ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ

Last Updated 30 ಸೆಪ್ಟೆಂಬರ್ 2020, 4:30 IST
ಅಕ್ಷರ ಗಾತ್ರ

ಕಲಬುರ್ಗಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ನಗರದಲ್ಲಿ ಮಂಗಳವಾರ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ: ಕಳೆದ 24ರಿಂದ ಅನಿರ್ದಿಷ್ಟ ಅವಧಿಯ ಮುಷ್ಕರ ಆರಂಭಿಸಿರುವ ಸಂಘದ ಕಾರ್ಯಕರ್ಯರು ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕೋವಿಡ್–19 ಸಂದರ್ಭದಲ್ಲಿ ಗುತ್ತಿಗೆ ನೌಕರರು ತಮ್ಮ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದು, ಅವರಿಗೆ ಒಂದು ತಿಂಗಳ ವೇತನವನ್ನು ಪ್ರೋತ್ಸಾಹ ಭತ್ಯೆಯನ್ನಾಗಿ ನೀಡಬೇಕು ಎಂದು ಆಗ್ರಹಿಸಿದರು.

ಅಖಿಲ ಕರ್ನಾಟಕ ಸರ್ಕಾರಿ ನೌಕರರ ಒಕ್ಕೂಟ: ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಜನವರಿ 2020ರಿಂದ ಜೂನ್ 2021ರವರೆಗೆ ತುಟ್ಟಿಭತ್ಯೆ ಹೆಚ್ಚಳ ದರವನ್ನು ಸ್ಥಗಿತಗೊಳಿಸಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಒಕ್ಕೂಟದ ಸದಸ್ಯರು ಒತ್ತಾಯಿಸಿದರು.

ಕೊರೊನಾ ವಾರಿಯರ್ಸ್‌ ಆಗಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಕೆಎಎಸ್‌ ಅಧಿಕಾರಿಗಳಿಗೆ ಇರುವಂತೆ ವಿಶೇಷ ಭತ್ಯೆ ಹಾಗೂ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ಕಲ್ಪಿಸಬೇಕು. ರಾಜ್ಯ ಸರ್ಕಾರದ ಹುದ್ದೆಗಳನ್ನು ಕಡಿತ ಮಾಡುವ ಅವೈಜ್ಞಾನಿಕ ಪ್ರಸ್ತಾವವನ್ನು ಕೈಬಿಡಬೇಕು. ಎನ್‌ಪಿಎಸ್‌ ರದ್ದುಗೊಳಿಸಿ ಎಲ್ಲ ನೌಕರರಿಗೂ ನಿಶ್ಚಿತ ಪಿಂಚಣಿ ವ್ಯವಸ್ಥೆಯನ್ನು ಕಲ್ಪಿಸಬೇಕು. ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡಬೇಕಿರುವ ಬಾಕಿ ಜಿಎಸ್ಟಿಯನ್ನು ವಾಪಸ್ ನೀಡಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣವನ್ನು ಕೈಬಿಡಬೇಕು. ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯನ್ನು ಹಿಂದಕ್ಕೆ ಪಡೆದು ಸಂವಿಧಾನವನ್ನು ರಕ್ಷಿಸಬೇಕು. ಒತ್ತಾಯಪೂರ್ವಕವಾಗಿ ಕಡ್ಡಾಯ ನಿವೃತ್ತಿಗೊಳಿಸುವ ಕೇಂದ್ರ ಸರ್ಕಾರಿ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

ಒಕ್ಕೂಟದ ಅಧ್ಯಕ್ಷ ಶರಣಗೌಡ ಪಾಟೀಲ, ಗೌರವಾಧ್ಯಕ್ಷ ಕೆ. ಪ್ರಕಾಶ, ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಚಿಂಚೋಳಿಕರ, ಬಿ.ಎಸ್.ಬಾಗೋಡಿ, ಕೋದಂಡರಾಮಪ್ಪ, ಡಿ.ವಿ.ಪಟೀಲ್, ಡಾಂಗೆ ಎಸ್‌.ಐ, ವಿಠ್ಠಲ ಬಾವಗೆ ಇದ್ದರು.

ಆರ್‌ಎಸ್‌ಕೆ: ತೆಲಂಗಾಣದ ಮೊಯಿನಾಬಾದ್‌ನಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಮಧು ಯಾದವ್ ಎಂಬಾತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಫಿಯಾ ಶಿರೀನ್ ಖಾನ್ ಎಂಪವರ್‌ಮೆಂಟ್ ಅಂಡ್ ಚಾರಿಟಬಲ್ ಸಂಸ್ಥೆಯ ಸದಸ್ಯೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ತೆಲುಗು ದೇಶಂ ಪಕ್ಷದ ಮುಖಂಡನೂ ಆಗಿರುವ ಮಧು ಯಾದವ್ ಮನೆಯಲ್ಲಿ ಕೆಲಸಕ್ಕಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ತಕ್ಷಣ ಕಠಿಣ ಕಾನೂನುಗಳನ್ವಯ ಶಿಕ್ಷಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘ: ಜಿಲ್ಲಾ ಪಂಚಾಯಿತಿಯು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಬಿಎಫ್‌ಟಿ ತರಬೇತಿಗಾಗಿ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಿದ 800 ಅಭ್ಯರ್ಥಿಗಳ ಪೈಕಿ ಕೆಲವೇ ಕೆಲವರನ್ನು ಆಹ್ವಾನಿಸಿ ಪರೀಕ್ಷೆ ನಡೆಸಿದ್ದಾರೆ ಎಂದು ಆರೋಪಿಸಿ ಅವಕಾಶ ವಂಚಿತ ಅಭ್ಯರ್ಥಿಗಳು ಜಿಲ್ಲಾ ಪಂಚಾಯಿತಿ ಹೊಸ ಕಟ್ಟಡದ ಎದುರಿನ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ಎಲ್ಲರಿಗೂ ಪರೀಕ್ಷೆಯ ಬಗ್ಗೆ ಮಾಹಿತಿ ನೀಡದೇ ಕೆಲವರಿಂದ ಹಣ ಪಡೆದು ಪರೀಕ್ಷೆಗೆ ಆಹ್ವಾನಿಸಿದ್ದಾರೆ ಎಂದು ಅಭ್ಯರ್ಥಿಗಳು ಗಂಭೀರ ಆರೋಪ ಮಾಡಿದರು.

ಶಿವಕುಮಾರ ಕಡಬೂರ, ವಿದ್ಯಾವತಿ ಗುತ್ತೇದಾರ ಕೊಡಲ ಹಂಗರಗಾ, ಬಾಬುರಾವ ಆಳಂದ ಗಂಗಾಪುರ, ಪ್ರಭಾವತಿ ಆಳಂದ ಗಂಗಾಪುರ, ಅನೀಲಕುಮಾರ ಪಾಟೀಲ ಹಲಚೇರಾ, ಯಲ್ಲಪ್ಪ ದೇವಲಗಾಣಗಾಪುರ, ಪ್ರಾಂತ ರೈತ ಸಂಘದ ಮುಖಂಡ ಅಶೋಕ ಮ್ಯಾಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT