ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ‘ಆಶಾ’ ಪ್ರತಿಭಟನೆ ಆರಂಭ

ಕೆಲಸ ಸ್ಥಗಿತಗೊಳಿಸಿದ ಕಾರ್ಯಕರ್ತೆಯರು; ಸೋಂಕಿತರ ಪತ್ತೆಗೆ ಹಿನ್ನಡೆ ಸಾಧ್ಯತೆ
Last Updated 10 ಜುಲೈ 2020, 16:22 IST
ಅಕ್ಷರ ಗಾತ್ರ

ಕಲಬುರ್ಗಿ: ₹ 12 ಸಾವಿರ ತಿಂಗಳ ಗೌರವಧನ ಖಾತ್ರಿ ಪಡಿಸಬೇಕು ಮತ್ತು ಅಗತ್ಯವಿರುವಷ್ಟು ಆರೋಗ್ಯ ರಕ್ಷಣಾ ಸಾಮಗ್ರಿ ನೀಡಬೇಕೆಂದು ಒತ್ತಾಯಿಸಿ ಜಿಲ್ಲೆಯಾದ್ಯಂತ ಸಹಸ್ರಾರು ಆಶಾ ಕಾರ್ಯಕರ್ತೆಯರು ಕೆಲಸ ಸ್ಥಗಿತಗೊಳಿಸಿ ಶುಕ್ರವಾರದಿಂದ ಅನಿರ್ದಿಷ್ಟ ಅವಧಿಯ ಪ್ರತಿಭಟನೆ ಆರಂಭಿಸಿದರು.

ಎಐಯುಟಿಯುಸಿ ಕಾರ್ಮಿಕ ಸಂಘಟನೆಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಬೆಳಿಗ್ಗೆಯೇ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸಮಾವೇಶಗೊಂಡ ಕಾರ್ಯಕರ್ತೆಯರು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಕಲಬುರ್ಗಿ ನಗರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ವಿ.ಜಿ. ದೇಸಾಯಿ, ‘ಆಶಾಗಳ ಬೇಡಿಕೆಗಳನ್ನು ಪರಿಹರಿಸುವಂತೆ ಕೋರಿ ಕಳೆದ ಜನವರಿ ತಿಂಗಳಿನಿಂದ ಈ ಅವಧಿಯಲ್ಲಿ 10 ಮನವಿ ಪತ್ರಗಳನ್ನು ಸರ್ಕಾರ ಮತ್ತು ಇಲಾಖೆಗೆ ಸಲ್ಲಿಸಲಾಗಿದೆ. ಆಶಾ ಕಾರ್ಯಕರ್ತೆಯರ ಸಂಘದಿಂದ ಸಲ್ಲಿಸಲಾದ ಈ ಮನವಿಪತ್ರಗಳಲ್ಲಿನ ವಿಷಯಗಳ ಕುರಿತು ಸ್ಪಂದಿಸಿ, ಚರ್ಚಿಸಲು ಈವರೆಗೂ ಸಂಘದ ಪದಾಧಿಕಾರಿಗಳ ಜೊತೆಯಲ್ಲಿ ಸಭೆಯನ್ನು ನಡೆಸಿಲ್ಲ’ ಎಂದು ಟೀಕಿಸಿದರು.

‘ಈಗ ಇರುವ ಪ್ರೋತ್ಸಾಹ ಧನ ಮತ್ತು ಗೌರವಧನ ಎರಡನ್ನೂ ಒಟ್ಟಿಗೆ ಸೇರಿಸಿ ಮಾಸಿಕ ₹ 12 ಸಾವಿರ ಗೌರವ ಧನ ನಿಗದಿಪಡಿಸಿ, ಪದೇ ಪದೇ ಎಲ್ಲಾ ಕಾರ್ಯಕರ್ತೆಯರ ಆರೋಗ್ಯ ತಪಾಸಣೆ ಮಾಡಬೇಕು. ಪಾಸಿಟಿವ್ ಬಂದಿರುವ ಆಶಾ ಕಾರ್ಯಕರ್ತೆಯರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕು ಮತ್ತು ಚಿಕಿತ್ಸೆಯ ಅವದಿಯಲ್ಲಿ ಸಂಪೂರ್ಣ ಗೌರವ ಧನ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿಯೂ ಪ್ರತಿಭಟನಾಕಾರರು ಕೆಲಸ ಸ್ಥಗಿತಗೊಳಿಸಿ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾಕಾರರಾದ ಎಸ್‌.ಎಂ.ಶರ್ಮಾ, ಶಿವಲಿಂಗಮ್ಮ ನಂದೂರ, ಜಯಶ್ರೀ, ಶ್ರೀದೇವಿ, ಮಹಾದೇವಿ, ವಿಜ್ಜುಬಾಯಿ, ಶಾಂತಾ ಹರಸೂರ, ಶಾಂತಾ, ವೈಶಾಲಿ, ಭಾಗ್ಯಶ್ರೀ, ಶೋಭಾ, ದಾನಮ್ಮ, ಸುಲೋಚನಾ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT