ಭಾನುವಾರ, ಅಕ್ಟೋಬರ್ 25, 2020
23 °C
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆ

ಶರಣಪ್ಪ ಮಟ್ಟೂರ ಗೆಲುವಿಗೆ ಶ್ರಮಿಸಿ: ಬಿ.ಆರ್‌.ಪಾಟೀಲ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಶರಣಪ್ಪ ಮಟ್ಟೂರ ಅವರು ಸ್ಪರ್ಧಿಸಿದ್ದು, ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಶ್ರಮಿಸಬೇಕಿದೆ’ ಎಂದು ಕಾಂಗ್ರೆಸ್ ನಾಯಕ ಬಿ.ಆರ್‌.ಪಾಟೀಲ ಕರೆ ನೀಡಿದರು.

ಶರಣಪ್ಪ ಮಟ್ಟೂರ ಅವರು ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬಳಿಕ ಬುಧವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಕಲ್ಯಾಣ ಕರ್ನಾಟಕ ಆರೂ ಜಿಲ್ಲೆಗಳಲ್ಲೂ ವ್ಯಾಪಕ ಪ್ರಚಾರ ಕಾರ್ಯ ಕೈಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರನ್ನು ತಲುಪಬೇಕಿದೆ’ ಎಂದರು.

‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ತರಲಾದ ಯೋಜನೆಗಳನ್ನು ಮತ್ತು ಶಿಕ್ಷಕರ ಹಿತಕ್ಕಾಗಿ ಮಾಡಲಾದ ಕಾರ್ಯಗಳನ್ನು ಪ್ರಚಾರಪಡಿಸಬೇಕಿದೆ. ತೀವ್ರ ಸ್ವರೂಪದ ಪೈಪೋಟಿ ಒಡ್ಡುವ ಮೂಲಕ ಚುನಾವಣೆಯಲ್ಲಿ ಯಶಸ್ಸು ಕಾಣಬೇಕಿದೆ, ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸಬೇಕಿದೆ’ ಎಂದರು.

‘ಶಿಕ್ಷಕರ ಮತಕ್ಷೇತ್ರವನ್ನು ಪ್ರತಿನಿಧಿಸಿದ ಶರಣಪ್ಪ ಮಟ್ಟೂರ ಕ್ಷೇತ್ರ ವ್ಯಾಪ್ತಿಯ ಬಹುತೇಕ ಎಲ್ಲಾ ಶಾಲೆಗಳಿಗೆ ಭೇಟಿ ನೀಡಿದ್ದಾರೆ. ಶಿಕ್ಷಕರ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಶಿಕ್ಷಕರ ಪರವಾಗಿ ವಿಧಾನ ಮಂಡಲದಲ್ಲಿ ಧ್ವನಿ ಎತ್ತಿರುವ ಅವರನ್ನು ಪುನಃ ಗೆಲ್ಲಿಸಬೇಕಿದೆ’ ಎಂದರು.

ವಿಧಾನ ಪರಿಷತ್ತಿನ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ‘ಶಿಸ್ತು, ಬದ್ಧತೆ ಮತ್ತು ಪ್ರಾಮಾಣಿಕತೆ ತಳಹದಿಯ ಮೇಲೆ ಚುನಾವಣೆ ಎದುರಿಸಬೇಕಿದೆ. ಯೋಜನಾಬದ್ಧವಾಗಿ ಪ್ರಚಾರ ಕೈಗೊಂಡು ಶಿಕ್ಷಕರ ವಿಶ್ವಾಸ ಗಳಿಸಲು ಎಲ್ಲರೂ ಪ್ರಯತ್ನಿಸಬೇಕಿದೆ’ ಎಂದರು.

‘ಪ್ರಿಯಾಂಕ್ ಖರ್ಗೆ ಮತ್ತು ಅಜಯ್ ಸಿಂಗ್ ಅವರು ಹೆಚ್ಚಿನ ಆಸಕ್ತಿ ವಹಿಸಿ, ಚುನಾವಣೆಯಲ್ಲಿ ತೊಡಗಿಸಿಕೊಂಡಲ್ಲಿ ಖಂಡಿತ ಗೆಲುವು ಸಾಧಿಸುತ್ತೇವೆ. ಅವರಿಬ್ಬರ ನೇತೃತ್ವ ಮತ್ತು ಮಾರ್ಗದರ್ಶನದಡಿ ಪಕ್ಷದ ಕಾರ್ಯಕರ್ತರು ಇನ್ನಷ್ಟು ಚುರುಕಾಗಿ ಚುನಾವಣಾ ಕಾರ್ಯದಲ್ಲಿ ಪಾಲ್ಗೊಳ್ಳುವರು’ ಎಂದು ಅವರು ಹೇಳಿದರು.

ಕಾಂಗ್ರೆಸ್ ನಾಯಕ ಶರಣ ಪ್ರಕಾಶ ಪಾಟೀಲ ಮಾತನಾಡಿ, ‘ಕಾಂಗ್ರೆಸ್‌ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸವಾಲಾಗಿ ಸ್ವೀಕರಿಸಿ ಗೆಲ್ಲುವ ವಿಶ್ವಾಸವಿದೆ’ ಎಂದು ಅವರು ತಿಳಿಸಿದರು.

ಶಾಸಕರಾದ ಪ್ರಿಯಾಂಕ್ ಖರ್ಗೆ, ಅಜಯ್ ಸಿಂ‌ಗ್, ಖನೀಜ ಫತಿಮಾ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡ ಸುಭಾಷ ರಾಠೋಡ ಮುಂತಾದವರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು