ಬುಧವಾರ, ಅಕ್ಟೋಬರ್ 21, 2020
26 °C

ಕಲಬುರ್ಗಿ: ಎಸ್ಕಾಂಗಳ ಖಾಸಗೀಕರಣ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ರಾಜ್ಯದ ಎಲ್ಲ ವಿದ್ಯುತ್ ವಿತರಣಾ ಕಂಪನಿಗಳ (ಎಸ್ಕಾಂ) ಖಾಸಗೀಕರಣ ವಿರೋಧಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಮತ್ತು ಸಂಘ ಸಂಸ್ಥೆಗಳ ಒಕ್ಕೂಟ, ಫೆಡರೇಶನ್ ಆಫ್ ಕರ್ನಾಟಕ ಎಲೆಕ್ಟ್ರಿಸಿಟಿ ಬೋರ್ಡ್ ಯೂನಿಯನ್ ಸಂಘಟನೆಗಳ ಕಾರ್ಯಕರ್ತರು ಜೆಸ್ಕಾಂ ಪ್ರಧಾನ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಡೆಯು ರಾಜ್ಯದ ಜನರ ಹಿತಾಸಕ್ತಿಗೆ ವಿರುದ್ಧವಾಗಿದೆ. ಜುಲೈ 3ರಂದು ನಡೆದ ರಾಜ್ಯಗಳ ಇಂಧನ ಸಚಿವರ ಸಭೆಯಲ್ಲಿ ವಿದ್ಯುತ್ (ತಿದ್ದುಪಡಿ) ಕಾಯ್ದೆಯನ್ನು 11 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು ವಿರೋಧಿಸಿವೆ. ಅದಾಗಿಯೂ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಹೇರಿಕೆ ಮಾಡುತ್ತಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಟೀಕಿಸಿದರು.

ಸಂವಿಧಾನಾತ್ಮಕವಾಗಿ ವಿದ್ಯುತ್ ವಿಷಯವು ರಾಜ್ಯಗಳ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಆಡಳಿತ ಮತ್ತು ಕಾರ್ಯತಂತ್ರದಲ್ಲಿ ಆಗಬೇಕಾದ ಉದ್ದೇಶಿತ ಬದಲಾವಣೆಗಳ ಬಗ್ಗೆ ರಾಜ್ಯ ಮತ್ತು ಕೇಂದ್ರದ ಸಹಭಾಗಿತ್ವದೊಂದಿಗೆ ಸವಿಸ್ತಾರಬೇಕು ಚರ್ಚಿಸಿ ಒಮ್ಮತಕ್ಕೆ ಬರಬೇಕು ಎಂದು ಒತ್ತಾಯಿಸಿದರು.

ಇಂಧನ ಇಲಾಖೆ ನೌಕರರು ಮತ್ತು ವಿದ್ಯುತ್ ವಿತರಣಾ ಕಂಪನಿಗಳ ಮೌಲ್ಯಯುತ ಸಹಭಾಗಿಗಳಾಗಿದ್ದು, ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಕೋವಿಡ್ ಹಾವಳಿಯಿಂದ ತೀವ್ರ ಸಂಕಷ್ಟದಲ್ಲಿವೆ. ವಿತರಣಾ ಕಂಪನಿಗಳ ಉದ್ಯೋಗಿಗಳು ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ನಿರಂತರ ವಿದ್ಯುತ್ ಸರಬರಾಜು ಮಾಡುವ ಒತ್ತಡದಲ್ಲಿ ಶ್ರಮಿಸುತ್ತಿರುವಾಗ ರಾಜ್ಯಗಳ ಸಲಹೆಗಳನ್ನು ಹಂಚಿಕೊಳ್ಳಲು ಅವಕಾಶ ನೀಡದೇ ಕೇಂದ್ರ ಸರ್ಕಾರ ತರಾತುರಿಯಲ್ಲಿ ಇಂತಹ ನಿರ್ಣಾಯಕ ತೀರ್ಮಾನವನ್ನು ತೆಗೆದುಕೊಳ್ಳುತ್ತಿರುವುದು ಖಂಡನೀಯ. ವಿದ್ಯುತ್ ಕ್ಷೇತ್ರವು ಖಾಸಗೀರಣದಿಂದ ಸರ್ಕಾರದೊಂದಿಗೆ ರಾಜ್ಯದ ಜನತೆಯ ನೇರ ಸಂಪರ್ಕವನ್ನು ಕಸಿದುಕೊಳ್ಳುತ್ತದೆ. ರೈತರು, ಬಡ ಕುಟುಂಬಗಳು ಸೇರಿದಂತೆ ಎಲ್ಲ ವರ್ಗದ ಜನರಿಗೆ ಹೊರೆಯಾಗುತ್ತದೆ ಎಂದು ಟೀಕಿಸಿದರು.

ಸಂಘದ ಅಧ್ಯಕ್ಷ ನೀಲಪ್ಪ ಧೋತ್ರೆ, ಮುಖಂಡರಾದ ರಾಜೇಶ ಹಿಪ್ಪರಗಿ, ಮನೋಹರ ವಾಗ್ಮೋರೆ, ಆರ್‌.ಡಿ.ಚಂದ್ರಶೇಖರ, ಶಾಮರಾವ ಇಟಗಿ, ಮೀರಾ ಪಟೇಲ್, ವಿಶ್ವನಾಥ ರೆಡ್ಡಿ, ಮೊಹಮ್ಮದ್ ಮಾಜಿದ್, ಲಕ್ಷ್ಮಣ ಚವ್ಹಾಣ, ಬಾಬು ಕೋರೆ, ಸಿದ್ರಾಮ ಪಾಟೀಲ, ಸಂತೋಷ ವಡ್ಡರ, ಮುರುಗೇಶ ಮಠಪತಿ, ಅನೀಲ ಇದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು