ಕಲಬುರಗಿ: ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ ₹15,000 ವೇತನ, ಸಹಾಯಕಿಯರಿಗೆ ₹10,000, ಆಶಾ ಕಾರ್ಯಕರ್ತೆಯರಿಗೆ ₹8,000, ಬಿಸಿಯೂಟ ಕಾರ್ಯಕರ್ತೆಯರಿಗೆ ₹6,000 ಗೌರವಧನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಐ ಜಿಲ್ಲಾ ಮಂಡಳ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಈಗಿನ ಕಾಂಗ್ರೆಸ್ ಸರ್ಕಾರವು ವಿಧಾನಸಭೆ ಚುನಾವಣೆ ವೇಳೆಯಲ್ಲಿ ನೀಡಿದ್ದ ಐದು ಗ್ಯಾರಂಟಿಗಳ ಜತೆಗೆ ಆರನೇ ಭರವಸೆಗಳನ್ನು ಜಾರಿಗೆ ತರಲು ಮುಂದಾಗಬೇಕು. ಬಿಜೆಪಿ ಸರ್ಕಾರದ ಅವಧಿಯಲ್ಲಿನ ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ರದ್ದುಪಡಿಸಬೇಕು. ರೈತರ ಮೇಲೆ ದಾಖಲಾಗಿರುವ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಕಾರ್ಖಾನೆ ಕಾಯ್ದೆಗೆ ತಿದ್ದುಪಡಿ ತಂದು, ಕೆಲಸದ ಅವಧಿಯನ್ನು 8ರಿಂದ 12 ಗಂಟೆಗಳಿಗೆ ಹೆಚ್ಚಿಸಿದ್ದು ಹಾಗೂ ರಾತ್ರಿ ಪಾಳಿಯಲ್ಲಿ ಮಹಿಳೆಯರು ದುಡಿಯುವುದನ್ನು ಪ್ರಸ್ತಾಪಿಸಲಾಗಿದೆ. ಕೂಡಲೇ ಅದನ್ನು ರದ್ದು ಮಾಡಬೇಕು. ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಬೇಕು. ವರ್ಷಕ್ಕೆ 2,500 ಶಾಲೆಗಳನ್ನು ಸ್ಮಾರ್ಟ್ ಶಾಲೆಗಳಾಗಿ ಉನ್ನತೀಕರಿಸಿ, ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ಕಾಯಂ ಮಾಡಿಕೊಳ್ಳಬೇಕು. ಶಾಲಾ–ಕಾಲೇಜುಗಳು, ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಬೇಕು. ತಾಲ್ಲೂಕು ಮಟ್ಟದ ಆಸ್ಪತ್ರೆಗಳ ಹಾಸಿಗೆ ಸಂಖ್ಯೆ ಹೆಚ್ಚಳ ಮಾಡಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಕಠಿಣ ಕಾನೂನು ಜಾರಿಗೆ ತರಬೇಕು. ಪೊಲೀಸ್ ಇಲಾಖೆಯಲ್ಲಿ ಶೇ 33ರಷ್ಟು ಮಹಿಳಾ ಸಿಬ್ಬಂದಿ, ಅಧಿಕಾರಿಗಳು ಇರಬೇಕು. ಲಿಂಗತ್ವ ಅಲ್ಪಸಂಖ್ಯಾತರ ಕಲ್ಯಾಣ ಮಂಡಳಿ ಸ್ಥಾಪಿಸಿ, ಅಗತ್ಯವಾದ ಯೋಜನೆಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
ನಿವೇಶನ ರಹಿತರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು. ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ವಾಸಯೋಗ್ಯವಾದ ಮನೆಗಳನ್ನು ನಿರ್ಮಿಸಿಕೊಡಬೇಕು. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಪ್ರತ್ಯೇಕವಾದ ಆಯುಕ್ತಾಲಯ ಸ್ಥಾಪಿಸಬೇಕು. ಜಿಲ್ಲೆಯ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಮಂಡಳಿ ಸದಸ್ಯ ಮೌಲಾ ಮುಲ್ಲಾ, ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ ರಾಠೋಡ, ಸಹ ಕಾರ್ಯದರ್ಶಿಗಳಾದ ಪ್ರಭುದೇವ ಯಳಸಂಗಿ, ಪದ್ಮಾವತಿ ಮಾಲಿ ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.