ಗುರುವಾರ , ಅಕ್ಟೋಬರ್ 6, 2022
22 °C

ಹಿಂದಿ ದಿನ ಆಚರಣೆಗೆ ವಿರೋಧ; ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಕೇಂದ್ರ ಸರ್ಕಾರ ಸೆಪ್ಟೆಂಬರ್ 14ರಂದು ಹಿಂದಿ ಭಾಷೆ ದಿನವಾಗಿ ಆಚರಿಸಲು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರುತ್ತಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು, ಪ್ರಾದೇಶಿಕ ಪಕ್ಷಗಳು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿ, ಹಿಂದಿ ಹೇರಿಕೆ ತಡೆಯುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದವು.

ದೇಶದ ನೂರಾರು ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸಿದ ಕೇಂದ್ರ ಸರ್ಕಾರ, ಬಲವಂತವಾಗಿ ಹಿಂದಿ ಹೇರಿಕೆ ಮಾಡುತ್ತಿದೆ. ಕನ್ನಡ ನಮ್ಮ ರಾಜ್ಯದ ಹೆಮ್ಮೆಯ ಭಾಷೆ. ಯಾವುದೇ ಕಾರಣಕ್ಕೂ ಹಿಂದಿಯನ್ನು ಒಪ್ಪಿಕೊಳ್ಳುವುದಿಲ್ಲ. ಹಿಂದಿ ದಿನ ನಮಗೆ ಅವಶ್ಯಕತೆ ಇಲ್ಲ. ಕೂಡಲೇ ಕೇಂದ್ರ ಸರ್ಕಾರ ಇಂತಹ ನಡೆಗಳಿಂದ ಹಿಂದೆ ಸರಿಯಬೇಕು ಎಂದು ಜೆಡಿಎಸ್‌ ಜಿಲ್ಲಾ ಘಟಕ ಅಧ್ಯಕ್ಷ ಸುರೇಶ ಮಹಾಗಾಂವಕರ ಆಗ್ರಹಿಸಿದರು.

ಸ್ಥಳೀಯ ಭಾಷೆಗಳಿಗೆ ಗೌರವ ಕೊಡಿ: ಕೇಂದ್ರ ಸರ್ಕಾರ ಕನ್ನಡಿಗರ ತೆರಿಗೆಯ ಹಣದಲ್ಲಿ ಹಿಂದಿ ದಿನ ಆಚರಣೆ ಮಾಡುವ ಮೂಲಕ ನಮ್ಮ ಭಾಷೆಯನ್ನು ಕಡೆಗಣಿಸಿದೆ. ಒಕ್ಕೂಟ ವ್ಯವಸ್ಥೆಗೆ ಮಾರಕವಾದ ಇಂತಹ ಆಚರಣೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸದಸ್ಯರು ಆಗ್ರಹಿಸಿದರು.

ಬ್ಯಾಂಕ್ ಇತರೆ ಸಾರ್ವಜನಿಕ ಕಚೇರಿಗಳಲ್ಲಿ ಹಿಂದಿ ಭಾಷಿಕರನ್ನು ನೇಮಿಸಿಕೊಳ್ಳುತ್ತಿದೆ. ಹಿಂದೆ ಭಾಷೆ ಮಾತ್ರ ಶ್ರೇಷ್ಠ ಎಂಬ ಭಾವನೆಯನ್ನು ಬಿತ್ತುತ್ತಿದೆ. ಸಾಂವಿಧಾನಿಕ ಸಂಸ್ಥೆಗಳ ಮೂಲಕ ಹಿಂದೆ ಭಾಷೆ ಹೇರಿಕೆ ಮಾಡುತ್ತಿದೆ. ಸಂವಿಧಾನದ ಪ್ರಕಾರ 22 ಭಾಷೆಗಳಿಗೆ ಸಮಾನ ಆದ್ಯತೆ ಕೊಡಬೇಕು. ಇಲ್ಲದಿದ್ದರೆ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಮುಖಂಡ ಶಿವಾಜಿ ಪೂಜಾರಿ ಹೇಳಿದರು.

ಒಕ್ಕೂಟ ವ್ಯವಸ್ಥೆಗೆ ಮಾರಕ: ಹಿಂದಿ ದಿನ ಆಚರಣೆ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದ್ದು, ಕೂಡಲೇ ಆಚರಣೆಯನ್ನು ನಿಲ್ಲಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ.ನಾರಾಯಣಗೌಡರ) ಬಣದ ಸದಸ್ಯರು ಪ್ರತಿಭಟನೆ ನಡೆಸಿ ಒತ್ತಾಯಿಸಿದರು.

ಭಾರತಕ್ಕೆ ಯಾವುದೇ ರಾಷ್ಟ್ರೀಯ ಭಾಷೆ ಇಲ್ಲ. ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ 22 ಭಾಷೆಗಳು ರಾಷ್ಟ್ರೀಯ ಭಾಷೆಗಳೇ ಆಗಿವೆ. ಅವುಗಳ ನಡುವೆ ತಾರತಮ್ಯ ಮಾಡಬಾರದು. ಇದು ಸಂವಿಧಾನದ ಸಮಾನತೆಯ ಆಶಯಕ್ಕೆ ಅಡ್ಡಿಯಾಗುತ್ತದೆ ಎಂದು ಪ್ರತಿಭಟನಾ ನಿರತರು ಹೇಳಿದರು.

ವೇದಿಕೆಯ ಜಿಲ್ಲಾ ಅಧ್ಯಕ್ಷ ಮಹೇಶ ಎಸ್. ಕಾಶಿ, ಮುಖಂಡರಾದ ಆನಂದ ಎಸ್. ದೊಡ್ಡಮನಿ, ಮಲ್ಲಿಕಾರ್ಜುನ ಅಲ್ಲುರಕರ್, ರಾಜಕುಮಾರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.