ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧಿಗಳ ಕ್ಷಮಾದಾನ ರದ್ದತಿಗೆ ಒತ್ತಾಯ

ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತೆಯರಿಂದ ಪ್ರತಿಭಟನೆ
Last Updated 18 ಆಗಸ್ಟ್ 2022, 15:33 IST
ಅಕ್ಷರ ಗಾತ್ರ

ಕಲಬುರಗಿ: ಅತ್ಯಾಚಾರ ಮತ್ತು ಕೊಲೆ ಮಾಡಿದ ಅಪರಾಧಿಗಳಿಗೆ ಸರ್ಕಾರ ಮಾಡಿದ ಕ್ಷಮಾದಾನವನ್ನು ಕೂಡಲೇ ರದ್ದುಗೊಳಿಸಬೇಕು. ಬಿಡುಗಡೆಗೊಂಡವರಿಗೆ ಸಿಹಿ ಹಂಚಿ ಸನ್ಮಾನಿಸಿ ಸ್ವಾಗತಿಸಿದವರಿಗೆ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತೆಯರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

‘ಗುಜರಾತ್‌ನ ಬಿಲ್ಕಿಸ್ ಬಾನು ಪ್ರಕರಣದಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯ ಆರೋಪದಡಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಗುಜರಾತಿನ ಜೈಲಿನಲ್ಲಿರುವ 11 ಕೈದಿಗಳಿಗೆ ಕ್ಷಮಾದಾನ ನೀಡಿರುವ ಸಂಗತಿ ನಿಜಕ್ಕೂ ಆಘಾತಕಾರಿಯಾದುದು. ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಬದುಕಿ ಉಳಿದಿರುವ ಬಿಲ್ಕಿಸ್ ಬಾನು ಅವರ ದೂರಿನನ್ವಯ ವಿಚಾರಣೆ ನಡೆಸಿದ ಸಿಬಿಐ ಮುಂಬೈನ ವಿಶೇಷ ನ್ಯಾಯಾಲಯವು 2008ರಲ್ಲಿ ಅಪರಾಧ ಸಾಬೀತಾಗಿದ್ದರಿಂದ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ, ಗುಜರಾತ್ ಸರ್ಕಾರ ಈ ಅಪರಾಧಿಗಳನ್ನು ಸ್ವಾತಂತ್ರ್ಯ ದಿನದಂದು ಕ್ಷಮಾದಾನ ಮಾಡಿ ಬಿಡುಗಡೆ ಮಾಡಿದೆ. ಇದು ಕೇಂದ್ರ ಸರ್ಕಾರವು 2018ರಲ್ಲಿ ಹೊರಡಿಸಿದ್ದ ಆದೇಶಕ್ಕೆ ವಿರುದ್ಧವಾಗಿದೆ’ ಎಂದು ಪ್ರತಿಭಟನಾಕಾರರು ಟೀಕಿಸಿದರು.

‘ಅತ್ಯಾಚಾರ, ಕೊಲೆ ಮತ್ತು ಭ್ರಷ್ಟಾಚಾರ ಮಾಡಿದ ಅಪರಾಧಿಗಳಿಗೆ ಕ್ಷಮಾದಾನ ನೀಡಬಾರದು ಎಂಬ ಆದೇಶವಿದೆ. ಆದರೂ ಗುಜರಾತಿನ ಬಿಜೆಪಿ ಸರ್ಕಾರವು ಕೇಂದ್ರ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದೆ. ಪ್ರಧಾನಮಂತ್ರಿಗಳು ಕೆಂಪುಕೋಟೆಯಿಂದ ಮಹಿಳೆಯರನ್ನು ಗೌರವಿಸಬೇಕೆಂದು ಭಾಷಣ ಮಾಡುತ್ತಾರೆ. ಅದೇ ಹೊತ್ತಿನಲ್ಲಿ ಅವರದೇ ಬಿಜೆಪಿ ಸರ್ಕಾರವು ಅತ್ಯಾಚಾರ, ಕೊಲೆ ಮಾಡಿದವರಿಗೆ ಕ್ಷಮಾದಾನ ಮಾಡುತ್ತದೆ. ಇದೊಂದು ಕ್ರೂರ ನಡೆಯಾಗಿದೆ. ಮೂರುವರೆ ವರ್ಷದ ಎಳೆ ಮಗುವನ್ನು ಬಂಡೆಗೆ ಬಡಿದು ಸಾಯಿಸಿ ಅವಳ ಕುಟುಂಬದ ಏಳು ಜನರನ್ನೂ ಬರ್ಬರವಾಗಿ ಕೊಂದ 11 ಅಪರಾಧಿಗಳನ್ನು ಬಿಡುಗಡೆ ಮಾಡುವ ಮೂಲಕ ಗುಜರಾತಿನ ಬಿಜೆಪಿ ಸರ್ಕಾರ ತಾನೊಂದು ಕೊಲೆಗಡುಕ ಮತ್ತು ಫ್ಯಾಸಿಸ್ಟ್ ಸರ್ವಾಧಿಕಾರಿ ಸರ್ಕಾರವೆಂಬುದನ್ನು ಸಾಬೀತುಗೊಳಿಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜಸ್ಥಾನದ ಜಾಲೋರ್ ಜಿಲ್ಲೆಯ ಸುರಾನಾದ ಎಳೆ ಮಗು, ದಲಿತ ಸಮುದಾಯದ ಇಂದ್ರಕುಮಾರ್ ಮೇಘ್ವಾಲ್ ಓದುತ್ತಿದ್ದ ಶಾಲೆಯ ಮುಖ್ಯಸ್ಥ ಹಾಗೂ ಶಿಕ್ಷಕ ಚೈಲ್‌ ಸಿಂಗ್ ಮಡಿಕೆಯಲ್ಲಿಟ್ಟಿದ್ದ ನೀರನ್ನು ಕುಡಿದಿದ್ದಕ್ಕಾಗಿ ಹಲ್ಲೆ ಮಾಡಿ ಸಾಯಿಸಿದ ಕೃತ್ಯ ಮನುಕುಲ ಖಂಡಿಸುವಂತಹ ಘಟನೆ. ಇದು ಅಸ್ಪೃಶ್ಯತೆ ಆಚರಣೆಯ ಕ್ರೌರ್ಯಕ್ಕೆ ಹಿಡಿದ ಕನ್ನಡಿಯಾಗಿದೆ’ ಎಂದು ಟೀಕಿಸಿದರು.

ಬಿಲ್ಕಿಸ್ ಬಾನು ಮತ್ತು ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು. ಕೇಂದ್ರದ ಆದೇಶ ಉಲ್ಲಂಘಿಸಿದ ಗುಜರಾತ್ ಸರ್ಕಾರದ ಮೇಲೆ ಕ್ರಮ ಕೈಗೊಳ್ಳಬೇಕು. ಮಡಿಕೆ ಮುಟ್ಟಿ ನೀರು ಕುಡಿದಿದ್ದಕ್ಕಾಗಿ ಕೊಂದು ಹಾಕಿದ ಸರಸ್ವತಿ ವಿದ್ಯಾಮಂದಿರದ ಮುಖ್ಯಸ್ಥನಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಸರ್ಕಾರವೇ ಶಿಕ್ಷಣ ಕೇಂದ್ರಗಳನ್ನು ನಡೆಸಬೇಕು. ಎಲ್ಲ ಖಾಸಗಿ ಶಿಕ್ಷಣ ಕೇಂದ್ರಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಡಾ. ಮೀನಾಕ್ಷಿ ಬಾಳಿ, ಉಪಾಧ್ಯಕ್ಷೆ ಕೆ. ನೀಲಾ, ದಲಿತ ಹಕ್ಕುಗಳ ಸಮಿತಿ ಸಂಚಾಲಕ ಸುಧಾಮ ಧನ್ನಿ, ಸಹ ಸಂಚಾಲಕ ಪಾಂಡುರಂಗ ಮಾವಿನಕರ, ಸಮುದಾಯ ಜಿಲ್ಲಾ ಘಟಕದ ಸಂಚಾಲಕ ಪ್ರಭು ಖಾನಾಪೂರೆ, ಲವಿತ್ರ ವಸ್ತ್ರದ, ಪೀರಪ್ಪ ಬಿ. ಯಾತನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT