ಶುಕ್ರವಾರ, ಜುಲೈ 30, 2021
20 °C
ಜಿಲ್ಲೆಯಲ್ಲಿಂದು ಪಿಯು ಇಂಗ್ಲಿಷ್‌ ಪರೀಕ್ಷೆ ಬರೆಯಲಿದ್ದಾರೆ 23,103 ವಿದ್ಯಾರ್ಥಿಗಳು

ಕಲಬುರ್ಗಿ| ವಿದ್ಯಾರ್ಥಿಗಳ ಜ್ವರ ತಪಾಸಣೆ, ಸ್ಯಾನಿಟೈಜರ್‌ ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕೊರೊನಾ ಲಾಕ್‌ಡೌನ್‌ನಿಂದಾಗಿ ಮುಂದೂಡಲಾಗಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್‌ ಪರೀಕ್ಷೆ ಇದೇ 18ರಂದು ಬೆಳಿಗ್ಗೆ 10.15ಕ್ಕೆ ಆರಂಭವಾಗಲಿದ್ದು, 23,103 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪದವಿ ಪೂರ್ವ ಶಿಕ್ಷಣ ಮಂಡಳಿಯು ಅದಕ್ಕಾಗಿ ಸಕಲ ಸಿದ್ಧತೆಯನ್ನು ಮಾಡಿದೆ.

ಥರ್ಮಲ್ ಸ್ಕ್ರೀನಿಂಗ್ ಮೂಲಕ ಜ್ವರ ತಪಾಸಣೆ ಹಾಗೂ ಸ್ಯಾನಿಟೈಜರ್‌ ಬಳಕೆ ಮಾಡುತ್ತಿರುವುದರಿಂದ ಬೆಳಿಗ್ಗೆ 8.30ಕ್ಕೆ ಹಾಜರಿರುವಂತೆ ವಿದ್ಯಾರ್ಥಿಗಳಿಗೆ ಮೌಖಿಕ ಸೂಚನೆ ನೀಡಲಾಗಿದೆ. ಆದಾಗ್ಯೂ, ಲಾಕ್‌ಡೌನ್‌ನಿಂದಾಗಿ ಬಸ್‌ಗಳು ಸರಿಯಾದ ಸಮಯಕ್ಕೆ ಬಾರದೇ ಅರ್ಧ ಗಂಟೆ ತಡವಾದರೂ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಪದವಿ ಪೂರ್ವ ಶಿಕ್ಷಣ ಮಂಡಳಿಯು ಆಯಾ ಜಿಲ್ಲೆಗಳ ಡಿಡಿಪಿಯುಗಳಿಗೆ ಸೂಚನೆ ನೀಡಿದೆ. 

ಕೊರೊನಾ ವೈರಾಣು ಹಬ್ಬುವುದನ್ನು ತಡೆಯಲು ವಿದ್ಯಾರ್ಥಿಗಳ ಮಧ್ಯೆ ದೈಹಿಕ ಅಂತರ ಕಾಪಾಡುವುದಕ್ಕೆ ಪ್ರತಿ ಬೆಂಚ್‌ನಲ್ಲಿ ಇಬ್ಬರಿಗೆ ಮಾತ್ರ ಸ್ಥಳಾವಕಾಶ ಮಾಡಲಾಗಿದೆ. ಪರೀಕ್ಷಾ ಕೇಂದ್ರದ ಒಂದು ಸಾಮಾನ್ಯ ಕೊಠಡಿಯಲ್ಲಿ 12 ವಿದ್ಯಾರ್ಥಿಗಳಿಗೆ, ದೊಡ್ಡ ಸಭಾಂಗಣದಂತಹ ಕೊಠಡಿಯಲ್ಲಿ 36 ಜನರಿಗೆ ಪರೀಕ್ಷೆ ಬರೆಯಲು ಸ್ಥಳಾವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ಸ್ಕ್ರೀನಿಂಗ್ ಮಾಡಲು ಈಗಾಗಲೇ ಥರ್ಮಲ್ ಸ್ಕ್ರೀನಿಂಗ್ ಯಂತ್ರಗಳನ್ನು ತರಿಸಿಕೊಳ್ಳಲಾಗಿದೆ. ನಗರದ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ 5 ಲೀಟರ್‌ ಸ್ಯಾನಿಟೈಜರ್‌ ತರಿಸಲಾಗಿದೆ. ಪ್ರತಿ 200 ವಿದ್ಯಾರ್ಥಿಗಳಿಗೆ ಒಂದರಂತೆ ಸ್ಕ್ರೀನಿಂಗ್ ಯಂತ್ರ ತರಿಸಲಾಗಿದೆ. ಆರು ಜನ ಸಿಬ್ಬಂದಿಯನ್ನು ಜ್ವರ ತಪಾಸಣೆಗಾಗಿ ನಿಯೋಜಿಸಲಾಗುತ್ತದೆ ಎಂದು ಡಿಡಿಪಿಯು ಶಿವಶರಣಪ್ಪ ಮುಳೆಗಾಂವ ಮಾಹಿತಿ ನೀಡಿದರು.

ಜಿಲ್ಲೆಯ ಕಾಲೇಜುಗಳಷ್ಟೇ ಅಲ್ಲದೇ, ಬೇರೆ ಜಿಲ್ಲೆಗಳಲ್ಲಿ ಓದುತ್ತಿರುವ ಆದರೆ ಲಾಕ್‌ಡೌನ್‌ ಸಮಯದಲ್ಲಿ ಕಲಬುರ್ಗಿಯಲ್ಲಿರುವ 475 ವಿದ್ಯಾರ್ಥಿಗಳು ಇಲ್ಲಿಯೇ ಪರೀಕ್ಷೆ ಬರೆಯಲು ಪಿಯು ಮಂಡಳಿ ಅನುಮತಿ ನೀಡಿದ್ದು, ಪೂರಕವಾಗಿ ಪ್ರವೇಶಪತ್ರವನ್ನೂ ನೀಡಿದೆ. ಬೇರೆ ರಾಜ್ಯದಲ್ಲಿ ಸಿಲುಕಿಕೊಂಡಿರುವ ಜಿಲ್ಲೆಯ ಆರು ಜನ ವಿದ್ಯಾರ್ಥಿಗಳು ಜಿಲ್ಲಾಡಳಿತದಿಂದ ವಿಶೇಷ ಪಾಸ್‌ ಪಡೆದು ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಎದುರಿಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು