ಕೇಂದ್ರದ ವಿರುದ್ಧ ‘ಕ್ವಿಟ್‌ ಇಂಡಿಯಾ’ ಕೂಗು; ಹಲವರ ವಶ

7
ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಬೃಹತ್‌ ರ್‍ಯಾಲಿ ನಡೆಸಿದ ವಿವಿಧ ಸಂಘಟನೆಗಳು

ಕೇಂದ್ರದ ವಿರುದ್ಧ ‘ಕ್ವಿಟ್‌ ಇಂಡಿಯಾ’ ಕೂಗು; ಹಲವರ ವಶ

Published:
Updated:
Deccan Herald

ಕಲಬುರ್ಗಿ: ಕೇಂದ್ರ ಸರ್ಕಾರದ ವಿರುದ್ಧ ನಗರದಲ್ಲಿ ಗುರುವಾರ ‘ಕ್ವಿಟ್‌ ಇಂಡಿಯಾ’ ಚಳವಳಿ ನಡೆಸಿದ ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಹಾಗೂ ವಿವಿಧ ಸಂಘಟನೆಗಳ 30ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ದೇಶದ ನಾಗರಿಕರ ವಿರೋಧಿ ಧೋರಣೆ ಹೊಂದಿದ್ದ ಬ್ರಿಟಿಷ್‌ ಸರ್ಕಾರದ ವಿರುದ್ಧ ಆಗಸ್ಟ್‌ 8ರಂದು ಗಾಂಧೀಜಿ ಅವರು ‘ಕ್ವಿಟ್‌ ಇಂಡಿಯಾ’ ಚಳವಳಿ ಆರಂಭಿಸಿದ್ದರು. ಅದೇ ರೀತಿ, ಧೋರಣೆ ಹೊಂದಿದ ಈಗಿನ ಕೇಂದ್ರದ ಬಿಜೆಪಿ ಸರ್ಕಾರ ಭರತ ಬಿಟ್ಟು ತೊಲಗಬೇಕು’ ಎಂದು ಆಗ್ರಹಿಸಿ ಚಳವಳಿ ಆರಂಭಿಸಲಾಗಿದೆ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು.

ಇದಕ್ಕೂ ಮುನ್ನ ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು, ಅಂಗನವಾಡಿ ನೌಕರರ ಸಂಘ, ಗ್ರಾಮ ಪಂಚಾಯಿತಿ ನೌಕರರ ಸಂಘ, ದಲಿತ ಹಕ್ಕುಗಳ ಸಮಿತಿ, ಕಬ್ಬು ಬೆಳೆಗಾರರ ಸಂಘ, ಕಟ್ಟಡ ಕಾರ್ಮಿಕರ ಸಂಘ, ಬಿಎಸ್‌ಎನ್‌ಎಲ್‌ ನಾನ್ ಪರ್ಮನೆಂಟ್ ವರ್ಕರ್ಸ್ ಅಸೋಸಿಯೇಷನ್, ಕರ್ನಾಟಕ ರಾಜ್ಯ ಔಷಧಿ ಮಾರಾಟ ಪ್ರತಿನಿಧಿಗಳ ಸಂಘ, ರಾಜಶ್ರೀ ವರ್ಕರ್ಸ್ ಯೂನಿಯನ್, ಎಲ್ಐಸಿ ಏಜೆಂಟರ ಸಂಘದ ಕಾರ್ಯಕರ್ತರು ಬೃಹತ್‌ ರ್‍ಯಾಲಿ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಂದೆ ಕೆಲಕಾಲ ಧರಣಿ ನಡೆಸಿ, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ ಮೋದಿ ವಿರುದ್ಧ ಘೋಷಣೆ ಕೂಗಿದರು.

‘ಒಳ್ಳೆಯ ದಿನಗಳು ಬರಲಿವೆ ಎಂದು ಸುಳ್ಳು ಹೇಳಿದ ಮೋದಿ ದೇಶದ ಜನತೆಗೆ ಮೋಸ ಮಾಡಿದ್ದಾರೆ. ವಿದೇಶಿ ಬ್ಯಾಂಕುಗಳಲ್ಲಿರುವ ಲಕ್ಷಾಂತರ ಕೋಟಿ ಹಣವನ್ನು ದೇಶಕ್ಕೆ ತಂದು ಜನರ ಖಾತೆಗೆ ತಲಾ ₹ 15 ಲಕ್ಷ ಹಾಕುವುದಾಗಿ ಹೇಳಿದ ಮಾತು ಈಗ ಅವರಿಗೆ ನೆನಪೂ ಇಲ್ಲ’ ಎಂದು ಧರಣಿನಿರತರು ದೂರಿದರು.

‘ಡಾ.ಸ್ವಾಮಿನಾಥನ್‌ ವರದಿಯಂತೆ ರೈತರ ಬೆಳೆಗೆ ಅವರ ಒಟ್ಟು ಉತ್ಪಾದನಾ ವೆಚ್ಚಕ್ಕೆ ಶೇ 50ರಷ್ಟು ಲಾಭಾಂಶ ಸೇರಿಸಿ ಬೆಂಬಲ ಬೆಲೆ ನೀಡುವುದಾಗಿ ಹೇಳಿದ್ದರು. ಅದೂ ಸುಳ್ಳಾಯಿತು. ದೇಶದಾದ್ಯಂತ ನೀರಾವರಿ ಯೋಜನೆ ಜಾರಿ, ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಠಿ ಸೇರಿದಂತೆ ಪ್ರಧಾನಿ ನೀಡಿದ ಒಂದೂ ಭರವಸೆ ಈಡೇರಿಸಿಲ್ಲ’ ಎಂದು ಆಕ್ರೋಶ ಹೊರಹಾಕಿದರು.

‘ಇಡೀ ದೇಶ ಬಹುರಾಷ್ಟ್ರೀಯ ಕಂಪನಿಗಳು, ಭೂಮಾಲೀಕರು, ಬಂಡವಾಳಶಾಹಿಗಳ ಹಿಡಿತದಲ್ಲಿದೆ. ಈ ಹಿಂದಿನ ಯುಪಿಎ ಸರ್ಕಾರದ ಹಳಸಲು ಜಾಗತೀಕರಣದ ನೀತಿಗಳಿಗೆ ಮತ್ತಷ್ಟು ವೇಗ ನೀಡಿದ್ದ ಮಾತ್ರ ಮೋದಿ ಅವರ ಸಾಧನೆ. ಇದಕ್ಕಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದ ಸಂಪನ್ಮೂಲವನ್ನು ದೊಡ್ಡ ಪ್ರಮಾಣದಲ್ಲಿ ಕೊಳ್ಳೆ ಹೊಡೆಯಲಾಗುತ್ತಿದೆ. ಕೃಷಿ ಹಾಗೂ ಕಾರ್ಮಿಕ ಕ್ಷೇತ್ರ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿದೆ’ ಎಂದೂ ಆರೋಪಿಸಿದರು.

‘ಪೆಟ್ರೋಲ್‌, ಡಿಸೇಲ್‌, ಅಗತ್ಯವಸ್ತುಗಳ ಬೆಲೆ ದಿನೇದಿನೇ ಏರುತ್ತಲೇ ಇದೆ. ಸಾಲಬಾಧೆಯಿಂದ ರೈತರು, ಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದೇಶದ ಮೂಲೆಮೂಲೆಯಲ್ಲೂ ಪ್ರತಿಭಟನೆ– ಹಕ್ಕೊತ್ತಾಯದ ಹೋರಾಟ ನಡೆದಿವೆ. ಆದರೆ, ಪ್ರಧಾನಿ ಇದೆಲ್ಲವನ್ನೂ ಉಪೇಕ್ಷೆ ಮಾಡುತ್ತಿದ್ದಾರೆ. ಕಾರ್ಮಿಕರ ಕನಿಷ್ಠ ₹ 18,000 ವೇತನ ಜಾರಿ ಮಾಡಬೇಕೆಂಬ ಬೇಡಿಕೆಗೆ ಸ್ಪಂದಿಸಿಲ್ಲ. ಹೀಗಾಗಿ, ಈ ಸರ್ಕಾರ ದೇಶದಲ್ಲಿ ಇರಬಾರದು’ ಎಂದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷೆ ಶಾಂತಾ ಎನ್. ಘಂಟೆ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಗೌರಮ್ಮ ಪಾಟೀಲ, ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಪಾಂಡುರಂಗ ಮಾವಿನಕರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !