6
ಬಹುಜನ ಸಮಾಜ ಪಾರ್ಟಿ ಕಾರ್ಯಕರ್ತರಿಗೆ ಮುಖಂಡರ ಸಲಹೆ

ಮಾಯಾವತಿ ಪ್ರಧಾನಿ ಮಾಡಲು ಪಣ ತೊಡಿ

Published:
Updated:
ಕಲಬುರ್ಗಿಯಲ್ಲಿ ಭಾನುವಾರ ಏರ್ಪಡಿಸಿದ್ದ ಬಿಎಸ್‌ಪಿ ಕಲಬುರ್ಗಿ ವಲಯ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಗಣ್ಯರು ಕಾರ್ಯಕರ್ತರತ್ತ ಕೈಬೀಸಿದರು

ಕಲಬುರ್ಗಿ: ‘ಎಲ್ಲ ಜಾತಿ, ಜನಾಂಗದವರನ್ನು ಸಮಾನವಾಗಿ ನೋಡುವ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರನ್ನು ಮುಂದಿನ ಪ್ರಧಾನಿಯನ್ನಾಗಿ ಮಾಡಲು ಪಕ್ಷದ ಕಾರ್ಯಕರ್ತರು ಪಣ ತೊಡಬೇಕು’ ಎಂದು ಮುಖಂಡರು ಒಕ್ಕೊರಲಿನಿಂದ ಹೇಳಿದರು.

ನಗರದ ಅಮ್ಮಾರ್ ಪ್ಯಾಲೇಸ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಕಲಬುರ್ಗಿ ವಲಯ ಮಟ್ಟದ ಬಿಎಸ್‌ಪಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಸರ್ವಾಧಿಕಾರಿ ಧೋರಣೆಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಿತ್ತೆಸೆದು, ಮಾಯಾವತಿ ಅವರನ್ನು ಪ್ರಧಾನಿ ಮಾಡಲು ಹಗಲಿರುಳು ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ಬಿಎಸ್‌ಪಿ ರಾಜ್ಯ ಉಸ್ತುವಾರಿ ಡಾ.ಅಶೋಕಕುಮಾರ್ ಸಿದ್ಧಾರ್ಥ ಮಾತನಾಡಿ, ‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಸಂವಿಧಾನ ಬದಲಾಯಿಸುವ ಹೇಳಿಕೆ ನೀಡುತ್ತದೆ. ಹೀಗಾಗಿ ಇಂದು ಸಂವಿಧಾನ ಅಪಾಯದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾದರೂ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಆದ್ದರಿಂದ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಬೇಕು. ಮಾಯಾವತಿ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಶ್ರಮಿಸಬೇಕು’ ಎಂದು ಹೇಳಿದರು.

ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಪ್ರೊ.ಹರಿರಾಮ್ ಮಾತನಾಡಿ, ‘ಕರ್ನಾಟಕದಲ್ಲಿ ಕೇವಲ ಒಂದು ಸ್ಥಾನ ಗೆದ್ದು ಸಚಿವ ಸ್ಥಾನ ಪಡೆದಿದ್ದೇವೆ. 50 ಸೀಟುಗಳನ್ನು ಗೆದ್ದರೆ ಮುಖ್ಯಮಂತ್ರಿಯೇ ಆಗಬಹುದು. ಆದ್ದರಿಂದ ಪಕ್ಷದ ಕಾರ್ಯಕರ್ತರು ತಳಮಟ್ಟದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಬಿ.ವಾಸು ಮಾತನಾಡಿ, ‘ಹೈದರಾಬಾದ್ ಕರ್ನಾಟಕ ಮತ್ತು ಮುಂಬೈ ಕರ್ನಾಟಕದ 10 ಜಿಲ್ಲೆಗಳನ್ನು ಒಳಗೊಂಡ ಕಲಬುರ್ಗಿ ವಲಯಕ್ಕೆ ಮೂವರು ಉಸ್ತುವಾರಿಗಳನ್ನು ಪಕ್ಷ ನೇಮಿಸಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈ 10 ಜಿಲ್ಲೆಗಳಲ್ಲಿ ಗೆಲುವು ಸಾಧಿಸಲು ಕಾರ್ಯಕರ್ತರು ಶ್ರಮಿಸಬೇಕು’ ಎಂದರು.

ರಾಜ್ಯ ಸಂಯೋಜಕ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ, ರಾಷ್ಟ್ರೀಯ ಸಂಯೋಜಕ ವೀರಸಿಂಗ್, ರಾಷ್ಟ್ರೀಯ ಉಪಾಧ್ಯಕ್ಷ ಡಾ.ಜಯಪ್ರಕಾಶ ಸಿಂಗ್, ಕಲಬುರ್ಗಿ ವಲಯ ಉಸ್ತುವಾರಿ ಸೂರ್ಯಕಾಂತ ನಿಂಬಾಳಕರ್, ಬಾಗಲಕೋಟೆ ವಿಭಾಗದ ಉಸ್ತುವಾರಿ ವೈ.ಸಿ.ಕಾಂಬಳೆ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !