ಮಂಗಳವಾರ, ಜೂನ್ 28, 2022
28 °C

ಕಲಬುರ್ಗಿ: ಉಚಿತ ಬೀಜ, ಗೊಬ್ಬರ ವಿತರಣೆಗೆ ಜೆಡಿಎಸ್‌ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜಿಲ್ಲೆಯಲ್ಲಿ ಮಳೆ ಆಗುತ್ತಿರುವುದರಿಂದ ಬಿತ್ತನೆ ಕಾರ್ಯ ಆರಂಭವಾಗಿದ್ದು, ಸರ್ಕಾರ ಎಲ್ಲ ರೈತರಿಗೆ ಉಚಿತ ಬಿತ್ತನೆ ಬೀಜ ಹಾಗೂ ಗೊಬ್ಬರಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ ಜಾತ್ಯತೀತ ಜನತಾದಳದ ಕಾರ್ಯಕರ್ತರು ನಗರದ ಟೌನ್‌ಹಾಲ್ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು.

ಲಾಕ್‌ಡೌನ್‌ನಿಂದಾಗಿ ವಾಹನಗಳ ಬಳಕೆಗೆ ನಿರ್ಬಂಧ ವಿಧಿಸಲಾಗಿದ್ದು, ರೈತರು ರೈತ ಸಂಪರ್ಕ ಕೇಂದ್ರಕ್ಕೆ ಹೋಗಲು ಆಗುತ್ತಿಲ್ಲ. ಹೀಗಾಗಿ, ಗ್ರಾಮ ಪಂಚಾಯಿತಿಗಳ ಮುಖಾಂತರ ಬೀಜ, ಗೊಬ್ಬರಗಳನ್ನು ವಿತರಿಸಬೇಕು. ರೈತರ ವಿಚಾರದಲ್ಲಿ ಸರ್ಕಾರ ಮೀನ ಮೇಷ ಎಣಿಸಬಾರದು ಎಂದರು.

ರಾಜ್ಯದಲ್ಲಿ ಕೊರೊನಾ ಮಹಾಮಾರಿಯಿಂದಾಗಿ ಜನರ ಜೀವನ ಅಸ್ತವ್ಯಸ್ತಗೊಂಡಿದ್ದು, ಇಂತಹ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ತರಕಾರಿ, ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದು ಗಾಯದ ಮೇರೆ ಬರೆ ಎಳೆದಂತಾಗಿದೆ. ಬೆಲೆಗಳನ್ನು ನಿಯಂತ್ರಿಸುವಲ್ಲಿ ಮತ್ತು ಕೊರೊನಾ ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಪಕ್ಷದ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಶಾಮರಾವ ಸೂರನ್ ಟೀಕಿಸಿದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶಕುಮಾರ್ ಅವರು ಪಿಯುಸಿ ವಿದ್ಯಾರ್ಥಿಗಳಿಗೆ ಒಂದು ನ್ಯಾಯ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮತ್ತೊಂದು ನ್ಯಾಯವನ್ನು ಅನುಸರಿಸುತ್ತಿದ್ದಾರೆ. ಜೀವ ಎಲ್ಲರಿಗೂ ಒಂದೇಯಾಗಿದ್ದು, ಪಿಯುಸಿಯಂತೆ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನೂ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ವಿದ್ಯುತ್ ಬಿಲ್, ನೀರಿನ ಬಿಲ್, ಮನೆ ಬಾಡಿಗೆ ಕಟ್ಟುವುದು ಕಷ್ಟವಾಗಿದೆ. ಆದ್ದರಿಂದ ಬಿಲ್‌ಗಳನ್ನು ಮನ್ನಾ ಮಾಡಬೇಕು. ಈಗಾಗಲೇ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ಪ್ರಾಮಾಣಿಕವಾಗಿ ಫಲಾನುಭವಿಗಳಿಗೆ ವಿತರಣೆ ಆಗಬೇಕು. ಬ್ಯಾಂಕ್ ಕಂತುಗಳನ್ನು ಮಂದೂಡಬೇಕು. ಬಡ್ಡಿ ಮನ್ನಾ ಮಾಡಬೇಕು. ಆಸ್ತಿ ತೆರಿಗೆಯನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ‍

ಪ‍ಕ್ಷದ ಹಿರಿಯ ಉಪಾಧ್ಯಕ್ಷ ಶಂಕರ ಕಟ್ಟಿಸಂಗಾವಿ, ಜಿಲ್ಲಾ ವಕ್ತಾರ ಮನೋಹರ ಪೋದ್ದಾರ, ಉಪಾಧ್ಯಕ್ಷ ಬಸವರಾಜ ಸಿದ್ರಾಮಗೋಳ, ರಾಜ್ಯ ಎಸ್ಸಿ, ಎಸ್ಟಿ ಪ್ರಧಾನ ಕಾರ್ಯದರ್ಶಿ ದೇವಿಂದ್ರ ಹಸನಾಪೂರ, ಮುಖಂಡರಾದ ಮಾಣಿಕ ಶಹಾಪೂರಕರ, ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿ ಸುನೀಲ ಬಿರಾದಾರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು