಲದಿದ್ದರೆ ಅಪಾಯ ಎದುರಾಗಲಿದೆ. ದೇಶದ ಏಕತೆಯನ್ನು ಕಾಯ್ದುಕೊಳ್ಳೋಣ.

-ಡಾ.ಅಜಯಸಿಂಗ್, ಶಾಸಕ

ಸಿಎಎ ವಿರುದ್ಧ ಈಗ ಶುರುವಾಗಿರುವುದು ದೇಶದ ಎರಡನೇ ಸ್ವಾತಂತ್ರೃ ಸಂಗ್ರಾಮವಾಗಿದೆ. ಹೀಗಾಗಿ ಎಲ್ಲರೂ ಸೇರಿಕೊಂಡು ಸಂಘಟಿತ ಹೋರಾಟ ನಡೆಸುವ ಮೂಲಕ ಸಂವಿಧಾನ ವಿರೋಧಿ ಕಾಯ್ದೆಯನ್ನು ಹಿಂದಕ್ಕೆ ಪಡೆಯುವಂತೆ ಮಾಡೋಣ. ಈ ಸಂಗ್ರಾಮ ಮತ್ತು ಜನಾಂದೋಲನವನ್ನು ಜನರು ಒಗ್ಗಟ್ಟಿನಿಂದ ಮುಂದಕ್ಕೆ ಕೊಂಡೊಯ್ಯಬೇಕು.
-‌ಸಿ.ಎಂ.ಇಬ್ರಾಹಿಂ, ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT