ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ: ಸಾಕ್ಷ್ಯಾಧಾರ ಸಂಗ್ರಹವೇ ತಲೆನೋವು

Last Updated 13 ಮೇ 2022, 13:01 IST
ಅಕ್ಷರ ಗಾತ್ರ

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಬರೆದ ಕೆಲ ಅಭ್ಯರ್ಥಿಗಳ ಒಎಂಆರ್‌ ಶೀಟ್‌ನ ಕಾರ್ಬನ್‌ ಕಾಪಿಗಳನ್ನು, ಆರೋಪಿ ಮಂಜುನಾಥ ಮೇಳಕುಂದಿ ನಾಶಪಡಿಸಿದ್ದಾರೆ. ಹೀಗಾಗಿ, ನಿಖರ ಸಾಕ್ಷ್ಯಾಧಾರ ಸಂಗ್ರಹಿಸುವುದು ಸಿಐಡಿ ಅಧಿಕಾರಿಗಳಿಗೆ ತಲೆನೋವಾಗಿದೆ.

ವಾಮಮಾರ್ಗದ ಮೂಲಕ ಒಎಂಆರ್‌ ಶೀಟ್‌ಗಳಲ್ಲಿ ಸರಿ ಉತ್ತರಗಳನ್ನು ಗುರುತು ಹಾಕಿಸಿ, ಪಾಸ್‌ ಮಾಡಿಸುವುದರಲ್ಲಿ ಮಂಜುನಾಥ ಪಳಗಿದ್ದಾರೆ. 2021ರ ಅಕ್ಟೋಬರ್‌ 3ರಂದು ನಡೆದ 545 ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲೂ ಇದೇ ರೀತಿ ವ್ಯವಹಾರ ಕುದುರಿಸಿದ್ದರು. ನೇಮಕಾತಿ ಆದೇಶ ಬರುವವರೆಗೂ ಅಭ್ಯರ್ಥಿಗಳ ಒಎಂಆರ್‌ ಶೀಟಿನ ಕಾರ್ಬನ್‌ ಕಾಪಿ ಹಾಗೂ ಕೆಲವು ಶೈಕ್ಷಣಿಕ ದಾಖಲೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಅಕ್ರಮ ಹೊರಬೀಳುತ್ತಿದ್ದಂತೆಯೇ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಕಾರ್ಬನ್‌ ಕಾಪಿಗಳನ್ನು ಹರಿದು, ನಾಲೆಗೆ ಬಿಸಾಕಿದ್ದಾರೆ. ವಿಚಾರಣೆ ನಡೆದಾಗ ಈ ಸಂಗತಿಯನ್ನು ಸ್ವತಃ ಮಂಜುನಾಥ ಹೇಳಿದ್ದಾಗಿ, ಮೂಲಗಳು ತಿಳಿಸಿವೆ.

‘ಏ. 10ರಂದು ಹಗರಣದ ತನಿಖೆ ಆರಂಭವಾಗಿದ್ದು, ಮರುದಿನವೇ ಮಂಜುನಾಥ ತಲೆಮರೆಸಿಕೊಂಡಿದ್ದರು. ಮೇ 1ರಂದು ಇಲ್ಲಿನ ಸಿಐಡಿ ಕಚೇರಿಗೆ ಬಂದು ಶರಣಾಗಿದ್ದರು. ಶರಣಾಗುವ ಮುನ್ನ ತಮ್ಮ ಬಳಿ ಇದ್ದ ಕೆಲವು ಅಭ್ಯರ್ಥಿಗಳ ಒಎಂಆರ್‌ ಶೀಟಿನ ಕಾರ್ಬನ್‌ ಕಾಪಿಗಳನ್ನು ನಾಶ ಮಾಡಿದ್ದಾರೆ. ನಗರ ಹೊರವಲಯದ ಕೋಟನೂರು ಬಳಿಯ ದೊಡ್ಡ ನಾಲೆಗೆ ಕಾಪಿಗಳನ್ನು ಹರಿದು ಬಿಸಾಕಿದ್ದರು. ಮೂಲ ಪ್ರತಿ ಹಾಗೂ ಕಾರ್ಬನ್‌ ಪ್ರತಿಯಲ್ಲಿನ ವ್ಯತ್ಯಾಸಗಳು ಗೊತ್ತಾಗದೇ ಹೋದರೆ ತಾನು ಸುರಕ್ಷಿತ ಎಂಬ ಭ್ರಮೆ ಮಂಜುನಾಥ ತಲೆಯಲ್ಲಿತ್ತು. ಹೀಗಾಗಿ, ಸಾಕ್ಷ್ಯ ನಾಶ ಮಾಡಿದ್ದಾರೆ. ಮೂರು ದಿನಗಳ ಹಿಂದೆಯೇ ಸ್ಥಳಕ್ಕೆ ಹೋಗಿ ಶೋಧ ನಡೆಸಲಾಗಿದೆ. ಆದರೆ, ಸೂಕ್ತ ದಾಖಲೆ ಸಿಗಲಿಲ್ಲ’ ಎನ್ನುತ್ತವೆ ಮೂಲಗಳು.

ಒಎಂಆರ್‌ ಶೀಟಿನಲ್ಲಿ ವ್ಯತ್ಯಾಸ ಕಂಡುಬಂದ ಮೂವರು ಅಭ್ಯರ್ಥಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಇವರೆಲ್ಲ ನಗರದ ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿನ ಕೇಂದ್ರದಲ್ಲೇ ಪರೀಕ್ಷೆ ಬರೆದವರು. ಆದರೆ, ರಾಜ್ಯದ ಬೇರೆ ಬೇರೆ ಪರೀಕ್ಷಾ ಕೇಂದ್ರಗಳಲ್ಲೂ ಮಂಜುನಾಥ ಮೇಳಕುಂದಿ ಇದೇ ರೀತಿಯ ಅಕ್ರಮ ಎಸಗಿದ ಸಾಧ್ಯತೆಯನ್ನು ಸಿಐಡಿ ಅಲ್ಲಗಳೆಯುತ್ತಿಲ್ಲ. ಆದರೆ, ಅವುಗಳನ್ನು ಬಯಲಿಗೆಳೆಯುವುದು ಸವಾಲಾಗಿ ಪರಿಣಮಿಸಿದೆ ಎನ್ನುವುದು ಮೂಲಗಳ ಮಾಹಿತಿ.

ಬಂಧನ ವಾರೆಂಟ್‌ಗೂ ಜಗ್ಗದ ಸಹೋದರ: ಮಂಜುನಾಥ ಮೇಳಕುಂದಿಯ ತಮ್ಮ ರವೀಂದ್ರ ಮೇಳಕುಂದಿ ಕೂಡ ಈ ಹಗರದಣದಲ್ಲಿ ಭಾಗಿಯಾದ ಆರೋಪ ಹೊತ್ತಿದ್ದಾರೆ. ಕಳೆದ ಏ. 11ರಂದು ಅಣ್ಣ– ತಮ್ಮ ಜೊತೆಯಲ್ಲೇ ಪರಾರಿಯಾಗಿದ್ದರು. ಏ. 26ರಂದು ಇಬ್ಬರ ಮೇಲೂ ಬಂಧನ ವಾರೆಂಟ್‌ ಹೊರಡಿಸಿದ ಬಳಿಕ ಮಂಜುನಾಥ ಮೇ 1ರಂದು ಶರಣಾದರು. ಆದರೆ, ಅವರ ತಮ್ಮ ರವೀಂದ್ರ ಮಾತ್ರ ಇನ್ನೂ ಪತ್ತೆಯಾಗಿಲ್ಲ.

ವಾರೆಂಟ್‌ ಅವಧಿ ಮುಗಿಯುವುದರೊಳಗೆ ಬಂಧನ ಅಥವಾ ಶರಣಾಗದಿದ್ದರೆ ಆರೋಪಿಯ ಆಸ್ತಿಯನ್ನು ಮುಟ್ಟುಗೋಲು ಹಾಕುವುದಕ್ಕೂ ಕಾನೂನಿನಲ್ಲಿ ಅವಕಾಶವಿದೆ. ಈ ಬಗ್ಗೆ ನ್ಯಾಯಾಲಯ ನೀಡಿದ ಎಚ್ಚರಿಕೆಗೂ ರವೀಂದ್ರ ಜಗ್ಗಿಲ್ಲ. ಹೀಗಾಗಿ, ರವೀಂದ್ರ ಅವರನ್ನು ‘ಘೋಷಿತ ಆರೋಪಿ’ ಎಂದು ಪರಿಗಣಿಸುವಂತೆ ನ್ಯಾಯಾಲಯಕ್ಕೆ ಮನವರಿಕೆ ಮಾಡಲು ಸಿಐಡಿ ಅಧಿಕಾರಿಗಳು ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಜೊತೆಗೆ, ಮಹಿಳಾ ಅಭ್ಯರ್ಥಿ ಶಾಂತಿಬಾಯಿ ಅವರ ಮೇಲೂ ಬಂಧನ ವಾರೆಂಟ್‌ ಇದೆ. ಇದೂವರೆಗೆ ಅವರೂ ಪತ್ತೆಯಾಗಿಲ್ಲ.

ಡಿವೈಎಸ್‌ಪಿ ವೈಜನಾಥ ಕರೆತಂದು ಮಹಜರು

ಬ್ಲೂಟೂತ್‌ ಬಳಸಿ ನಡೆಸಿದ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧಿತರಾದ ಇಲ್ಲಿನ 6ನೇ ಕೆಎಸ್‌ಆರ್‌ಪಿ ಬಟಾಲಿಯನ್‌ನ ಸಹಾಯಕ ಕಮಾಂಡೆಂಟ್ (ಡಿವೈಎಸ್ಪಿ) ವೈಜನಾಥ ರೇವೂರ ಅವರನ್ನು, ಸಿಐಡಿ ಅಧಿಕಾರಿಗಳು ಶುಕ್ರವಾರ ಕೆಲವು ಸ್ಥಳಗಳಿಗೆ ಕರೆದೊಯ್ದು ಮಹಜರು ನಡೆಸಿದರು.

ನಗರದ ಹೊರವಲಯದ ಉದನೂರ ಕ್ರಾಸ್‌ ಬಳಿ ಕರೆತಂದು ಸ್ಥಳದ ಮಹಜರು ಮಾಡಿಸಿದರು. ಈ ಅಕ್ರಮದ ಪ್ರಮುಖ ಆರೋಪಿ ರುದ್ರಗೌಡ ಡಿ. ಪಾಟೀಲ, ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ; ಮೂವರೂ ಸೇರಿಕೊಂಡು ಇದೇ ಸ್ಥಳದಲ್ಲಿ ‘ಹಣಕಾಸಿನ ಡೀಲ್‌’ ನಡೆಸಿದ್ದಾಗಿ ವೈಜನಾಥ ಬಾಯಿಬಿಟ್ಟಿದ್ದಾರೆ. ಹೀಗಾಗಿ, ಸ್ಥಳ ಮಹಜರು ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.

ಸಿಐಡಿ ಡಿವೈಎಸ್ಪಿ ಪ್ರಕಾಶ ರಾಠೋಡ್ ನೇತೃತ್ವದ ತಂಡ ಆರೋಪಿಯನ್ನು ಸ್ಥಳಕ್ಕೆ ಕರೆತಂದಿತು. ಅಲ್ಲಿಂದ ರುದ್ರಗೌಡ ಡಿ. ಪಾಟೀಲ ಮನೆಗೂ ಕರೆದುಕೊಂಡು ಹೋಗಿ ಮಹಜರು ನಡೆಸಲಾಯಿತು.

ವೈಜನಾಥ ಸಿಐಡಿ ಕಸ್ಟಡಿ ಅಂತ್ಯ ಶುಕ್ರವಾರ (ಮೇ 13)ಕ್ಕೆ ಅಂತ್ಯವಾದ ಕಾರಣ, ಅವರನ್ನು ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT