ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ| ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು: ಆರೋಪ

Last Updated 29 ಮಾರ್ಚ್ 2023, 6:14 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಜಿಮ್ಸ್‌ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಆಕೆಯ ಪತಿ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ನೀಡಿದ್ದಾರೆ.

ಮೂವರು ಶುಶ್ರೂಷಕಿಯರು, ಜಿಲ್ಲಾ ಶಸ್ತ್ರಚಿಕಿತ್ಸಕ ಅಧಿಕಾರಿ, ವೈದ್ಯಕೀಯ ಅಧೀಕ್ಷಕ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿ ವಿರುದ್ಧ ಪ್ರಕರಣ ದಾಖಲಾಗಿದೆ.

‘ಚಂದಾ ನಗರದ ನಿವಾಸಿ ಅನಿತಾ ಲಕ್ಷ್ಮಣ ಲಸ್ಕರ (22) ಮೃತರು. ಹೆರಿಗೆ ನೋವಿನ ಕಾರಣ ಮಾರ್ಚ್ 18ರಂದು ಆಸ್ಪತ್ರೆಗೆ ದಾಖಲಿಸಲಾಯಿತು. ತಪಾಸಣೆ ಬಳಿಕ ಸಾಮಾನ್ಯ ಹೆರಿಗೆ ಮಾಡುವುದಾಗಿ ಆಸ್ಪತ್ರೆ ಶುಶ್ರೂಷಕಿ ಹೇಳಿದರು. ಸಿಸೇರಿಯನ್‌ ಹೆರಿಗೆ ಮಾಡಲು ಕೋರಿದರೂ ಸಾಮಾನ್ಯ ಹೆರಿಗೆ ಮಾಡುವುದಾಗಿ ಹೇಳಿ, ಗುಪ್ತಾಂಗದಲ್ಲಿ 20 ಹೊಲಿಗೆ ಹಾಕಿದ್ದಾರೆ. ಹಿರಿಯ ವೈದ್ಯರಿಲ್ಲದೆ ಮೂವರು ಶುಶ್ರೂಷಕಿಯರು ಹೆರಿಗೆ ಮಾಡಿದರು’ ಎಂದು ಅನಿತಾ ಪತಿ ಲಕ್ಷ್ಮಣ ಆರೋಪಿಸಿದರು.

‘ಹೊಲಿಗೆ ಹಾಕಿದ್ದ ಅಂಗದಲ್ಲಿ ನೋವಿದ್ದು, ಜ್ವರ ಬರುತ್ತಿದೆ. ಮನೆ ಹೋಗುವುದಿಲ್ಲ ಎಂದು ಅನಿತಾ ಹೇಳಿದರೂ ಶುಶ್ರೂಷಕಿಯರು ಮಾತ್ರೆಗಳನ್ನು ನೀಡಿ ಮನೆಗೆ ಕಳುಹಿಸಿದರು. ಮೂರು ದಿನಗಳಾದರೂ ನೋವು ಕಡಿಮೆ ಆಗಲಿಲ್ಲ. ಜ್ವರ, ನೋವಿನ ಕಾರಣಕ್ಕೆ ಮಾರ್ಚ್ 26ರಂದು ಆಸ್ಪತ್ರೆಗೆ ದಾಖಲಿಸಿದೆವು. ಬೇಗ ಗುಣಮುಖರಾಗುತ್ತಾರೆ ಎಂಬ ಭರವಸೆ ಸಿಕ್ಕಿತು. ಆದರೆ, ಆಕೆ ಮಾರ್ಚ್ 28ರಂದು ಮಧ್ಯಾಹ್ನ ಮೃತಪಟ್ಟರೆಂದು ಘೋಷಿಸಲಾಯಿತು’ ಎಂದು ಅವರು ತಿಳಿಸಿದರು.

‘ಸಾಮಾನ್ಯ ಹೆರಿಗೆಯಾಗಿದ್ದು, ತಾಯಿ ಮತ್ತು ಮಗುವಿಗೆ ತೊಂದರೆ ಆಗದಿರಲಿ ಎಂದು ಹೊಲಿಗೆ ಹಾಕಿದ್ದೇವೆ. ಪರಿಣಿತ ವೈದ್ಯರು ಹೆರಿಗೆ ಮಾಡಿದ್ದು, ಮನೆಗೆ ಮರಳುವಾಗ ವೇಳೆ ಆರೋಗ್ಯವಾಗಿ ದ್ದರು. ಮನೆಗೆ ಹೋದ ಮೇಲೆ ಜ್ವರ ಬಂದಿದೆ. ಆದರೆ, ಮೂರು ದಿನಗಳ ಬಳಿಕ ಅವರನ್ನು ಆಸ್ಪತ್ರೆಗೆ ಕರೆತಂದರು. ವಿಪರೀತ ಜ್ವರದ ಜೊತೆಗೆ ಹೊಲಿಗೆಯಿಂದ ದೇಹದಲ್ಲಿ ನಂಜು ಹರಡಿದೆ. ಶುಚಿತ್ವ ಕಾಪಾಡಿಕೊಳ್ಳದೇ ಇರುವುದು ಕೂಡ ಇದಕ್ಕೆ ಕಾರಣ’ ಎಂದು ಜಿಮ್ಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಡಾ. ಉಷಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಾಣಂತಿಗೆ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ನೀಡಲಾಗಿದ್ದು, ವೈದ್ಯಕೀಯ ನಿರ್ಲಕ್ಷ್ಯದಿಂದ ಮೃತಪಟ್ಟಿರುವ ಸಾಧ್ಯತೆ ಇಲ್ಲ. ಮರಣೋತ್ತರ ಪರೀಕ್ಷೆ ಬಳಿಕ ನಿಖರ ಕಾರಣ ತಿಳಿದು ಬರಲಿದೆ’ ಎಂದು ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT