ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಿಗೆ ಉದ್ಯೋಗ ಖಾತ್ರಿ ಕೆಲಸ ಕೊಡಿ: ಗೋವಿಂದ ಕಾರಜೋಳ

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ
Last Updated 24 ಏಪ್ರಿಲ್ 2020, 4:02 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ ಒಂದು ತಿಂಗಳಿಂದ ಸಂ‍ಪೂರ್ಣವಾಗಿ ಲಾಕ್‌ಡೌನ್‌ ಇರುವುದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಸಿಗುತ್ತಿಲ್ಲ. ಸರ್ಕಾರ ಕೆಲ ಭಾಗಗಳಲ್ಲಿ ಲಾಕ್‌ಡೌನ್‌ನಿಂದ ಸಡಿಲಿಕೆ ನೀಡಿರುವುದರಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಕೂಡಲೇ ಕೆಲಸ ಕೊಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಜಿಲ್ಲಾ ಪಂಚಾಯಿತಿ ಸಿಇಒ ಡಾ.ರಾಜಾ ಪಿ. ಅವರಿಗೆ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಕೊರೊನಾ ಪ್ರಯುಕ್ತ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿದರು.

ಜನರ ಬಳಿ ದುಡ್ಡಿಲ್ಲ. ಹಾಗಾಗಿ, ಉದ್ಯೋಗ ಖಾತ್ರಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳಿ. ಕೆಲಸ ಮಾಡಿಸಿಕೊಂಡ ವಾರದಲ್ಲಿಯೇ ಅವರ ವೇತನ ಪಾವತಿಸಿ. ಬೇರೆ ಕಡೆ ಕೆಲಸ ನೀಡಿದರೆ ದೈಹಿಕ ಅಂತರ ಕಾಯ್ದುಕೊಳ್ಳದಿರಬಹುದು. ಅದಕ್ಕಾಗಿ ಅವರವರ ಹೊಲಗಳಲ್ಲಿಯೇ ಕೆಲಸ ಕೊಡಿ. ಎಲ್ಲ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಂತೆ ನಿಗಾ ವಹಿಸಿ ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಜಾ ಪಿ., ಬರಪೀಡಿತ 3 ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಸೂಚನೆ ನೀಡಿದ್ದು, ಅಗತ್ಯ ಹಣಕಾಸನ್ನು ಜಿಲ್ಲಾ ಪಂಚಾಯಿತಿಯಿಂದ ಒದಗಿಸಲಾಗಿದೆ. ಇನ್ನು ನಾಲ್ಕು ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಜಿಲ್ಲಾಧಿಕಾರಿ ಅವರ ಖಾತೆಯಲ್ಲಿ ₹ 1.5 ಕೋಟಿ ತುರ್ತು ಪರಿಹಾರಕ್ಕಾಗಿ ಹಣ ಮೀಸಲಿದ್ದು, ಅದನ್ನೂ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.

ಅಡವಿ ವಸ್ತಿಯವರಿಗೂ ವಿದ್ಯುತ್ ಕೊಡಿ: ಅಡವಿ ವಸ್ತಿಗಳಲ್ಲಿರುವ ಜನರಿಗೂ ನಿರಂತರವಾಗಿ ವಿದ್ಯುತ್‌ ಪೂರೈಸಬೇಕು. ನಗರದಲ್ಲಿಯೂ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಿ ಎಂದು ಸಚಿವರು ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ಅವರಿಗೆ ತಾಕೀತು ಮಾಡಿದರು.

ರಾಜ್ಯದಾದ್ಯಂತ ಲಾಕ್‌ಡೌನ್‌ ಪರಿಣಾಮ ಎಲ್ಲ ಕಾರ್ಖಾನೆಗಳು ಬಂದ್‌ ಇರುವುದರಿಂದ ವಿದ್ಯುತ್‌ ಸಾಕಷ್ಟು ಬಳಕೆಯಾಗಿಲ್ಲ. ಹೀಗಾಗಿ, ಹಳ್ಳಿಗಳಲ್ಲಿಯೂ ಸಿಂಗಲ್‌ ಫೇಸ್‌ ವಿದ್ಯುತ್‌ ಕೊಡಬಹುದು ಎಂದರು.

ಅಕ್ರಮ ಮದ್ಯ ಮಾರಾಟ, ಕಳ್ಳಭಟ್ಟಿ ಸಾರಾಯಿ ಜಿಲ್ಲೆಯಲ್ಲಿ ನಡೆಯುತ್ತಿರುವ ಬಗ್ಗೆ ಹೆಚ್ಚು ದೂರುಗಳು ಬರುತ್ತಿದ್ದು, ಇದನ್ನು ತಡೆಯಲು ವಿಫಲರಾಗಿದ್ದೀರಿ ಎಂದು ಸಚಿವ ಕಾರಜೋಳ ಅವರು ಅಬಕಾರಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ಬಾರ್‌ಗಳಿಂದ ಸೀಲ್‌ ಮುರಿದು ಮದ್ಯ ಸಾಗಾಟ ಪ್ರಕರಣಗಳನ್ನು ಪತ್ತೆ ಹಚ್ಚಿ ಸನ್ನದು ರದ್ದುಗೊಳಿಸಿ ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಸಂಸದ ಡಾ.ಉಮೇಶ ಜಾಧವ್,ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ, ಶಾಸಕರಾದ ಸುಭಾಷ್‌ ಗುತ್ತೇದಾರ, ಬಿ.ಜಿ.ಪಾಟೀಲ, ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ಡಾ.ಅವಿನಾಶ್ ಜಾಧವ,ಪೊಲೀಸ್‌ ಕಮಿಷನರ್ ಸತೀಶಕುಮಾರ್ ಎನ್, ಡಿಸಿಪಿ ಡಿ.ಕಿಶೋರಬಾಬು, ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಮಹಾನಗರ‍ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ, ಹೆಚ್ಚುವರಿ ಜಿಲ್ಲಾಧಿಕಾರಿ ರಾಚಪ್ಪ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಸಾಹಿತ್ಯ ಸಮ್ಮೇಳನದಿಂದ ಮೊದಲ್ಗೊಂಡು ಈ ಕೊರೊನಾ ಸಂದರ್ಭದಲ್ಲಿಯೂ ನೀವು (ಕಾರಜೋಳ) ಜೊತೆಯಾಗಿ ಕರೆದುಕೊಂಡು ಹೋಗುತ್ತಿದ್ದೀರಿ. ಇದನ್ನು ಸಂಸದರಿಗೂ ಹೇಳಿ!
-ತಿಪ್ಪಣ್ಣಪ್ಪ ಕಮಕನೂರ, ಎಂಎಲ್‌ಸಿ

ಚುನಾವಣೆ ಬಂದಾಗಲಷ್ಟೇ ನಾವು ವಿರೋಧಿಗಳು. ಆ ನಂತರ ಎಲ್ಲರೂ ಜೊತೆಯಾಗಿ ಹೋಗಬೇಕು. ಸಂಸದರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಾರೆ
-ಗೋವಿಂದ ಕಾರಜೋಳ ಉಪ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT