ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24ರಂದು ಉಸ್ತುವಾರಿ ಸಚಿವರ ಕಚೇರಿ ಎದುರು ಧರಣಿ

Last Updated 19 ಡಿಸೆಂಬರ್ 2018, 12:02 IST
ಅಕ್ಷರ ಗಾತ್ರ

ಕಲಬುರ್ಗಿ: ‘ಬರಗಾಲಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದ ನಿರ್ಲಕ್ಷ್ಯ ಖಂಡಿಸಿ ಡಿ. 24ರಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕಚೇರಿ ಎದುರು ಒಂದು ದಿನ ಸಾಂಕೇತಿಕ ಧರಣಿ ನಡೆಸಲಾಗುವುದು’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ರಾಜ್ಯ ಸಮಿತಿ ಸಂಚಾಲಕ ಡಾ. ಮಲ್ಲೇಶಿ ಸಜ್ಜನ, ಸಂಘಟನಾ ಸಂಚಾಲಕ ಅರ್ಜುನ ಭದ್ರೆ ಹೇಳಿದರು.

ಬುಧವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಳಂದ ಹೊರತುಪಡಿಸಿ ಜಿಲ್ಲೆಯ 6 ತಾಲ್ಲೂಕುಗಳನ್ನು ಬರಗಾಲ ಪೀಡಿತ ತಾಲ್ಲೂಕು ಎಂದು ಘೋಷಿಸಲಾಗಿದೆ. ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸ್ಥಿತಿ ಗಂಭೀರವಾಗಿದೆ. ರೈತರು ಬೆಳೆ ಬೆಳೆಯಲು ಆಗುತ್ತಿಲ್ಲ. ಜನಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಇದರಿಂದಾಗಿ ದಲಿತರು, ಬಡವರು ಕುಟುಂಬ ನಿರ್ವಹಣೆಗಾಗಿ ಗುಳೆ ಹೋಗುವಂತಾಗಿದೆ’ ಎಂದು ಆರೋಪಿಸಿದರು.

‘ಬರ ನಿರ್ವಹಣೆಗೆ ಶಾಸಕರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದೆ. ಆದರೆ ಬಹುತೇಕ ಕಡೆ ಸಭೆಗಳು ನಡೆದಿಲ್ಲ. ಬರದಿಂದ ತತ್ತರಿಸಿರುವ ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸಿಲ್ಲ. ಅಧಿವೇಶನದಲ್ಲೂ ಈ ಬಗ್ಗೆ ಗಂಭೀರ ಚರ್ಚೆ ನಡೆದಿಲ್ಲ’ ಎಂದು ದೂರಿದರು.
‘ತಾಲ್ಲೂಕಿನ ಹಾರುತಿಹಡಗಿಲದಲ್ಲಿ ದಲಿತರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರೂ ದೌರ್ಜನ್ಯಕ್ಕೆ ಒಳಗಾದ ದಲಿತರಿಗೆ ಇಲ್ಲಿಯವರೆಗೂ ಪರಿಹಾರಧನ ಮಂಜೂರು ಮಾಡಿಲ್ಲ’ ಎಂದು ಆರೋಪಿಸಿದರು.

ದಲಿತರ ಸ್ಮಶಾನ ಭೂಮಿ, ದಲಿತರ ಓಣಿಗೆ ಮಂಜೂರಾದ ಕಾಮಗಾರಿಗಳನ್ನು ಕೈಗೊಳ್ಳದೇ ಇರುವುದು, ಜೇವರ್ಗಿ ತಾಲ್ಲೂಕು ನರಿಬೋಳ ಬಿಸಿಎಂ ವಸತಿ ನಿಲಯದ ಸಾಮಗ್ರಿಗಳನ್ನು ರಾಜಕೀಯ ಪಕ್ಷದ ಕಾರ್ಯಕ್ರಮಕ್ಕೆ ಕೊಟ್ಟಿರುವುದನ್ನು ಖಂಡಿಸಿ ಪ್ರತಿಭಟನೆ ಮಾಡಲಾಗಿದೆ. ಆದರೆ, ತಪ್ಪಿತಸ್ಥರ ವಿರುದ್ಧ ಇದುವರೆಗೂ ಕ್ರಮಕೈಗೊಂಡಿಲ್ಲ. ಆಳಂದ ತಾಲ್ಲೂಕು ಗೋಳಾ (ಬಿ)ಯಲ್ಲಿ ದಲಿತರು ಆರು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಅದಕ್ಕೂ ಅಧಿಕಾರಿಗಳು ಸ್ಪಂದಿಸಿಲ್ಲ’ ಎಂದು ದೂರಿದರು.

ಜಿಲ್ಲಾ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಖನ್ನಾ, ಖಜಾಂಚಿ ಸೂರ್ಯಕಾಂತ ಅಜಾದಪುರ, ನಗರ ಘಟಕದ ಸಂಚಾಲಕ ಶಿವುಕುಮಾರ ಕೋರಳ್ಳಿ, ತಾಲ್ಲೂಕು ಘಟಕದ ಸಂಚಾಲಕ ಸಂತೋಷ ಗದ್ದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT