ಶನಿವಾರ, ಆಗಸ್ಟ್ 24, 2019
28 °C

ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಇಬ್ಬರಿಗೆ ಜೈಲು ಶಿಕ್ಷೆ

Published:
Updated:

ಕಲಬುರ್ಗಿ: ಜಗಳ ಬಿಡಿಸಲು ಹೋದ ಪೊಲೀಸ್‌ ಅಧಿಕಾರಿಯನ್ನು ನಿಂದಿಸಿ ಹಲ್ಲೆ ಮಾಡಿದ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ, ಇಲ್ಲಿನ 4ನೇ ಜೆಎಂಎಫ್‌ಸಿ ನ್ಯಾಯಾಲಯವು ಮೇತ್ತಾರಗಲ್ಲಿಯ ವಿಕಾಸ ರಾಜು ಟಾಕ ಹಾಗೂ ಸುನೀಲ ಭಗವಾನದಾಸ್‌ ಸೌದಾಗರ ಎಂಬುವರಿಗೆ 6 ತಿಂಗಳು ಸಾದಾ ಜೈಲು ಶಿಕ್ಷೆ ಹಾಗೂ ₹ 4 ಸಾವಿರ ದಂಡ ವಿಧಿಸಿದೆ. 

2011ರ ಅಕ್ಟೋಬರ್‌ 8ರಂದು ಬ್ರಹ್ಮಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಟಿನಾ ಎಂಟರ್‌ಪ್ರೈಸಿಸ್ ಮಳಿಗೆಯ ಬಳಿ ಇಬ್ಬರೂ ಹೊಡೆದಾಡುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಠಾಣೆಯ ಎಎಸ್‌ಐ ಕಾಶೀನಾಥ ಅವರು ಜಗಳ ಬಿಡಿಸಲು ಮುಂದಾದರು. ಇದರಿಂದ ಕುಪಿತಗೊಂಡ ವಿಕಾಸ ಹಾಗೂ ಸುನೀಲ ಕಲ್ಲಿನಿಂದ ಕಾಶೀನಾಥ ಅವರ ಎಡಭುಜದ ಹಿಂಭಾಗಕ್ಕೆ ಹೊಡೆದರು. ಕೈಬೆರಳನ್ನು ತಿವಿದರು. ಈ ಕುರಿತು ದೂರು ಸ್ವೀಕರಿಸಿದ ಪೊಲೀಸ್‌ ಇನ್‌ಸ್ಪೆಕ್ಟರ್‌ ಶರಣಬಸವೇಶ್ವರ ಇಬ್ಬರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಾದ ವಿವಾದ ಆಲಿಸಿದ ನ್ಯಾಯಾಧೀಶ ಡಿ.ರಮೇಶ ಅವರು ಇಬ್ಬರನ್ನೂ ತಪ್ಪಿತಸ್ಥರು ಎಂದು ಪರಿಗಣಿಸಿ ದಂಡದ ಪ್ರಮಾಣವನ್ನು ‍ಪ್ರಕಟಿಸಿದರು. ‌

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಛಾಯಾದೇವಿ ವಾದ ಮಂಡಿಸಿದ್ದರು.

Post Comments (+)